ಅದೇ ರಾಗ, ಅದೇ ಹಾಡು !

Update: 2026-08-17 08:42 IST

 ಪ್ರಧಾನಿ ಮೋದಿ

80ನೇ ಸ್ವಾತಂತ್ರ್ಯೋತ್ಸವದಂದು ದಿಲ್ಲಿಯ ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಸತತ 13ನೇ ಭಾಷಣ ಮಾಡಿದರು. 75 ನಿಮಿಷಗಳ ಈ ಭಾಷಣವನ್ನು ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಕಡಿಮೆ ಅವಧಿಯದ್ದೆಂದು ಹೇಳಲಾಗಿದೆ. 103 ನಿಮಿಷಗಳ ಕಳೆದ ಬಾರಿಯ ದಾಖಲೆ ಅವಧಿಯ ಭಾಷಣಕ್ಕಿಂತ ಇದು ತೀರಾ ಬೇರೆಯಾಗಿಯೇನೂ ಕಾಣದೆ, ಅವೇ ಹಳೆಯ ಮಾತುಗಳು, ಹಳೆಯ ಭರವಸೆಗಳನ್ನೇ ಹೊಸ ಪದಗಳಲ್ಲಿ ಇಟ್ಟಂತೆ ಕಂಡಿತು. ಕಳೆದ ಸಲ 100 ವರ್ಷಗಳ ನೆಪದಲ್ಲಿ ಆರೆಸ್ಸೆಸ್ ಅನ್ನು ವೈಭವೀಕರಿಸಲು ಭಾಷಣದ ದೊಡ್ಡ ಭಾಗವನ್ನು ಮೀಸಲಿಟ್ಟಿದ್ದರು. ಈ ಸಲ 150 ವರ್ಷಗಳು ತುಂಬಿದ ನೆಪದಲ್ಲಿ ವಂದೇ ಮಾತರಂ ಅನ್ನು ಕೆಂಪುಕೋಟೆಯ ಕಾರ್ಯಕ್ರಮದ ಭಾಗವಾಗಿ ಸೇರಿಸಲಾಯಿತು. ಹೊಸ ಸಂಕಲ್ಪತೊಟ್ಟು ಮುನ್ನಡೆಯೋಣ ಎಂದು ಮೋದಿ ಹೇಳಿದರೂ, ಅವರ ಭಾಷಣದಲ್ಲಿ ಮಾತ್ರ ಯಾವ ಹೊಸ ಸಂಕಲ್ಪಗಳೂ ಕಾಣಿಸಲಿಲ್ಲ. ಅದೇ 2047ರ ವಿಕಸಿತ ಭಾರತದ ಕಥೆ ಹೇಳಿದರು. ಆತ್ಮನಿರ್ಭರ ಎಂದರು. ಉತ್ಪಾದನೆ, ರೈತರು, ತಂತ್ರಜ್ಞಾನ, ಗತಿ ಶಕ್ತಿ, ರಕ್ಷಣಾ ಶಕ್ತಿ, ಹಸಿರು ಮತ್ತು ನೀಲಿ ಆರ್ಥಿಕತೆ ಹಾಗೂ ಸಾಫ್ಟ್ ಪವರ್ ಅನ್ನು ಭಾರತದ ಬೆಳವಣಿಗೆಯ ಸಪ್ತಧಾರೆ ಎಂದು ಕರೆದರು. ಮತ್ತಿದನ್ನು 2014ರಿಂದ ಪ್ರಧಾನಿಯಾಗಿರುವವರು ಹೇಳಿದಾಗ, ಇಷ್ಟು ವರ್ಷಗಳಲ್ಲಿ ಇವನ್ನೆಲ್ಲ ಏನೆಂದು ನೋಡಲಾಗಿತ್ತು ಎಂಬ ಪ್ರಶ್ನೆ ಉಳಿಯಿತು. ಆರ್ಥಿಕತೆಯ ಅಸಲಿಯತ್ತೇನು ಎಂಬುದು ಬಯಲಿಗೆ ಬರಲಿಲ್ಲ. ಯುವಕರು ಹೋರಾಟಕ್ಕಿಳಿಯಬೇಕಾಗಿ ಬಂದ ಸ್ಥಿತಿಗೆ ಕಳವಳವಿರಲಿಲ್ಲ. ಸಂಸತ್ತಿನಲ್ಲಿ ಚರ್ಚೆಗಳಿಲ್ಲದೆ ಮಸೂದೆಗಳನ್ನು ಅಂಗೀಕರಿಸುವಾಗ, ಪ್ರಜಾಪ್ರಭುತ್ವದ ಅವಸ್ಥೆ, ಸಂಸತ್ತಿನ ಘನತೆ ಏನಾಗಿದೆ ಎಂಬುದಕ್ಕೆ ಕಿಂಚಿತ್ ಪಶ್ಚಾತ್ತಾಪವಿರಲಿಲ್ಲ. ಸಾಧಿಸಿದ್ದೇವೆ ಎಂಬ ಭಾವನೆಯೇ ತುಂಬಿಕೊಂಡಂತಿದ್ದಲ್ಲಿ, ಸಾಧಿಸುವ ಹಾದಿಯ ಬಗೆಗಿನ ದೃಷ್ಟಿ ಚುರುಕಾಗಿರಲಿಲ್ಲ.

ಪರೀಕ್ಷಾ ವ್ಯವಸ್ಥೆ ಮಾತ್ರವಲ್ಲ, ಇಡೀ ಶಿಕ್ಷಣ ವ್ಯವಸ್ಥೆಯ ವಿರುದ್ಧವೇ ಯುವಜನತೆ ಸಿಡಿದು ನಿಂತಂಥ ಬೆಳವಣಿಗೆಗಳ ನಂತರದ ಈ ಭಾಷಣದಲ್ಲಿ ಮೋದಿ ಯುವಕರನ್ನು ಮತ್ತೊಮ್ಮೆ ಸೆಳೆಯಲು ನೋಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ತರಬೇತಿಯನ್ನು ಒದಗಿಸುವುದಾಗಿ ಘೋಷಿಸಿದರು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು. ಆದರೆ, ಅದೇ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಪರೀಕ್ಷಾ ಲೋಪಗಳ ಕಾರಣಕ್ಕೆ ತಮ್ಮ ಮಕ್ಕಳು ಕಂಗೆಡುವುದನ್ನು, ಸಾಯುವುದನ್ನು ನೋಡುತ್ತಿರುವುದರ ಬಗ್ಗೆ ಮೋದಿ ಮೌನ ಮುಂದುವರಿದಿತ್ತು. ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಎಐ ಕೌಶಲ್ಯ ತರಬೇತಿಯನ್ನು ನೀಡುವ ಬಗ್ಗೆ ಘೋಷಿಸುವಾಗ, ಎಐ ಓಟದಲ್ಲಿ ಭಾರತದ ಸ್ಥಾನವೆಲ್ಲಿದೆ ಎಂದು ಹೇಳುವುದನ್ನು ತಪ್ಪಿಸಿದರು. ತಾವೇ ನೀಡಿದ್ದ ಕೋಟಿಗಟ್ಟಲೆ ಉದ್ಯೋಗಗಳ ಭರವಸೆಯನ್ನು ಮರೆತವರು, ಈಗ ತರಬೇತಿಯ ಆಸೆ ತೋರಿಸುವ ಆಟಕ್ಕಿಳಿದಿರುವಂತೆ ಕಂಡರು. ತಮ್ಮನ್ನು ಬೆಂಬಲಿಸಿ ಅಧಿಕಾರಕ್ಕೇರಿಸಿದ್ದ ಯುವಕರು ಈ 12 ವರ್ಷಗಳಲ್ಲಿ ಹತಾಶರಾಗಿ ಸರಕಾರದ ವಿರುದ್ಧ ಆಕ್ರೋಶಗೊಂಡಾಗ, ಅವರನ್ನು ದಾರಿ ತಪ್ಪಿದ ಮಕ್ಕಳೆಂದ ಪ್ರಧಾನಿಯೇ ಈಗ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಯುವಕರ ನೆರವಿಗಾಗಿ ಯಾಚಿಸುತ್ತಿದ್ದರು.

ಈ ಸಲದ ಭಾಷಣದಲ್ಲಿ ಅವರು ಮತ್ತೊಂದು ಅದ್ಭುತ ಪದವೆಂಬಂತೆ ದಿಮಾಗಿ ನಕ್ಸಲ್ ಎಂಬುದನ್ನು ಬಳಸಿದರು. ಸಶಸ್ತ್ರ ನಕ್ಸಲಿಸಂ ಅನ್ನು ನಿರ್ಮೂಲನ ಮಾಡಲಾಗಿದ್ದರೂ, ದಿಮಾಗಿ ನಕ್ಸಲರು ಇನ್ನೂ ಉಳಿದಿದ್ದಾರೆ. ಸಮಾಜವನ್ನು ತಪ್ಪುದಿಕ್ಕಿಗೆ ಎಳೆಯಲು ವಿವಿಧ ದಾರಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಅಂಥವರನ್ನು ಗುರುತಿಸಿ, ಪ್ರತ್ಯೇಕಿಸಬೇಕು ಎಂದರು. ಈ ಮೂಲಕ ಮೋದಿಯವರು, ಪ್ರಶ್ನಿಸುವವರ ಬಗೆಗಿನ ತಮ್ಮ ಅಸಹನೆಯನ್ನೇ ತೋರಿಸಿಕೊಂಡರು. ಸೈದ್ಧಾಂತಿಕ ವಿರೋಧಿಗಳನ್ನು ನಗರ ನಕ್ಸಲರು, ದಿಮಾಗಿ ನಕ್ಸಲರು ಎನ್ನುವ ಈ ಮನಸ್ಥಿತಿ ಕೆಂಪುಕೋಟೆಯಿಂದ ಮಾತಾಡುವಾಗಲೂ ಹಿಂದಕ್ಕುಳಿಯಲಿಲ್ಲ ಎನ್ನುವುದು ವಿಷಾದಕರ ಮತ್ತು ಅಂಥ ಮನಸ್ಥಿತಿಯವರು ಅಭಿವೃದ್ಧಿಯ ಬಗ್ಗೆ ಅದೇ ಹಳಸಲು ಮಾತಾಡುತ್ತಿರುವುದು ಬೂಟಾಟಿಕೆ ಮಾತ್ರವಾಗಿ ಕಾಣಿಸುತ್ತದೆ. ಹಾಗಾಗಿಯೇ, ವಂದೇ ಮಾತರಂ ಮೊಳಗುತ್ತಿದೆ ಎಂದು ಅಂಥವರು ಹೇಳುವಾಗ, ಅದು ಒಗ್ಗೂಡಿಸುವ ಹಂಬಲವಾಗಿರದೆ, ಒಡೆಯುವ ಹುನ್ನಾರವಾಗಿ ಆತಂಕ ಮೂಡಿಸುತ್ತದೆ.

ಅಧಿಕಾರಕ್ಕೆ ಬಂದು 12 ವರ್ಷಗಳ ನಂತರವೂ, ಕನಸು ಕಾಣಿರಿ, ಸಣ್ಣ ಸಣ್ಣ ಕನಸುಗಳು ಸಾಕಾಗುವುದಿಲ್ಲ, ದೊಡ್ಡ ಕನಸು ಕಾಣಬೇಕು ಎಂದು ಹೇಳುವುದು ಮುಂದುವರಿದಿದೆ. ಆದರೆ ಹೊಸ ಭರವಸೆಗಳಿಲ್ಲದ, ಕಳಕಳಿಯಿಲ್ಲದ ಅವರ ಕೆಂಪುಕೋಟೆಯ ಭಾಷಣಗಳು ಕ್ಷುಲ್ಲಕ ರಾಜಕೀಯದ ಸುಳಿಗಳಲ್ಲಿ ಸಿಲುಕಿಕೊಂಡಿರುತ್ತವೆ. ಕಳೆದ ಸಲದ ಭಾಷಣದಲ್ಲಿ ಯುವಕರಿಗಾಗಿ ಒಂದು ಲಕ್ಷ ಕೋಟಿಯ ಯೋಜನೆಯನ್ನು ಮೋದಿ ಘೋಷಿಸಿದಾಗ, ರಾಹುಲ್ ಗಾಂಧಿಯವರು 1 ಲಕ್ಷ ಕೋಟಿ ಜುಮ್ಲಾ ಸೀಸನ್-2 ಎಂದು ಟೀಕಿಸಿದ್ದರು. ಅದು ಈಗಾಗಲೇ ಆರಂಭವಾಗಿ ವಿಫಲವಾಗಿರುವ ಯೋಜನೆ ಎಂದಿದ್ದರು. ಹೊಸದಾಗಿ ಹೇಳಲು ಏನೂ ಉಳಿದಿಲ್ಲ, ಹಳೆಯದಕ್ಕೇ ಹೊಸ ಹೆಸರು ಕೊಡಲಾಗುತ್ತಿದೆ ಎಂಬುದು ಖಚಿತವಾಗಿಯೇ ವರ್ಷಗಳು ಉರುಳಿವೆ. ಕನಸುಗಳನ್ನು ಕಾಣುತ್ತಲೇ ಇರಲು ಹೇಳುತ್ತ, ರಾಜಕೀಯ ಮಾಡಲಾಗುತ್ತಿದೆ.

ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುವಾಗಿನ ಕ್ಷಣ ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಬರುವಂಥದ್ದು ಎಂದು ನೆಹರೂ ಎ ಟ್ರಿಸ್ಟ್ ವಿತ್ ಡೆಸ್ಟಿನಿ ಎಂಬ, 1947 ಆಗಸ್ಟ್ 14ರ ಮಧ್ಯರಾತ್ರಿಯ ತಮ್ಮ ಪ್ರಸಿದ್ಧ ಭಾಷಣದಲ್ಲಿ ಹೇಳಿದ್ದರು. ಕೆಂಪುಕೋಟೆಯಲ್ಲಿ ನಿಂತಾಗಲೂ ತಮ್ಮ ಸರಕಾರದ ಬಗ್ಗೆ ಶಹಬ್ಬಾಸ್‌ಗಿರಿ ಕೊಟ್ಟುಕೊಳ್ಳುವವರು, ಎಲ್ಲದಕ್ಕೂ ಹಿಂದಿನ ಸರಕಾರಗಳನ್ನು ಜರೆಯುವವರು, ತಮ್ಮ ವೈಫಲ್ಯಗಳನ್ನು ಮರೆಮಾಚುವವರು ನೆಹರೂ ಹೇಳುವ ಆ ಅಪರೂಪದ ಘಳಿಗೆಯನ್ನು ಅರ್ಥ ಮಾಡಿಕೊಳ್ಳಲಾರರು. ಅಂಥವರ ಕೆಂಪುಕೋಟೆಯ ಭಾಷಣವೂ ಮತ್ತೊಂದು ಯಕಶ್ಚಿತ್ ಚುನಾವಣಾ ಭಾಷಣಕ್ಕೇ ಸೀಮಿತವಾಗುವುದು ದುರಂತ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News