ರಾಮನ ಹೆಸರಲ್ಲಿ ಉದ್ಯೋಗಕ್ಕೆ ಕತ್ತರಿ
Photo Credit : PTI
ಜುಲೈ ಒಂದರಿಂದ ದೇಶಾದ್ಯಂತ ವಿಬಿ- ಜಿ ರಾಮ್ ಐ ಜಾರಿಗೊಳ್ಳಲಿದೆ. ಅಂದರೆ ಅಂದು ಜಿ ರಾಮ್ ಜಿ ಹೆಸರಿನಲ್ಲಿ ಮಹಾತ್ಮ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಶವಪೆಟ್ಟಿಗೆಗೆ ಮೊದಲ ಮೊಳೆ ಹೊಡೆಯಲಾಗುತ್ತದೆ. ಜಿ ರಾಮ್ ಜಿಯನ್ನು ಶತಾಯಗತಾಯ ವಿರೋಧಿಸಿದ್ದ ಕರ್ನಾಟಕ ಸರಕಾರವೂ ಇದೀಗ ಬದಲಾವಣೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸುತ್ತಿದೆ. ವಿಬಿ -ಜಿ ರಾಮ್ ಜಿಯನ್ನು ಜು. 1ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಈಗಾಗಲೇ ಪ್ರಕಟಿಸಿದ್ದಾರೆ. ‘‘2006ರಿಂದ 2026ರವರೆಗೆ ಕೇಂದ್ರ ಸರಕಾರ ನರೇಗಾ ಅಡಿಯಲ್ಲಿ 56,492 ಕೋಟಿ ರೂ. ಭರಿಸಿದ್ದರೆ ರಾಜ್ಯ ಸರಕಾರ 4,821 ಕೋಟಿ ರೂ. ಭರಿಸಿ ಸುಮಾರು 182 ಕೋಟಿ ಮಾನವ ದಿನಗಳ ಉದ್ಯೋಗ ಒದಗಿಸಿತ್ತು. ಆದರೆ ಒಂದೇ ವರ್ಷಕ್ಕೆ 3,806 ಕೋಟಿ ರೂ. ವೆಚ್ಚ ಭರಿಸುವ ಸ್ಥಿತಿ ನಿರ್ಮಾಣವಾಗಲಿದೆ’’ ಎನ್ನುವುದನ್ನು ಈ ಸಂದರ್ಭದಲ್ಲಿ ಸಚಿವರು ಹೇಳಿಕೊಂಡಿದ್ದಾರೆ. ಇಷ್ಟೊಂದು ಹೊರೆಯನ್ನು ಭರಿಸುವ ಶಕ್ತಿ ರಾಜ್ಯಕ್ಕಿಲ್ಲ ಎನ್ನುವುದು ಗೊತ್ತಿದ್ದೂ ಅವರು ಅನಿವಾರ್ಯವಾಗಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ‘‘ಸಂಸತ್ತಿನಲ್ಲಿ ವಿಬಿ- ಜಿ ರಾಮ್ ಜಿ ಕಾಯ್ದೆ ತರುವ ಮುನ್ನ ಕೇಂದ್ರ ಸರಕಾರ ರಾಜ್ಯಗಳ ಸಲಹೆ ಪಡೆದಿಲ್ಲ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸರಕಾರ ಹಂತಹಂತವಾಗಿ ಕನಿಷ್ಠ 80ಃ20ರ ಅನುಪಾತದಲ್ಲಾದರೂ ರಾಜ್ಯಗಳ ನೆರವಿಗೆ ಬರಬೇಕು’’ ಎಂದು ರಾಜ್ಯ ಸಚಿವರು ಆಗ್ರಹಿಸಿದ್ದಾರೆ.
ವಿಬಿ -ಜಿ ರಾಮ್ ಜಿ ಕಾಯ್ದೆಯ ವಿರುದ್ಧ ರಾಜ್ಯ ತಳೆದಿದ್ದ ನಿರ್ಧಾರ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದು ರಾಜ್ಯಪಾಲರು ಮತ್ತು ಸರಕಾರದ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು. ಈ ಕಾಯ್ದೆಯ ವಿರುದ್ಧ ರಾಜ್ಯ ಸರಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದುವುದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದರು. ಭಾಷಣದ ಮೊದಲ ಒಂದೆರಡು ಸಾಲುಗಳನ್ನು ಓದಿ, ಅರ್ಧದಲ್ಲೇ ಭಾಷಣವನ್ನು ನಿಲ್ಲಿಸಿ ಹೊರಟು ಹೋದರು. ರಾಜ್ಯಪಾಲರ ಈ ವರ್ತನೆ ತೀವ್ರ ಟೀಕೆಗಳಿಗೆ ಕಾರಣವಾಗಿತ್ತು. ನೆರೆಯ ತಮಿಳು ನಾಡು, ಕೇರಳ ಕೂಡ ವಿಬಿ ಜಿ ರಾಮ್ ಜಿ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿ ದ್ದವು. ಆದರೆ ಕೇಂದ್ರ ಸರಕಾರ ರಾಜ್ಯಪಾಲರನ್ನು ಬಳಸಿಕೊಂಡು ಆಕ್ರೋಶವನ್ನು ದಮನಿಸುವ ಪ್ರಯತ್ನ ನಡೆಸಿತು. ವಿಪರ್ಯಾಸವೆಂದರೆ ರಾಜ್ಯಕ್ಕೆ ಹೊರೆ ಬೀಳುವ ಈ ಕಾಯ್ದೆಯನ್ನು ಬಿಜೆಪಿಯ ಸಂಸದರೂ ವಿರೋಧಿಸಬೇಕಾಗಿತ್ತು. ಹೇಗೆ ಇದು ರಾಜ್ಯದ ಬೊಕ್ಕಸದ ಮೇಲೆ ಹೊರೆಯನ್ನು ಹಾಕುತ್ತದೆ ಮಾತ್ರವಲ್ಲ, ಕಾರ್ಮಿಕರ ಕೆಲಸದ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಎನ್ನುವುದನ್ನು ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಬೇಕಾಗಿತ್ತು. ಆದರೆ ಅವರು ಕೇಂದ್ರದ ವಕಾಲತು ವಹಿಸಿ ರಾಜ್ಯದ ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿದರು.
ಹೊಸ ಕಾನೂನು ಒಂದೇ ಬಾಣದಲ್ಲಿ ಹಲವು ಹಣ್ಣುಗಳನ್ನು ಉದುರಿಸುವ ದುರುದ್ದೇಶವನ್ನು ಹೊಂದಿದೆ. ಮುಖ್ಯವಾಗಿ ಯುಪಿಎ ಸರಕಾರ ಜಾರಿಗೆ ತಂದ ಮಹಾತ್ಮ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಈಗಾಗಲೇ ಜಾಗತಿಕವಾಗಿ ಪ್ರಶಂಸೆಗೆ ಒಳಗಾಗಿತ್ತು. ಕೊರೋನ ಕಾಲದಲ್ಲಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಕಾರ್ಮಿಕರಿಗೆ ಈ ಮನರೇಗಾ ಯೋಜನೆ ಉದ್ಯೋಗಳನ್ನು ನೀಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯಿಂದ ಜನರನ್ನು ರಕ್ಷಿಸುವಲ್ಲಿ ಈ ಯೋಜನೆಯ ಪಾತ್ರ ದೊಡ್ಡದಿದೆ ಎಂದು ವಿಶ್ವಸಂಸ್ಥೆಯೇ ಬಣ್ಣಿಸಿತ್ತು. ಆರಂಭದಲ್ಲಿ ಈ ಯೋಜನೆಯನ್ನು ಟೀಕಿಸಿದ್ದ ಬಿಜೆಪಿಯೇ ಅಧಿಕಾರಕ್ಕೆ ಬಂದ ಬಳಿಕ ಪ್ರೋತ್ಸಾಹಿಸಿತ್ತು. ಈ ಯೋಜನೆಯ ಜನಪ್ರಿಯತೆ ಮೋದಿ ಸರಕಾರದ ಕಣ್ಣು ಕುಕ್ಕಿತ್ತು. ಆದುದರಿಂದಲೇ ಅದರ ಹೆಸರನ್ನು ಬದಲಾಯಿಸಿ ತನ್ನದೇ ಹೊಸ ಯೋಜನೆಯೊಂದನ್ನು ಘೋಷಿಸುವುದಕ್ಕೆ ಮುಂದಾಯಿತು. ಇದೇ ಸಂದರ್ಭದಲ್ಲಿ ಗಾಂಧೀಜಿಯ ಹೆಸರನ್ನು ಕಿತ್ತು ರಾಮನ ಹೆಸರನ್ನು ನೀಡಿತು. ನೂತನ ಕಾಯ್ದೆ ಕಾರ್ಮಿಕರ ಹಲವು ಹಕ್ಕುಗಳನ್ನು ಕಿತ್ತುಕೊಂಡಿದೆ. ಆದರೆ ಅವೆಲ್ಲವನ್ನೂ ರಾಮನ ಹೆಸರಿನಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ. ನೂತನ ಕಾಯ್ದೆಗೆ ರಾಮನ ಹೆಸರಿಟ್ಟಿರುವುದೇ ವಿರೋಧಿಗಳ ಆಕ್ರೋಶಕ್ಕೆ ಕಾರಣ ಎಂದು ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದೆ. ರಾಜ್ಯಗಳ ತೆರಿಗೆ ಹಣವನ್ನು ಸೂರೆಗೈಯುತ್ತಿರುವ ಕೇಂದ್ರ ಸರಕಾರ, ಇದೀಗ ಜಿ ರಾಮ್ ಜಿ ಹೆಸರಿನಲ್ಲಿ ಇನ್ನಷ್ಟು ಆರ್ಥಿಕ ಹೊರೆಯನ್ನು ತೆಗೆದು ರಾಜ್ಯಗಳ ಮೇಲೆ ಹಾಕಲು ಮುಂದಾಗಿದೆ.
ನರೇಗಾ ಯೋಜನೆಯ ಕಾರ್ಮಿಕರ ಉದ್ಯೋಗಗಳನ್ನು ಹಂತ ಹಂತವಾಗಿ ಇಳಿಸುವ ಸಂಚಿನ ಭಾಗವಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಇಲ್ಲಿಯವರೆಗೆ ಕಾಮಗಾರಿ ಎಲ್ಲಿ, ಯಾವಾಗ ಅನುಷ್ಠಾನ ಮಾಡಬೇಕು ಎನ್ನುವುದರಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ದೊಡ್ಡದಿತ್ತು. ಇದೀಗ ಸ್ಥಳೀಯ ಸಂಸ್ಥೆಯ ಅಧಿಕಾರವನ್ನು ಕಿತ್ತುಕೊಂಡಿದೆ. ರಾಜ್ಯಗಳಿಗೆ ನೀಡುವ ಅನುದಾನದ ಮೊತ್ತವನ್ನು ಪ್ರತಿವರ್ಷ ತಾನೇ ಮುಂಚಿತವಾಗಿ ನಿರ್ಧರಿಸಲಿದ್ದು, ಕೂಲಿ ನೀಡಿಕೆಯು ಅನುದಾನದ ಲಭ್ಯತೆಯ ಆಧಾರದಲ್ಲಿ ಮುಂದುವರಿಯಲಿದೆ. ಈಗಾಗಲೇ ಹಲವು ರಾಜ್ಯಗಳಿಗೆ ಮನರೇಗಾದ ಕೂಲಿಯ ಕೋಟ್ಯಂತರ ಹಣವನ್ನು ಕೇಂದ್ರ ಸರಕಾರ ಬಾಕಿ ಉಳಿಸಿದೆ. ಸರಿಯಾದ ಸಮಯಕ್ಕೆ ಕೂಲಿವಾಪತಿಯಾಗುವುದಿಲ್ಲ ಎನ್ನುವ ಕಾರಣಕ್ಕೆ ಕಾರ್ಮಿಕರು ಮನರೇಗಾ ಯೋಜನೆಗೆ ಹೆಸರು ದಾಖಲಿಸುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಇದನ್ನೇ ಮುಂದಿಟ್ಟು ‘ಗ್ರಾಮೀಣ ಪ್ರದೇಶದಲ್ಲಿ ನರೇಗಾದ ಬಗ್ಗೆ ಉತ್ಸಾಹ ಪ್ರದರ್ಶಿಸುತ್ತಿಲ್ಲ’ ಎಂದು ಲೋಕಸಭೆಯಲ್ಲಿ ಹೇಳಿಕೊಂಡಿತ್ತು. ಉದ್ಯೋಗಾಕಾಂಕ್ಷಿಗಳ ಅಂಕಿ ಸಂಕಿಗಳ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿ, ನರೇಗಾಕ್ಕೆ ಆರ್ಥಿಕ ಬೆಂಬಲವನ್ನು ನೀಡದೇ ಇರುವುದನ್ನು ಸಮರ್ಥಿಸಿಕೊಂಡಿತ್ತು. ನೂತನ ವಿಬಿ -ಜಿ ರಾಮ್ ಜಿ ಕಾಯ್ದೆ ಜಾರಿಗೊಳ್ಳುವ ಸಂದರ್ಭದಲ್ಲಿ ಬಾಕಿ ಉಳಿಸಿದ ಹಣದ ಗತಿಯೇನು ಎನ್ನುವುದರ ಬಗ್ಗೆ ಕೇಂದ್ರದಿಂದ ಯಾವುದೇ ಸ್ಪಷ್ಟನೆಯಿಲ್ಲ.
ಈಗಾಗಲೇ ಕೇಂದ್ರದ ನಿರ್ಧಾರದ ವಿರುದ್ಧ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೂ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿವೆ. ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್ ರಾಜ್ಯಗಳು ಹೊಸ ನಿಧಿ ಹಂಚಿಕೆ ಮಾದರಿಯನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿವೆ. ಉತ್ತರಾಖಂಡ ಸರಕಾರವಂತೂ ಪೂರ್ಣ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಬೇಕು ಎಂದು ಕೋರಿದೆ. ಬಿಹಾರವು ದಿನಗೂಲಿಯನ್ನು 255 ರೂ. ನಿಂದ 413 ರೂ.ಗೆ ಹೆಚ್ಚಿಸಲು ಕೋರಿದ್ದರೆ, ಜಮ್ಮು ಮತ್ತು ಕಾಶ್ಮೀರವು 272 ರೂ. ನಿಂದ 311 ರೂಗೆ ಹೆಚ್ಚಿಸಬೇಕು ಎಂದು ಕೇಳಿಕೊಂಡಿದೆ. ಜಾರ್ಖಂಡ್ ಮತ್ತು ಪಂಜಾಬ್ ಸರಕಾರಗಳೂ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿವೆ. ಆದರೆ ಇವೆಲ್ಲ ಆಗ್ರಹ, ಆಕ್ಷೇಪಗಳಿಗೆ ಕೇಂದ್ರ ಸರಕಾರ ಜಾಣ ಕಿವುಡು ಪ್ರದರ್ಶಿಸಿ ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ. ಅಂದರೆ ಕೇಂದ್ರ ಸರಕಾರದ ಅಂತಿಮ ಉದ್ದೇಶ ಉದ್ಯೋಗ ಖಾತರಿಯಲ್ಲ, ಉದ್ಯೋಗಗಳಿಗೆ ಕತ್ತರಿ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ರಾಮನ ಕೈಗೆ ಕತ್ತರಿ ಕೊಟ್ಟು ಗ್ರಾಮೀಣ ಕಾರ್ಮಿಕರ ಉದ್ಯೋಗಗಳಿಗೆ ಸಂಚಕಾರ ತರಲು ಕೇಂದ್ರ ಹೊರಟಿದೆ.