×
Ad

ಈ ‘ವಿಜಯ’ ಎಲ್ಲಿಯವರೆಗೆ?

Update: 2026-05-15 06:43 IST

  ತಮಿಳುನಾಡು ಮುಖ್ಯಮಂತ್ರಿ ವಿಜಯ್ Photo : PTI

ವಿಶ್ವಾಸ ಮತದ ಬಿಲ್ಲನ್ನು ಹೂವಿನಂತೆ ಎತ್ತಿ ತಮಿಳುನಾಡನ್ನು ವರಿಸಿದ್ದಾರೆ ಟಿವಿಕೆ ನಾಯಕ, ಮುಖ್ಯಮಂತ್ರಿ ವಿಜಯ್. ಯಾವ ಆಪರೇಷನ್‌ಗಳಿಲ್ಲದೆಯೇ ಎಡಿಎಂಕೆಯ 25 ಶಾಸಕರ ಬೆಂಬಲವನ್ನು ಅವರು ಕೊನೆಯ ಕ್ಷಣದಲ್ಲಿ ತನ್ನದಾಗಿಸಿಕೊಂಡಿದ್ದಾರೆ. ಫಲಿತಾಂಶ ಹೊರ ಬಿದ್ದ ಬೆನ್ನಿಗೇ ರಾಜ್ಯಪಾಲರು ನಡೆಸಿಕೊಂಡ ರೀತಿಯಿಂದಾಗಿ, ಟಿವಿಕೆಗೆ ಎಡಿಎಂಕೆ ಬೆಂಬಲವನ್ನು ಪಡೆದು ಸರಕಾರ ರಚನೆ ಮಾಡುವುದು ಅನಿವಾರ್ಯವಾಗುತ್ತದೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಡಿಎಂಕೆಯ ಜೊತೆಗಿದ್ದ ಕಾಂಗ್ರೆಸ್, ಸಿಪಿಐ, ಸಿಪಿಎಂ, ಐಯುಎಂಎಲ್ ವಿಸಿಕೆಯ ಶಾಸಕರು ಟಿವಿಕೆಗೆ ಬೆಂಬಲವನ್ನು ಘೋಷಿಸಿ ವಿಶ್ವಾಸ ಮತ ಯಾಚನೆಗಿರುವ ಅಡ್ಡಿಯನ್ನು ನಿವಾರಿಸಿದರು. ಟಿವಿಕೆ ಸರಕಾರ ರಚನೆಯ ಹಾದಿ ಸುಗಮವಾಯಿತು ಎನ್ನುವಷ್ಟರಲ್ಲಿ ಎಡಿಎಂಕೆ ವಿಭಜನೆಯಾಗಿ, 25 ಬಂಡಾಯ ಶಾಸಕರು ತಮ್ಮ ಬೆಂಬಲವನ್ನು ವಿಜಯ್‌ಗೆ ಘೋಷಿಸಿದ್ದಾರೆ. ಎಡಿಎಂಕೆಯ ಅಧಿಕೃತ ಸಹವಾಸವನ್ನು ಮಾಡಿದರೆ ಅದರ ಜೊತೆ ಜೊತೆಗೇ ಬಿಜೆಪಿ ಎನ್ನುವ ಮುಳ್ಳಿನ ಬಳ್ಳಿಯೂ ಟಿವಿಕೆಯನ್ನು ಸುತ್ತಿಕೊಳ್ಳುತ್ತಿತ್ತು. ಇದೀಗ ಬಿಜೆಪಿಯ ಸಹವಾಸ ಮಾಡಿರುವ ಎಡಿಎಂಕೆಯನ್ನು ಒಡೆದು ಹಂಸಕ್ಷೀರ ನ್ಯಾಯ ಎನ್ನುವಂತೆ ತನಗೆ ಬೇಕಾದಷ್ಟನ್ನು ಟಿವಿಕೆ ಸ್ವೀಕರಿಸಿದಂತಾಗಿದೆ. ಆದರೆ ಈ ಗೆಲುವು ವಿಜಯ್ ನೇತೃತ್ವದ ಸರಕಾರವನ್ನು ಎಲ್ಲಿಯವರೆಗೆ ಕಾಪಾಡುತ್ತದೆ ಎನ್ನುವುದನ್ನು ಕಾದುನೋಡಬೇಕು.

ಹೊಸ ಅಗಸ ಕೆಲಸದ ಆರಂಭದ ದಿನ ಗೋಣಿ ಚೀಲವನ್ನು ಎತ್ತಿ ಎತ್ತಿ ಒಗೆದ ಎನ್ನುವಂತೆ, ಅಧಿಕಾರಕ್ಕೇರಿದ ಬೆನ್ನಿಗೇ ಮುಖ್ಯಮಂತ್ರಿ ವಿಜಯ್ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್‌ಗಳನ್ನು ಘೋಷಿಸಿರುವುದು, ಧಾರ್ಮಿಕ ಸ್ಥಳ, ಶಾಲೆಗಳ ಸಮೀಪ ಇರುವ 717ಮದ್ಯದಂಗಡಿಗಳನ್ನು ಮುಚ್ಚಲು ಆದೇಶ ನೀಡಿರುವುದು ಮುಖ್ಯಮಂತ್ರಿಯಾಗಿ ವಿಜಯ್ ತೆಗೆದುಕೊಂಡಿರುವ ಮಹತ್ವದ ನಿರ್ಧಾರಗಳೇ ಸರಿ. ತಮಿಳುನಾಡಿಗೆ ಇಂತಹ ಜನಪ್ರಿಯ ಯೋಜನೆಗಳು ಹೊಸತೇನೂ ಅಲ್ಲ. ಈ ನಿರ್ಧಾರವನ್ನು ತೆಗೆದುಕೊಳ್ಳುವುದು ವಿಜಯ್ ಪಾಲಿಗೆ ಅಷ್ಟು ದೊಡ್ಡ ಸವಾಲಿನ ವಿಷಯವೇ ಅಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವ ದ ಸರಕಾರ ಜಾರಿಗಿಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿಯ ಬಳಿಕ ಆ ಮಾದರಿಯನ್ನು ಹಲವು ರಾಜ್ಯಗಳು ಅನುಸರಿಸಿದ್ದವು. ಆದರೆ ಇತ್ತ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳು ಸಿದ್ದರಾಮಯ್ಯ ಸರಕಾರದ ಪಾಲಿಗೆ ಗಂಟಲಲ್ಲಿ ಇಳಿಯದ ಕಡುಬಿನಂತಾಗಿ ಬಿಟ್ಟಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಈ ಯೋಜನೆಗಳಿಂದಾಗಿ ಹಣದ ಕೊರತೆ ಎದುರಾಗಿದೆ ಎನ್ನುವ ಆರೋಪಗಳಿವೆ. ಸರಕಾರದೊಳಗಿರುವ ಹಲವು ನಾಯಕರೇ ಈ ಗ್ಯಾರಂಟಿಗಳ ಬಗ್ಗೆ ತಕರಾರು ವ್ಯಕ್ತಪಡಿಸಿದ್ದಾರೆ. ವಿಜಯ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮಿಳು ಜನರಿಗೆ ನೀಡಿರುವ ಭರವಸೆಗಳು ಕರ್ನಾಟಕದ ಪಂಚ ಗ್ಯಾರಂಟಿಗಳಿಗಿಂತ ಭಾರವಾದವುಗಳು. ಅದುವೇ ವಿಜಯ್ ಸರಕಾರದ ಕೊರಳಿಗೆ ಕಟ್ಟಿದ ಗುಂಡುಕಲ್ಲುಗಳಾದರೆ ಅಚ್ಚರಿಯಿಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಹೇಗೆ ಈಡೇರಿಸುತ್ತಾರೆ ಎನ್ನುವುದರ ಆಧಾರದಲ್ಲಿ ಅವರ ಸರಕಾರದ ಅಳಿವು ಉಳಿವು ನಿಂತಿದೆ. ಅಧಿಕಾರಕ್ಕೇರಿದ ಬೆನ್ನಿಗೇ ‘ಖಜಾನೆ ದಿವಾಳಿಯಾಗಿದೆ’ ಎಂದು ಅವರು ಉದ್ಗಾರ ತೆಗೆದಿರುವುದು, ಪ್ರಣಾಳಿಕೆಯ ಅನುಷ್ಠಾನಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನಿಗೆ ಸಲ್ಲಿಸಿದ ಅರ್ಜಿಯೇ ಎಂದು ಜನರು ಈಗಾಗಲೇ ಸಂಶಯ ಪಡುತ್ತಿದ್ದಾರೆ.

ಅಧಿಕಾರಕ್ಕೇರಿದ ಬೆನ್ನಿಗೇ ಖಾಸಗಿ ಜ್ಯೋತಿಷಿ ರಾಧನ್ ಪಂಡಿತ ವೆಟ್ರಿವೇಲ್ ಅವರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿರುವ ವಿಜಯ್ ಅವರ ಅವಿವೇಕ ತೀವ್ರ ಟೀಕೆಗೆ ಗುರಿಯಾಗಿತ್ತು. ವಿಜಯ್ ಅವರ ರಾಜಕೀಯ ಪ್ರಬುದ್ಧತೆಯ ಬಗ್ಗೆ ತಮಿಳರು ಅನುಮಾನ ಪಡುವಂತೆ ಮಾಡಿತ್ತು. ವಿರೋಧ ಪಕ್ಷದ ವ್ಯಂಗ್ಯ, ಟೀಕೆ ತಾರಕಕ್ಕೇರಿದಂತೆಯೇ ಈ ನೇಮಕವನ್ನು ವಿಜಯ್ ಹಿಂದೆಗೆದರು. ಜ್ಯೋತಿಷಿಯೊಬ್ಬನ ಈ ನೇಮಕ ಏನನ್ನು ಸೂಚಿಸುತ್ತದೆ? ತನಗೆ ಸಿಕ್ಕಿದ ಗೆಲುವನ್ನು ಅವರು ಒಬ್ಬ ಜ್ಯೋತಿಷಿಯ ಮಡಿಲಿಗೆ ಹಾಕಿದಂತಾಗಲಿಲ್ಲವೆ? ಇದು ತನ್ನನ್ನು ನಂಬಿ ಮತ ಹಾಕಿದ ಜನರಿಗೆ ಬಗೆದ ದ್ರೋಹವಲ್ಲವೆ? ಡಿಎಂಕೆಯ ಆಡಳಿತದಿಂದ ಬೇಸತ್ತ ಜನರು ಬಿಜೆಪಿಯೊಂದಿಗೆ ಮುಕ್ತವಾಗಿ ಕೈಜೋಡಿಸಿದ ಎಡಿಎಂಕೆಯನ್ನು ಬದಿಗಿಟ್ಟು ಬರೇ ಎರಡು ವರ್ಷಗಳ ಹಿನ್ನೆಲೆಯಿರುವ ಟಿವಿಕೆಯಲ್ಲಿ ಪರ್ಯಾಯವನ್ನು ಕಂಡರು. ವಿಜಯ್‌ರ ಸಿನಿಮೀಯ ಮಾತುಗಳನ್ನು ನಂಬಿದರು. ಆದರೆ ವಿಜಯ್ ಅವರು ತನ್ನ ಗೆಲುವಿಗೆ ಒಬ್ಬ ಜ್ಯೋತಿಷಿಯ ಬಲ ಕಾರಣವೆಂದು ನಂಬಿ ಕೂತಿದ್ದಾರೆ. ಈ ನಂಬಿಕೆಯನ್ನು ನೆಚ್ಚಿಕೊಂಡು ಅವರು ಮುಂದೆ ಹೆಜ್ಜೆಯಿಟ್ಟದ್ದೇ ಆದರೆ, ಅದೇ ಜ್ಯೋತಿಷಿಗಳು ಒಂದು ದಿನ ಟಿವಿಕೆಯನ್ನು ಬಿಜೆಪಿಯೆನ್ನುವ ಮೊಸಳೆಯ ಬಾಯಿಗೆ ಒಪ್ಪಿಸುವುದರಲ್ಲಿ ಸಂಶಯವಿಲ್ಲ. ವಿಪರ್ಯಾಸವೆಂದರೆ, ಒಂದೆಡೆ ಜ್ಯೋತಿಷಿಯನ್ನು ಮುಖ್ಯ ಸಲಹೆಗಾರನನ್ನಾಗಿಸಿಕೊಂಡ ಇದೇ ವಿಜಯ್ ಮತ್ತೊಂದೆಡೆ ಪೆರಿಯಾರ್, ಕಾರ್ಲ್‌ಮಾರ್ಕ್ಸ್ , ಅಂಬೇಡ್ಕರ್ ಪ್ರತಿಮೆಗಳಿಗೆ ಕೈ ಮುಗಿದು ಹೂಹಾರ ಹಾಕಿ ಗೌರವ ಸಲ್ಲಿಸಿದ್ದಾರೆ. ದ್ರಾವಿಡ ಚಿಂತನೆಗಳ ತಳಹದಿಯಲ್ಲಿ ಅವರ ರಾಜಕೀಯ ಚಿಂತನೆ ರೂಪುಗೊಂಡಿದ್ದು ನಿಜವೇ ಆಗಿದ್ದರೆ ಈ ವಿರೋಧಾಭಾಸಗಳ ನಡೆಗೆ ಅವಕಾಶವೇ ಇರುತ್ತಿರಲಿಲ್ಲ. ರಾಜಕೀಯ ಎಂದರೆ ಸಿನೆಮಾದ ಜನಪ್ರಿಯ ಡೈಲಾಗ್‌ಗಳು ಎಂದು ವಿಜಯ್ ಭಾವಿಸಿದರೆ ಅವರಿಗೆ ದೊರಕಿರುವ ಈ ಯಶಸ್ಸಿನ ಸಂಭ್ರಮ ಬಹಳ ಸಮಯ ಉಳಿಯುವುದಿಲ್ಲ.

ವಿಜಯ್ ಅವರ ಸೈದ್ಧಾಂತಿಕ ಗೊಂದಲಗಳನ್ನು ಗುರುತಿಸಿರುವ ಡಿಎಂಕೆಯ ಯುವ ನಾಯಕ ಉದಯ ನಿಧಿ ಸ್ಟಾಲಿನ್ ಈ ಕಾರಣಕ್ಕೆ ಸದನದಲ್ಲಿ ಮತ್ತೊಮ್ಮೆ ‘ಸನಾತನ ಧರ್ಮ’ದ ವಿರುದ್ಧ ಗುಡುಗಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದ್ರಾವಿಡ ರಾಜಕೀಯದ ಅಧಿಕೃತ ವಾರಸುದಾರ ತಾನು ಎನ್ನುವುದನ್ನು ಅವರು ತಮಿಳು ನಾಡಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿರುವ ಗ್ಯಾರಂಟಿಗಳ ಭರವಸೆಗಳನ್ನು ನಿಭಾಯಿಸಲು ಇಂದು ಮುಖ್ಯಮಂತ್ರಿ ವಿಜಯ್‌ಗೆ ಅತ್ಯುತ್ತಮ ಆರ್ಥಿಕ ಸಲಹೆಗಾರನ ಅಗತ್ಯವಿದೆಯೇ ಹೊರತು ಜ್ಯೋತಿಷಿಯಲ್ಲ. ಹಾಗೆಯೇ ಟಿವಿಕೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೃತಪಟ್ಟ 40 ಮಂದಿಯನ್ನು ಅಧಿಕಾರಕ್ಕೇರಿದ ಸಂದರ್ಭದಲ್ಲಿ ನೆನೆದುಕೊಳ್ಳುವುದೂ ಅತ್ಯಗತ್ಯವಾಗಿತ್ತು. ಅಧಿಕಾರದ ಕಡೆಗೆ ಇಟ್ಟ ಅವರ ಹೆಜ್ಜೆ ಗುರುತುಗಳಲ್ಲಿ ಈ 40 ಮಂದಿ ಅಮಾಯಕರ ರಕ್ತ ಅಂಟಿಕೊಂಡಿದೆ ಎನ್ನುವುದನ್ನು ಅವರು ಮರೆಯಬಾರದು.

ಕೇಂದ್ರದ ಸರ್ವಾಧಿಕಾರದ ವಿರುದ್ಧ ಕರ್ನಾಟಕ ಧ್ವನಿಯೆತ್ತಿದಾಗಲೆಲ್ಲ ನಮ್ಮ ಜೊತೆಗೆ ನೆರೆಯ ತಮಿಳು ನಾಡು ಮತ್ತು ಕೇರಳ ಸದಾ ಜೊತೆ ನಿಂತಿದೆ. ಪ್ರಾದೇಶಿಕ ಹಿತಾಸಕ್ತಿಗೆ ಬದ್ಧವಾದ ಸರಕಾರ ಅಲ್ಲಿ ಗಟ್ಟಿಯಾದರೆ ಅದರಿಂದ ಕರ್ನಾಟಕಕ್ಕೂ ಬಲ ಬಂದಂತೆ. ಕರ್ನಾಟಕದಲ್ಲಿ ಸರಕಾರ ರಚಿಸಲು ಬಿಜೆಪಿ ಯಶಸ್ವಿಯಾಗಿದ್ದರೂ ಕೇರಳ, ತಮಿಳುನಾಡಿನಲ್ಲಿ ಬಾಲ ಬಿಚ್ಚುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲಿನ ಪ್ರಾದೇಶಿಕ ಚಿಂತನೆಗಳಿಗೆ ಬದ್ಧನಾಗಿ ಮುನ್ನಡೆಯುವ ಶಕ್ತಿ ವಿಜಯ್‌ಗೆ ಎಷ್ಟರಮಟ್ಟಿಗೆ ಇದೆ ಎನ್ನುವ ಆಧಾರದಲ್ಲಿ ಅವರ ಬೆಳವಣಿಗೆ ನಿಂತಿದೆ. ಇಲ್ಲದೇ ಇದ್ದರೆ ದಿಲ್ಲಿಯಲ್ಲಿ ಆಪ್ ನಾಯಕರನ್ನು ಬಲಿತೆಗೆದುಕೊಂಡಂತೆ ಬರೇ ಒಂದೆರಡು ಈ.ಡಿ. ದಾಳಿಗಳಿಗೆ ವಿಜಯ್ ತನ್ನ ಬಿಲ್ಲು ಬಾಣವನ್ನು ಕೆಳಗಿಟ್ಟು ಕೇಂದ್ರಕ್ಕೆ ಶರಣಾಗತರಾಗುವ ಸ್ಥಿತಿ ನಿರ್ಮಾಣವಾಗಬಹುದು. ಅದು ಬರೇ ತಮಿಳು ನಾಡಿಗೆ ಮಾತ್ರವಲ್ಲ ದಕ್ಷಿಣ ಭಾರತಕ್ಕೇ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News