×
Ad

ತೃಣಮೂಲವನ್ನು ಸೋಲಿಸಿದ ಮಮತಾ

Update: 2026-06-12 08:36 IST

ಮಮತಾ ಬ್ಯಾನರ್ಜಿ | Photo Credit : PTI

ಸುಮಾರು 15 ವರ್ಷ ಪಶ್ಚಿಮ ಬಂಗಾಳದಲ್ಲಿ ಸಿಪಿಎಂ, ಬಿಜೆಪಿ, ಕಾಂಗ್ರೆಸ್‌ಗೆ ಸೆಡ್ಡು ಹೊಡೆದು, ಸರಕಾರ ನಡೆಸಿದ ತೃಣಮೂಲ ಕಾಂಗ್ರೆಸ್ ಎದುರಾದ ಮೊದಲ ಸೋಲಿಗೇ ತತ್ತರಿಸಿ ಕೂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 80 ಸ್ಥಾನಗಳನ್ನು ತನ್ನದಾಗಿಸಿಕೊಂಡಿತು. ಟಿಎಂಸಿಯ ಪಾಲಿಗೆ ಇದು ಹೀನಾಯ ಸೋಲೇ ಆಗಿರಬಹುದು. ಬಿಜೆಪಿ ಶೇ. 46.24ರಷ್ಟು ಮತಗಳನ್ನು ಪಡೆದಿದ್ದರೆ, ಟಿಎಂಸಿ ಶೇ. 41.18ರಷ್ಟು ಮತಗಳನ್ನು ಕಳೆದ ಚುನಾವಣೆಯಲ್ಲಿ ತನ್ನದಾಗಿಸಿಕೊಂಡಿತು. ಈ ಸೋಲಿನಿಂದ ಟಿಎಂಸಿ ಅದರಲ್ಲೂ ಮಮತಾ ಬ್ಯಾನರ್ಜಿ ದೊಡ್ಡ ಮಟ್ಟದಲ್ಲಿ ಕಂಗಾಲಾಗಬೇಕಾಗಿರಲಿಲ್ಲ. ಸುಮಾರು 34 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಸಿಪಿಎಂ ಈ ಬಾರಿ ಗೆದ್ದಿರುವುದು ಬರಿ ಒಂದು ಸ್ಥಾನವನ್ನು. ಮುಖ್ಯವಾಗಿ ಸಿಪಿಎಂನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುವುದಕ್ಕೆ ವಿಫಲವಾಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ತೃಣ ಮೂಲ ಕಾಂಗ್ರೆಸ್ ಪಶ್ಚಿಮಬಂಗಾಳದಲ್ಲಿ ಜನ್ಮ ತಳೆಯಿತು. ಆರಂಭದಲ್ಲಿ ಅದು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗೆ ಕೇಂದ್ರದಲ್ಲಿ ಕೈ ಜೋಡಿಸಿತ್ತು. ಅದರ ನೇರ ಎದುರಾಳಿ ಎಡಪಕ್ಷಗಳಾಗಿತ್ತೇ ಹೊರತು, ಬಿಜೆಪಿಯಾಗಿರಲಿಲ್ಲ. ಬಹುಶಃ ಯಾವ ಕಾರಣಕ್ಕಾಗಿ ತೃಣಮೂಲ ಕಾಂಗ್ರೆಸ್ ಜನ್ಮ ತಳೆದಿತ್ತೋ ಆ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು. ಪಶ್ಚಿಮಬಂಗಾಳದಲ್ಲಿ ಸಿಪಿಎಂ ತಲೆಯೆತ್ತದಂತೆ ನೋಡಿಕೊಳ್ಳುವಲ್ಲಿ ಕಳೆದ ವಿಧಾನಸಭೆಯಲ್ಲೂ ತೃಣಮೂಲ ಕಾಂಗ್ರೆಸ್ ಯಶಸ್ವಿಯಾಗಿದೆ. ಅದರ ಫಲಿತಾಂಶವೆಂಬಂತೆ ಬಿಜೆಪಿ ಪಶ್ಚಿಮಬಂಗಾಳವನ್ನು ಏಕಾಏಕಿ ಬಂದಣಿಕೆಯಂತೆ ಆವರಿಸಿಕೊಂಡಿದೆ.

ಪಶ್ಚಿಮಬಂಗಾಳದ ಹಿರಿಯಣ್ಣರಾಗಿರುವ ಸಿಪಿಎಂ, ಕಾಂಗ್ರೆಸ್‌ನ ಸೋಲಿಗೆ ಹೋಲಿಸಿದರೆ ತೃಣಮೂಲ ಕಾಂಗ್ರೆಸ್ ಸ್ಥಿತಿ ತೀರಾ ನಿರ್ಲಕ್ಷಿಸುವಂತಹದ್ದಾಗಿರಲಿಲ್ಲ. ಹಾಗೆಯೇ ತೃಣಮೂಲ ಕಾಂಗ್ರೆಸನ್ನು ಸೋಲಿಸಲು ಬಿಜೆಪಿ ಹಲವು ವಾಮಮಾರ್ಗಗಳನ್ನು ಬಳಸಿಕೊಂಡಿತ್ತು. ಎಸ್‌ಐಆರ್‌ನ್ನು ದುರುಪಯೋಗಪಡಿಸಿ, ತೃಣಮೂಲ ಕಾಂಗ್ರೆಸ್‌ನ ಲಕ್ಷಾಂತರ ಮತದಾರರನ್ನು ಕಿತ್ತು ಹಾಕಿದ ಆರೋಪಗಳಿವೆ. ಇವುಗಳ ನಡುವೆ ತೃಣಮೂಲ ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದಿರುವುದು ಸಣ್ಣ ಸಂಗತಿಯಲ್ಲ. ಇಷ್ಟಕ್ಕೂ ಅಲ್ಲಿನ ಮತದಾರರು ಮೂರು ಬಾರಿ ತೃಣಮೂಲ ಕಾಂಗ್ರೆಸ್‌ಗೆ ಅವಕಾಶವನ್ನು ಕೊಟ್ಟಿರುವುದರಿಂದ, ಸೋಲನ್ನು ಒಪ್ಪಿಕೊಳ್ಳುವುದು ಮಮತಾಬ್ಯಾನರ್ಜಿಗೆ ಅನಿವಾರ್ಯವಾಗಿತ್ತು. ಆಡಳಿತ ವಿರೋಧಿ ಅಲೆಯಂತೂ ಪಶ್ಚಿಮಬಂಗಾಳದಲ್ಲಿ ಇದ್ದೇ ಇತ್ತು. ಅದನ್ನು ನಿರ್ಲಕ್ಷಿಸುವುದಕ್ಕಾಗುವುದಿಲ್ಲ. ಆದರೆ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ತೃಣಮೂಲ ಕಾಂಗ್ರೆಸ್ ಪಾಲಿನ ನಿಜವಾದ ಸೋಲಾಗಿದೆ. ಇಂದು ಮಮತಾ ಬ್ಯಾನರ್ಜಿ ತಲೆಕೆಡಿಸಿಕೊಳ್ಳಬೇಕಾದುದು ಕಳೆದ ವಿಧಾನಸಭೆಯ ಚುನಾವಣೆಯ ಸೋಲಿಗಾಗಿಯಲ್ಲ. ಇಂದು ತನ್ನದೇ ಸಹೋದ್ಯೋಗಿಗಳ ಮುಂದೆ ಅವರು ಹೀನಾಯವಾಗಿ ಸೋಲುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮಮತಾ ಬ್ಯಾನರ್ಜಿ ತನ್ನ ಪಕ್ಷದ ಮೂಲಕ ಕಡಿದು ಗುಡ್ಡೆ ಹಾಕಿದ್ದು ಏನು ಎನ್ನುವುದನ್ನು ಅವರ ಪಕ್ಷದೊಳಗಿರುವ ಸಹ ನಾಯಕರುಗಳೇ ಬಟಾ ಬಯಲು ಮಾಡುತ್ತಿದ್ದಾರೆ.

ಮುಖ್ಯವಾಗಿ ಪಶ್ಚಿಮಬಂಗಾಳದಲ್ಲಿ ಸಿಪಿಎಂನ್ನು ಇಲ್ಲವಾಗಿಸುವುದನ್ನೇಏಕೈಕ ಅಜೆಂಡಾವನ್ನಾಗಿ ತೃಣಮೂಲ ಕಾಂಗ್ರೆಸ್ ಮಾಡಿಕೊಂಡಿತು. ಮತ್ತು ಅದನ್ನು ಸಾಧಿಸುವಲ್ಲಿ ಯಶಸ್ವಿಯೂ ಆಯಿತು. ಆದರೆ ಅದರ ಇನ್ನೊಂದು ಪರಿಣಾಮದ ಬಗ್ಗೆ ಮಮತಾ ಆಲೋಚಿಸಲಿಲ್ಲ. ಸಿಪಿಎಂನ್ನು ಗಂಭೀರವಾಗಿ ತೆಗೆದುಕೊಂಡಂತೆ, ಬಿಜೆಪಿಯನ್ನು ಮಮತಾ ಬ್ಯಾನರ್ಜಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮುಖ್ಯವಾಗಿ ಬಿಜೆಪಿ ಮತ್ತು ಸಿಪಿಎಂಗೆ ಇರುವಂತೆ ಒಂದು ಸಿದ್ಧಾಂತಕ್ಕೆ ಬದ್ಧವಾಗಿ ಪಕ್ಷವನ್ನು ಬೆಳೆಸಲಿಲ್ಲ. ಅದಕ್ಕೆ ತನ್ನದೇ ಆದ ನೀತಿಗಳಿರಲಿಲ್ಲ. ಆದುದರಿಂದಲೇ ಸೋಲು ಘೋಷಣೆಯಾಗುತ್ತಲೇ ಪಕ್ಷದೊಳಗಿರುವವರೆಲ್ಲ ಒಬ್ಬೊಬ್ಬರು ಒಂದೊಂದು ದಾರಿ ಹಿಡಿಯುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಳ್ಳುವುದಕ್ಕೆ ಅವರ ಬಳಿ ಸಕಾರಣಗಳೇ ಇಲ್ಲ. ಬಿಜೆಪಿಯ ಹಿಂದಿರುವ ಆರೆಸ್ಸೆಸ್‌ನ ಸಿದ್ಧಾಂತದ ಅಪಾಯವನ್ನು ತೃಣಮೂಲ ಗಂಭೀರವಾಗಿ ತೆಗೆದುಕೊಂಡಿದ್ದರೆ, ಸಿಪಿಎಂ ವಿರುದ್ಧದ ಗೆಲುವಿನಿಂದ ಮೈಮರೆಯುತ್ತಿರಲಿಲ್ಲ. ಪಕ್ಷವನ್ನು ಜಾತ್ಯತೀತವಾದ ಒಂದು ಸಿದ್ಧಾಂತದ ಚೌಕಟ್ಟಿನೊಳಗೆ ಕಟ್ಟಿ ಬೆಳೆಸಿದ್ದರೆ, ಅಧಿಕಾರ ಕಳೆದುಕೊಂಡ ಬೆನ್ನಿಗೇ ಪಕ್ಷದ ಸ್ಥಿತಿ ಇಷ್ಟು ದಯನೀಯವಾಗುತ್ತಿರಲಿಲ್ಲ. ದಕ್ಷಿಣ ಭಾರತದ ಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳ ಬೆನ್ನಿಗೆ ನಿರ್ದಿಷ್ಟ ಸಿದ್ಧಾಂತಗಳಿವೆ. ದ್ರಾವಿಡ ಒಳನೋಟಗಳು ಈ ಪಕ್ಷಗಳನ್ನು ಮುನ್ನಡೆಸುತ್ತಿವೆ. ಆದರೆ ಪಶ್ಚಿಮಬಂಗಾಳದ ತಕ್ಷಣದ ಅಗತ್ಯವಾಗಿ ಹುಟ್ಟಿಕೊಂಡ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿಯವರ ಸರ್ವಾಧಿಕಾರಿ ಮನಸ್ಥಿತಿಗೆ ಸ್ವಯಂ ಬಲಿಯಾಗಿದೆ.

ಬಿಜೆಪಿ ತನ್ನನ್ನು ಬಗ್ಗು ಬಡಿಯಲು ಸಂಚಿನ ಮೇಲೆ ಸಂಚುಗಳನ್ನು ರೂಪಿಸುತ್ತಿರುವಾಗಲಾದರೂ ಮಮತಾ ಬ್ಯಾನರ್ಜಿ ಎಚ್ಚೆತ್ತುಕೊಳ್ಳಬಹುದಿತ್ತು. ಕಾಂಗ್ರೆಸ್, ಸಿಪಿಎಂ ಜೊತೆಗೆ ಕೈ ಜೋಡಿಸುವ ಅನಿವಾರ್ಯತೆಯನ್ನು ಅವರು ಅರ್ಥಮಾಡಿಕೊಂಡು, ಹೊಂದಾಣಿಕೆಗೆ ದಾರಿಯೊಂದನ್ನು ಹುಡುಕಬೇಕಾಗಿತ್ತು. ಆದರೆ ಅದಕ್ಕೆ ಸಿದ್ಧರಿಲ್ಲದ ಪರಿಣಾಮವಾಗಿ ಇಂದು, ತೃಣಮೂಲ ಕಾಂಗ್ರೆಸ್ ಪಕ್ಷವು ಮೂಲ ಕಾಂಗ್ರೆಸ್ ಜೊತೆಗೆ ಮತ್ತೆ ವಿಲೀನವಾಗುವ ವದಂತಿಗೆ ಕಾರಣವಾಗಿದೆ. ಇತ್ತ ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಅಧಿಕಾರ ಕಳೆದುಕೊಂಡ ಬೆನ್ನಿಗೇ ಒಬ್ಬೊಬ್ಬರೇ ಕೇಜ್ರಿವಾಲ್ ಕೈ ಬಿಡುತ್ತಿದ್ದಾರೆ. ಯುಪಿಎ ಸರಕಾರದ ಭ್ರಷ್ಟಾಚಾರದ ವಿರುದ್ಧದ ಆಂದೋಲನದ ಕುಡಿ ಆಮ್ ಆದ್ಮಿ ಪಕ್ಷ. ಬಿಜೆಪಿಯ ಭ್ರಷ್ಟಾಚಾರ ಮತ್ತು ಸಿದ್ಧಾಂತದ ವಿರುದ್ಧವೂ ಕಟುವಾಗಿ ಮಾತನಾಡಿದ್ದ ಆಪ್, ಏಕಾಂಗಿಯಾಗಿ ನಡೆಸಿದ ಹೋರಾಟವೇ ಅದಕ್ಕೆ ಮುಳುವಾಗಿದೆ. ಪ್ರಾದೇಶಿಕ ಪಕ್ಷಗಳು ಸ್ಥಳೀಯವಾಗಿ ಎಷ್ಟು ಗಟ್ಟಿಯಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಬಿಜೆಪಿಯಂತಹ ಸರ್ವಾಧಿಕಾರಿ ಗುಣಗಳುಳ್ಳ ಪಕ್ಷವನ್ನು ಒಂಟಿಯಾಗಿ ಎದುರಿಸುವುದು ಅಪಾಯಕಾರಿ. ಕುರಿ ಒಂಟಿಯಾಗಿದ್ದಷ್ಟು ತೋಳಕ್ಕೆ ಬಲಿ ಹಾಕುವುದು ಸುಲಭ. ಒಂಟಿಯಾಗಿ ಎದುರಿಸಬಲ್ಲೆ ಎನ್ನುವ ಮನಸ್ಥಿತಿಯೇ ಇಂದು ಆಪ್ ಮತ್ತು ತೃಣಮೂಲ ಕಾಂಗ್ರೆಸ್‌ನ ದುರಂತಕ್ಕೆ ಮುಖ್ಯ ಕಾರಣ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೂ ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ತನ್ನ ಒಣ ಪ್ರತಿಷ್ಠೆಯನ್ನು ಬದಿಗಿಡಬೇಕು. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಅವುಗಳನ್ನು ಹಿಂಬಾಲಿಸುವ ಸೌಜನ್ಯ ಕಾಂಗ್ರೆಸ್ ಪಕ್ಷಕ್ಕೂ ಇರಬೇಕು. ಆಪ್, ತೃಣಮೂಲದಂತಹ ಪಕ್ಷಗಳ ದುರಂತವನ್ನೇ ತನ್ನ ಗೆಲುವು ಎಂದು ಸಂತೃಪ್ತಿಪಡುವ ಸಣ್ಣತನದಿಂದ ಕಾಂಗ್ರೆಸ್ ಹೊರ ಬಂದು, ಇಂಡಿಯಾ ಒಕ್ಕೂಟವನ್ನು ಮರು ಸಂಘಟಿಸುವ ಬಗ್ಗೆ ಯೋಚನೆ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News