ಪುತ್ತೂರು: ಕಳವು ಪ್ರಕರಣ; ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ
PC: istockphoto
ಪುತ್ತೂರು: ತಾಲೂಕಿನ ಬಡಗನ್ನೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿನ ರೆಸ್ಟೋರೆಂಟ್ ನಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ನೌಕರನಿಗೆ ಪುತ್ತೂರು ಎ.ಎಸ್.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು 3 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಶಿವಪ್ರಸಾದ್ ಈ ಪ್ರಕರಣದ ಆರೋಪಿಯಾಗಿದ್ದು, ಈತ ಈಶ್ವರಮಂಗಲದಲ್ಲಿರುವ ಶನ್ಯ ರೆಸ್ಟೋರೆಂಟ್‌ನಲ್ಲಿ ಅಡುಗೆ ಕೆಲಸಗಾರನಾಗಿದ್ದ, ಆರೋಪಿಯು 2024ರ ಏಪ್ರಿಲ್ 21ರಿಂದ 24ರ ನಡುವೆ ಕಿಚನ್ ನ ಬಾಗಿಲು ಮುರಿದು ಡ್ರಾವರ್‌ನಲ್ಲಿದ್ದ ರೂ. 90,000 ನಗದನ್ನು ಕಳವು ಮಾಡಿದ್ದ. ಈ ದೃಶ್ಯವು ಇಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು, ಅದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡಿದ್ದರು.
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸುಷ್ಮ ಭಂಡಾರಿ ಅವರು ಪ್ರಕರಣದ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಚೇತನಾ ದೇವಿ ಅವರು ವಾದ ಮಂಡಿಸಿದರು.
ಎರಡೂ ಪಕ್ಷಗಳ ವಾದ ಆಲಿಸಿದ ನ್ಯಾಯಾಧೀಶ ದೇವರಾಜ್ ಅವರು ಆರೋಪಿಗೆ 3 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.