×
Ad

ರಾಮ ಮಂದಿರ ಹಗರಣ: ಬಿಲವಲ್ಲ, ಸುರಂಗ!

Update: 2026-07-02 07:20 IST

Photo: x.com/ShriRamTeerth

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಮಮಂದಿರ ಹಗರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬಂಧಿಸಿರುವ ಉತ್ತರ ಪ್ರದೇಶ ಸರಕಾರ ಇದೊಂದು ಸಣ್ಣ ಬಿಲ ಅಷ್ಟೇ ಎಂದು ಬಿಂಬಿಸುವುದಕ್ಕೆ ಪ್ರಯತ್ನಿಸುತ್ತಿದೆ. ಆದರೆ ಈ ಬಿಲವನ್ನು ತೋಡಿದಂತೆಯೇ ಅದು ಬೃಹತ್ ಸುರಂಗವಾಗಿ ಉತ್ತರ ಪ್ರದೇಶ ಸರಕಾರದ ವಿವಿಧ ರಾಜಕಾರಣಿಗಳ, ಸಚಿವರ ನಿವಾಸಗಳನ್ನು, ಕಚೇರಿಗಳನ್ನು ಸಂಪರ್ಕಿಸುತ್ತಿದೆ. ಧಾರ್ಮಿಕ ಮುಖಂಡರು ಮತ್ತು ರಾಜಕಾರಣಿಗಳು ಜಂಟಿಯಾಗಿ ನಡೆಸಿದ ಹಗರಣ ಇದು ಎನ್ನುವುದು ಮೇಲ್ನೋಟದ ತನಿಖೆಯಿಂದ ಬಯಲಾಗುತ್ತಿದೆ. ಇದು ಬರೇ ನೂರು, ಇನ್ನೂರು ಕೋಟಿ ರೂಪಾಯಿಯ ಹಗರಣವಲ್ಲ, ಸಾವಿರಾರು ಕೋಟಿ ರೂಪಾಯಿಯ ಹಗರಣವೆನ್ನುವುದು ದೇಶಕ್ಕೆ ಸ್ಪಷ್ಟವಾಗುತ್ತಾ ಇದೆ. ರಾಮಮಂದಿರ ನಿರ್ಮಾಣ ಮತ್ತು ಅದರ ನಿರ್ವಹಣೆ ದೇಶದ ಪಾಲಿಗೆ ಕೇವಲ ಧಾರ್ಮಿಕ ವಿಷಯವಲ್ಲ. ಒಂದು ರಾಜಕೀಯ ಪಕ್ಷ ಅದರ ನಿರ್ಮಾಣದಲ್ಲಿ, ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಶಾಮೀಲಾಗುತ್ತಾ ಬಂದಿದೆ. ಮತ್ತು ಆ ರಾಜಕೀಯ ಪಕ್ಷ ಈ ದೇಶವನ್ನು ಆಳುತ್ತಿದೆ. ಈ ಕಾರಣಕ್ಕಾಗಿಯೇ ಒಂದೆಡೆ ಕೆಲವು ರಾಜಕೀಯ ನಾಯಕರು, ಧಾರ್ಮಿಕ ಸಂಘಟನೆಗಳ ಮುಖಂಡರು ಹಗರಣದ ಬಗ್ಗೆ ಬಾಯಿ ಮುಚ್ಚಿ ಕೂತಿದ್ದಾರೆ. ಇನ್ನೊಂದು ಗುಂಪು ಹಗರಣವನ್ನೇ ಸಮರ್ಥಿಸುವ ಹೀನ ಮಟ್ಟಕ್ಕೆ ಇಳಿದಿದೆ. ‘‘ಹಿಂದೂ ಧರ್ಮದ ಜನರು ನೀಡಿದ ದೇಣಿಗೆಯನ್ನು ಹಿಂದೂ ಧರ್ಮೀಯರು ಲಪಟಾಯಿಸಿದ್ದಾರೆ. ಇದರ ಬಗ್ಗೆ ಇತರರಿಗೆ ಮಾತನಾಡುವ ಹಕ್ಕು ಇಲ್ಲ’’ ಎಂದು ಹಗರಣವನ್ನು ಕೆಲವು ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಗರಣವನ್ನು ಪ್ರಶ್ನಿಸುತ್ತಿರುವ ವಿರೋಧ ಪಕ್ಷಕ್ಕೆ ‘ದೇಣಿಗೆ ಕೊಟ್ಟವರಿಗಷ್ಟೇ ಇದನ್ನು ಪ್ರಶ್ನಿಸುವ ಹಕ್ಕಿದೆ’ ಎಂದು ಬಾಯಿ ಮುಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ರಾಮಮಂದಿರ ಹಗರಣದಲ್ಲಿ ಬರೇ ಹುಂಡಿ ಕಳ್ಳರನ್ನು ದೇಶದ ಮುಂದಿಟ್ಟು ಉಳಿದ ದರೋಡೆಕೋರರನ್ನು ರಕ್ಷಿಸುವ ಪ್ರಯತ್ನವನ್ನು ಸರಕಾರ ಮಾಡುತ್ತಿದೆ ಎನ್ನುವುದು ವಿರೋಧ ಪಕ್ಷದ ಆರೋಪವಾಗಿದೆ. ಈವರೆಗೆ ಸರಕಾರ ಎಂಟು ಮಂದಿಯನ್ನು ಬಂಧಿಸಿದೆ. ಆದರೆ ಈ ಹಗರಣದ ಪ್ರಧಾನ ರೂವಾರಿಗಳನ್ನು ಬಂಧಿಸುವ ಕೆಲಸ, ಅವರನ್ನು ವಿಚಾರಣೆ ನಡೆಸುವ ಕೆಲಸ ಇನ್ನೂ ಆಗಿಲ್ಲ. ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪಕ್ ರಾಯ್ ಮತ್ತು ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಈ ಹಗರಣದಲ್ಲಿ ಪ್ರಧಾನ ಪಾತ್ರವಹಿಸಿರುವುದು ಮಾಧ್ಯಮಗಳ ವರದಿಗಳಿಂದ ಬೆಳಕಿಗೆ ಬರುತ್ತಿದೆ. ಇವರನ್ನು ಬಂಧಿಸಿ ವಿಚಾರಣೆ ನಡೆಸಿದರೆ ರಾಮಮಂದಿರ ಹಗರಣದ ಇನ್ನಷ್ಟು ಕತ್ತಲ ಕೂಪಗಳಿಗೆ ಬೆಳಕು ಚೆಲ್ಲಬಹುದಾಗಿದೆ. ಆದರೆ ಉತ್ತರ ಪ್ರದೇಶ ಸರಕಾರ ಸಿಟ್ ತನಿಖೆ ತಂಡದ ಮೂಲಕವೇ ಇವರನ್ನೆಲ್ಲ ರಕ್ಷಿಸುವ ಕೆಲಸ ಮಾಡುತ್ತಿದೆ. ಮಾಜಿ ಟ್ರಸ್ಟಿ ಅನಿಲ್ ಮಿಶ್ರ ಉದ್ಯೋಗಿಗಳ ನೇಮಕಾತಿ ವೇಳೆ ಕಮಿಷನ್ ಪಡೆದಿರುವುದು ಮತ್ತು 125ಕ್ಕೂ ಅಧಿಕ ಸಿಬ್ಬಂದಿ ಈ ಮಿಶ್ರ ಶಿಫಾರಸಿನ ಮೇಲೆ ನೇಮಕಾತಿಯಾಗಿರುವುದು ಬೆಳಕಿಗೆ ಬಂದಿದೆ. ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಬಂಧಿತರಾಗಿರುವ ಅನುಕಲ್ಪ್ ಮಿಶ್ರಾ ಮತ್ತು ಲವ ಕುಶ ಮಿಶ್ರಾ ಈ ಅನಿಲ್ ಮಿಶ್ರಾನ ಸಂಬಂಧಿಯಾಗಿದ್ದಾರೆ. ಟಿನ್ನು ಯಾದವ್ ಚಂಪಕ್ ರೈಯ ಆಪ್ತನಾಗಿದ್ದಾನೆ. ಮಿಶ್ರ ಕುಟುಂಬ ಸಂಪಾದಿಸಿರುವ ಕೋಟ್ಯಂತರ ಬೆಲೆಬಾಳುವ ಅಕ್ರಮ ಭೂಮಿ ಎಲ್ಲಿಂದ ಬಂತು ಎನ್ನುವುದರ ತನಿಖೆ ಅಗತ್ಯಗತ್ಯವಾಗಿ ನಡೆಯಬೇಕಾಗಿದೆ.

ರಾಮಮಂದಿರ ಹಗರಣಗಳ ಕುರಿತಂತೆ ವಿಶ್ವ ಹಿಂದೂ ಪರಿಷತ್‌ನ ವಿರೋಧಾಭಾಸದ ಹೇಳಿಕೆಗಳು ಸಂಶಯಗಳಿಗೆ ಪುಷ್ಟಿ ನೀಡಿದೆ. ವಿಎಚ್‌ಪಿ ಅಂತರ್‌ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ‘‘ರಾಮಮಂದಿರ ಟ್ರಸ್ಟ್‌ನ ಕಾರ್ಯಗಳಿಗೆ ವಿಎಚ್‌ಪಿ ಹೊಣೆಗಾರನಲ್ಲ’’ ಎಂದು ಸಮಜಾಯಿಷಿ ನೀಡಿದ್ದಾರೆ. ‘‘ರಾಮಜನ್ಮಭೂಮಿ ಚಳವಳಿಯಲ್ಲಿ ವಿಎಚ್‌ಪಿಯ ಪಾತ್ರ ದೇವಾಲಯ ನಿರ್ಮಾಣವಾಗುವುದನ್ನು ಖಚಿತಪಡಿಸುವುದಾಗಿತ್ತು. ದೇವಾಲಯ ನಡೆಸುವುದು ವಿಎಚ್‌ಪಿಯ ಕೆಲಸವಲ್ಲ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟ್ರಸ್ಟ್‌ನ ಜೊತೆಗೆ ಅಂತರ ಕಾಯ್ದುಕೊಂಡಿದ್ದೇವೆ ಎಂದು ವಿಎಚ್‌ಪಿ ಹೇಳುತ್ತಿದ್ದರೂ, ಟ್ರಸ್ಟ್‌ನಲ್ಲಿರುವ ಬಹುತೇಕ ಮಂದಿ ವಿಎಚ್‌ಪಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡವರು ಎನ್ನುವುದು ವಾಸ್ತವವಾಗಿದೆ. ಪ್ರಮುಖ ಆರೋಪಿ ಚಂಪಕ್ ರಾಯ್ ಅವರು ದೀರ್ಘ ಕಾಲ ವಿಎಚ್‌ಪಿಯಲ್ಲಿ ಕೆಲಸ ಮಾಡಿಕೊಂಡು ಬಂದವರು ಮತ್ತು ಆ ಅರ್ಹತೆಯ ಮೇಲೆಯೇ ಅವರು ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಸದ್ಯಕ್ಕೆ ರಾಮಮಂದಿರ ಹಗರಣದ ದೇಣಿಗೆ ದೇವಸ್ಥಾನ ನಿರ್ಮಾಣ ಹಂತದಲ್ಲಿ ಹರಿದು ಬಂದಿರುವುದಾಗಿದೆ. ಈ ಸಂದರ್ಭದಲ್ಲಿ ದೇಣಿಗೆ ಪಡೆಯುವಲ್ಲಿ ವಿಎಚ್‌ಪಿ ಮುಖಂಡರೂ ಶಾಮೀಲಾಗಿದ್ದರು. ಇಂದು ರಾಮಮಂದಿರಕ್ಕೆ ದೇಣಿಗೆ ನೀಡಿದ ಸಾವಿರಾರು ಮಂದಿ ತಮ್ಮ ಹಣದ ಲೆಕ್ಕ ಕೇಳುತ್ತಿರುವಾಗ ವಿಎಚ್‌ಪಿ ಹೆಗಲು ಜಾರಿಸುವ ಹೇಳಿಕೆ ನೀಡುವುದು ಎಷ್ಟು ಸರಿ? ರಾಮಮಂದಿರ ಸ್ಥಾಪನೆ ಮಾಡುವ ಮೂಲಕ ರಾಮರಾಜ್ಯವನ್ನು ಸ್ಥಾಪಿಸಿದ್ದೇವೆ ಎಂದು ವಿಎಚ್‌ಪಿ ನಾಯಕರು ಈ ಹಿಂದೆ ಘೋಷಿಸಿದ್ದರು. ರಾಮಮಂದಿರದಲ್ಲೇ ಈ ಪರಿಯ ಹಗರಣಗಳು ನಡೆಯುತ್ತದೆ ಎನ್ನುವಾಗ, ಸಂಘಪರಿವಾರ ಪ್ರತಿಪಾದಿಸುವ ‘ರಾಮರಾಜ್ಯ’ಕ್ಕೆ ಏನು ಅರ್ಥ ಉಳಿಯಿತು? ಈ ಹಗರಣ ರಾಮನ ಹೆಸರಿಗೆ ಮಾಡಿರುವ ಕಳಂಕವಾಗಿರುವುದರಿಂದ, ಇದರ ನೈತಿಕ ಹೊಣೆಯನ್ನು ವಿಎಚ್‌ಪಿ ಮತ್ತು ಆರೆಸ್ಸೆಸ್ ಹೊತ್ತುಕೊಳ್ಳಲೇ ಬೇಕು.

ರಾಮಮಂದಿರ ಹಣ ಕಳವು ಹಗರಣದ ತನಿಖೆ ಮೂರು ದಿಕ್ಕಿನಲ್ಲಿ ನಡೆಯಬೇಕಾಗಿದೆ. ಒಂದು, ರಾಮಮಂದಿರ ನಿರ್ಮಾಣವಾದ ಬಳಿಕದ ದಿನದಿಂದ ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಹಣದ ಕಳ್ಳತನ. 2025ರ ಕುಂಭಮೇಳದ ಸಂದರ್ಭದಲ್ಲಿ ಅತಿ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಣವನ್ನು ಲಪಟಾಯಿಸಿದವರು ಮಾತ್ರವಲ್ಲ, ಇವರಿಗೆ ಬೆಂಬಲವಾಗಿ ನಿಂತವರು, ಲಪಟಾಯಿಸಿದ ಹಣ ಯಾರ್ಯಾರ ತಿಜೋರಿ ಸೇರಿದೆ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಇನ್ನೊಂದೆಡೆ, ರಾಮಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಜನರಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ಎಷ್ಟು ವಂಚನೆಯಾಗಿದೆ, ಅದರಲ್ಲಿ ಯಾರ್ಯಾರ ಕೈವಾಡಗಳಿವೆ ಎನ್ನುವುದು ಹೊರಬರಬೇಕು. ಇದು ಬರೇ ಒಂದೆರಡು ಕೋಟಿ ಹಗಣದ ವಿಷಯವಲ್ಲ, ಸಾವಿರಾರು ಕೋಟಿ ರೂಪಾಯಿ ಲೂಟಿ ನಡೆದಿದ್ದು, ರಾಮಮಂದಿರ ನಿರ್ಮಾಣದ ಹೊಣೆ ಹೊತ್ತ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳೇ ಇದಕ್ಕೆ ನೇರ ಹೊಣೆಯಾಗಿವೆೆ. ಇದರಲ್ಲಿ ರಾಷ್ಟ್ರಮಟ್ಟದ ರಾಜಕೀಯ ನಾಯಕರೂ ಶಾಮೀಲಾಗಿರುವ ಸಾಧ್ಯತೆಗಳಿವೆ. ಇನ್ನು, ರಾಮಮಂದಿರದ ಆಸುಪಾಸಿನಲ್ಲಿ ನಡೆದ ಸಾವಿರಾರು ಕೋಟಿ ರೂಪಾಯಿಯ ಅಕ್ರಮ ಭೂ ಮಾರಾಟ ಅಥವಾ ರಿಯಲ್ ಎಸ್ಟೇಲ್ ವ್ಯವಹಾರ. ಇದರಲ್ಲೂ ಸಾವಿರಾರು ಕೋಟಿ ರೂಪಾಯಿ ಲೂಟಿ ನಡೆದಿದೆ. ಇವೆಲ್ಲವನ್ನು ಬರೇ ಸಿಟ್ ತನಿಖೆಯಿಂದ ಬೆಳಕಿಗೆ ತರಲು ಸಾಧ್ಯವಿಲ್ಲ. ಆದುದರಿಂದ, ಈ ಬೃಹತ್ ಹಗರಣದ ತನಿಖೆ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ನಡೆಯಬೇಕು. ಹೊರನೋಟಕ್ಕೆ ಬಿಲಗಳಂತೆ ಕಾಣುತ್ತಿರುವ ಈ ಹಗರಣವನ್ನು ಅಗೆದರೆ ಮಾತ್ರ ಅದು ಬಿಲವಲ್ಲ, ಗುಹೆಯೂ ಅಲ್ಲ, ಬೃಹತ್ ಸುರಂಗ ಎನ್ನುವುದು ಗೊತ್ತಾಗಬಹುದು. ಈ ಸುರಂಗ ಯಾವ ಯಾವ ರಾಜಕೀಯ ನಾಯಕರ ಕಡೆಗೆ ದಾರಿಕೊರೆದಿದೆ ಎನ್ನುವುದು ದೇಶಕ್ಕೆ ಗೊತ್ತಾಗಲೇ ಬೇಕಾಗಿದೆ. ಸುಪ್ರೀಂಕೋರ್ಟ್ ಹಗರಣದ ಹಿಂದಿರುವ ದುಷ್ಟರ ವಿರುದ್ಧ ರಾಮಬಾಣ ಬಿಡಲೇ ಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News