ಭಾರತಕ್ಕೆ ಅಪಾಯ ತಂದಿಡಲಿರುವ ದ್ವೇಷ ಭಾಷಣಗಳೆಂಬ ವೈರಸ್‌ಗಳು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುತ್ತಿರುವುದು ‘ದೇಷ ಭಾಷಣ’ ಎನ್ನುವುದು ಸರಕಾರೇತರ ಸಂಸ್ಥೆ ಬಿಡುಗಡೆ ಮಾಡಿದ ವರದಿಯಿಂದ ಬಹಿರಂಗವಾಗಿದೆ. ಸ್ವದೇಶಿ ಆರ್ಥಿಕತೆಯನ್ನು ಮೇಲೆತ್ತಲು ಮೇಕ್ ಇನ್ ಇಂಡಿಯಾ ಸೇರಿದಂತೆ ಕೇಂದ್ರ ಸರಕಾರ ಘೋಷಿಸಿದ ಹತ್ತು ಹಲವು ಯೋಜನೆಗಳು ವಿಫಲಗೊಂಡಿವೆಯಾದರೂ, ದ್ವೇಷ ಭಾಷಣ ಉತ್ಪಾದನೆಯಲ್ಲಿ ಮಾತ್ರ ಅಗ್ರ ಸ್ಥಾನದಲ್ಲಿದೆ. ಇಂದು ಉತ್ಪಾದನೆಯಾಗುತ್ತಿರುವ ದ್ವೇಷವನ್ನು ರಫ್ತು ಮಾಡುವ ಅವಕಾಶವಿದ್ದಿದ್ದರೆ, ಭಾರತದ ವಿದೇಶ ವಿನಿಮಯದಲ್ಲಿ ಭಾರೀ ಹೆಚ್ಚಳವಾಗುತ್ತಿತ್ತು. ಅಮೆರಿಕದ ಟ್ರಂಪ್ ಈ ಉತ್ಪನ್ನಕ್ಕೆ ಭಾರೀ ಸುಂಕ ವಿಧಿಸಬೇಕಾದ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಈ ದ್ವೇಷ ಉತ್ಪಾದನೆಯ ನೇತೃತ್ವವನ್ನು ಕೇಂದ್ರ ಸರಕಾರವೇ ವಹಿಸಿಕೊಂಡಿದ್ದು, ಜನಪ್ರತಿನಿಧಿಗಳೇ ದ್ವೇಷದ ಕೃಷಿಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ‘ಸೆಂಟರ್ ಫಾರ್ ದಿ ಸ್ಟಡಿ ಆರ್ಗನೈಸ್ಡ್ ಹೇಟ್’(ಸಿಎಸ್‌ಒಎಚ್) ಅಧೀನದಲ್ಲಿರುವ ‘ಇಂಡಿಯಾ ಹೇಟ್ ಲ್ಯಾಬ್’ ಬಿಡುಗಡೆ ಮಾಡಿದ 2025ರ ವರದಿಯ ಪ್ರಕಾರ, ಭಾರತದಲ್ಲಿ ದ್ವೇಷ ಭಾಷಣಗಳ ಪ್ರಮಾಣ ಆತಂಕಕಾರಿಮಟ್ಟದಲ್ಲಿ ಹೆಚ್ಚುತ್ತಿದೆ. ಈ ದ್ವೇಷ ಭಾಷಣಗಳು ಸಾಮರಸ್ಯ, ಆಂತರಿಕ ಭದ್ರತೆ ಹಾಗೂ ಪ್ರಜಾಪ್ರಭುತ್ವದ ಸ್ವರೂಪಕ್ಕೆ ಧಕ್ಕೆಯುಂಟು ಮಾಡುತ್ತಿದೆ. ವರದಿಯ ಪ್ರಕಾರ, 2025ರಲ್ಲಿ ದೇಶಾದ್ಯಂತ ಒಟ್ಟು 1,318 ದ್ವೇಷ ಭಾಷಣದ ಘಟನೆಗಳು ದಾಖಲಾಗಿವೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ ಇದು ಅತ್ಯಧಿಕವಾಗಿದೆ. 2023ರಲ್ಲಿ 668 ದ್ವೇಷ ಭಾಷಣದ ಘಟನೆಗಳು ದಾಖಲಾಗಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟು ದ್ವೇಷ ಭಾಷಣಗಳಲ್ಲಿ ಶೇ. 98ರಷ್ಟು ಅಂದರೆ 1,289 ಘಟನೆಗಳು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿವೆ. ಕ್ರಿಶ್ಚಿಯನ್ ಸಮುದಾಯದ ವಿರುದ್ಧದ ದ್ವೇಷ ಭಾಷಣಗಳು ಹಿಂದಿನ ಅವಧಿಗೆ ಹೋಲಿಸಿದರೆ ಶೇ. 41ರಷ್ಟು ಹೆಚ್ಚಾಗಿದ್ದು, 162 ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ. ಒಟ್ಟು ಘಟನೆಗಳಲ್ಲಿ ಶೇ. 88ರಷ್ಟು ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಆಡಳಿತ ವಿರುವ ರಾಜ್ಯಗಳಲ್ಲಿ ನಡೆದಿದ್ದರೆ, ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಘಟನೆಗಳು ಶೇ. 34ರಷ್ಟು ಇಳಿಕೆಯಾಗಿರುವುದನ್ನೂ ವರದಿ ಬೆಟ್ಟು ಮಾಡಿದೆ.
ಈ ದ್ವೇಷದ ಕೃಷಿಯ ಹೆಚ್ಚಳಕ್ಕೆಂದೇ ಇಲ್ಲಿ ಮತಾಂತರ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಲವ್‌ಜಿಹಾದ್, ಲ್ಯಾಂಡ್ ಜಿಹಾದ್, ಜನಸಂಖ್ಯಾ ಜಿಹಾದ್‌ನಂತಹ ಕಾಲ್ಪನಿಕ ಪಿತೂರಿಗಳ ಗೊಬ್ಬರಗಳನ್ನು ಬಳಸಿ ಇಲ್ಲಿ ದ್ವೇಷದ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗಿದೆ. ಸುಮಾರು 656ರ ಪ್ರಕರಣಗಳಲ್ಲಿ ಈ ವಿಷಯಗಳನ್ನು ಬಳಸಿಕೊಂಡು ಹಿಂಸೆಗೆ ಕರೆ ನೀಡಲಾಗಿದೆ. ಸುಮಾರು 308 ಭಾಷಣಗಳಲ್ಲಿ ಹಿಂಸಾಚಾರಕ್ಕೆ ಕರೆ ನೀಡಲಾಗಿದ್ದರೆ, 136 ಭಾಷಣಗಳಲ್ಲಿ ಸಾರ್ವಜನಿಕವಾಗಿ ಶಸ್ತ್ರಾಸ್ತ್ರಗಳನ್ನು ಹಿಡಿಯುವಂತೆ ಪ್ರಚೋದಿಸಲಾಗಿದೆ. 120 ಭಾಷಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವ್ಯಾಪಾರ ವಹಿವಾಟುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮಗಳು ದ್ವೇಷ ವೈರಸ್ ಹರಡಲು ಅತ್ಯುತ್ತಮ ವಾಹಕಗಳಾಗಿವೆ ಎಂದು ವರದಿ ಅಭಿಪ್ರಾಯ ಪಡುತ್ತದೆ. ಎಲ್ಲೋ ಯಾರೋ ಮಾಡಿದ ಭಾಷಣಗಳನ್ನು ಈ ದೇಶದ ಉದ್ದಗಲಕ್ಕೆ ತಲುಪಿಸುವ ಯಶಸ್ವೀ ಕೆಲಸವನ್ನು ಸಾಮಾಜಿಕ ಮಾಧ್ಯಮಗಳು ಮಾಡಿಕೊಂಡು ಬಂದಿವೆ. 1,318 ಘಟನೆಗಳಲ್ಲಿ 1,278 ಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೇರವಾಗಿ ಪ್ರಸಾರಗೊಂಡಿವೆ ಎಂದು ವರದಿ ಹೇಳುತ್ತದೆ. ಎಲ್ಲೋ ಯಾವುದೋ ಮೂಲೆಯಲ್ಲಿ ಮಾಡಿದ ಭಾಷಣ ಆ ಪ್ರದೇಶ ಮತ್ತು ಆ ಸಂದರ್ಭಕ್ಕಷ್ಟೇ ಸೀಮಿತವಾಗಿ ಉಳಿಯುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ಅದು ಇಡೀ ದೇಶಕ್ಕೆ ಸಾಂಕ್ರಾಮಿಕ ವೈರಸ್‌ನಂತೆ ಹರಡುತ್ತದೆ ಮತ್ತು ಈ ದ್ವೇಷವನ್ನು ಹರಡುವವರು ಕೇವಲ ತಳಸ್ತರದ ಕೋಮುವಾದಿ ಸಂಘಟನೆಗಳ ಮುಖಂಡರಲ್ಲ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 71 ಭಾಷಣಗಳ ಮೂಲಕ ದ್ವೇಷ ಭಾಷಣಗಳಿಗಾಗಿ ಅಗ್ರಸ್ಥಾನದಲ್ಲಿದ್ದಾರೆ. ವಿಪರ್ಯಾಸವೆಂದರೆ, ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ದ್ವೇಷ ಭಾಷಣಗಳಿಗಾಗಿ ಮಾಧ್ಯಮಗಳಲ್ಲಿ ಸುದ್ದಿಯಾದರು. ದೇಶ ಆರ್ಥಿಕತೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಂತೆಯೇ ರಾಜಕಾರಣಿಗಳು ಭಾವನಾತ್ಮಕ ವಿಷಯಗಳಿಗೆ ಮೊರೆಹೋಗುವುದು ಅನಿವಾರ್ಯವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ದೇಶ ಅನುಭವಿಸುತ್ತಿರುವ ಆರ್ಥಿಕ ಹಿನ್ನಡೆಗೂ, ಹೆಚ್ಚುತ್ತಿರುವ ದ್ವೇಷ ಭಾಷಣಗಳಿಗೂ ನೇರ ಸಂಬಂಧವಿದೆ.
ವರ್ತಮಾನದ ದ್ವೇಷ ಭಾಷಣಗಳು ಭವಿಷ್ಯದ ನರಮೇಧಗಳ ಬೀಜಗಳು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ದ್ವೇಷ ಭಾಷಣ ಕೇವಲ ಆ ವೇದಿಕೆಗೆ ಸೀಮಿತವಾಗಿ ಉಳಿಯುವುದಿಲ್ಲ. ಅದು ಬೀಜವಾಗಿ ಜನಸಾಮಾನ್ಯರ ಎದೆಗೆ ಬಿದ್ದು ಮೊಳಕೆಯೊಡೆದು ಗಿಡ ಮರವಾಗಿ ವಿಷದ ಹೂ ಹಣ್ಣು ಬಿಟ್ಟು ಒಂದು ದಿನ ಭಾರೀ ನರಮೇಧಕ್ಕೆ ಕಾರಣವಾಗುತ್ತದೆ. ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಥಳಿತ, ಗುಂಪು ಹತ್ಯೆಯಂತಹ ಪ್ರಕರಣಗಳಿಗೆ ಪರೋಕ್ಷವಾಗಿ ಗೊಬ್ಬರ ಸುರಿಯುತ್ತಿರುವುದು ಈ ದ್ವೇಷ ಭಾಷಣಗಳೇ ಆಗಿವೆ. ಒಬ್ಬ ನಾಯಕನ ದ್ವೇಷದ ಮಾತುಗಳು ಯಾವುದೋ ಅಮಾಯಕ ವ್ಯಕ್ತಿಯ ಎದೆಗಿಳಿದು ಅದು ಅಲ್ಲಿ ಬೇರನ್ನು ಇಳಿ ಬಿಡುತ್ತವೆ. ಭಾಷಣ ಮಾಡಿದ ನಾಯಕ ಅದನ್ನು ಮರೆತು ಬಿಡಬಹುದು. ಆದರೆ ಅದು ಜನರ ಮನಸ್ಸು, ಹೃದಯದಲ್ಲಿ ಆಶ್ರಯ ಪಡೆದು ಬೆಳೆಯ ತೊಡಗುತ್ತದೆ. ಅಮೆರಿಕದ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಪ್ರಕಟಿಸಿರುವ ವಾರ್ಷಿಕ ಜಾಗತಿಕ ಅಧ್ಯಯನ ವರದಿಯ ಪ್ರಕಾರ ಭಾರತವು ಮುಂದಿನ ಎರಡು ವರ್ಷಗಳಲ್ಲಿ ನಾಗರಿಕರ ವಿರುದ್ಧ ಸಾಮೂಹಿಕ ಹಿಂಸಾಚಾರ ಮತ್ತು ಜನಾಂಗೀಯ ದೌರ್ಜನ್ಯಗಳ ಗಂಭೀರ ಅಪಾಯಕ್ಕೆ ಸಿಲುಕಬಹುದು. ಹತ್ಯಾಕಾಂಡ ನಡೆಯುವ ಸಾಧ್ಯತೆಯಿರುವ 168 ದೇಶಗಳ ಪಟ್ಟಿಯಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದೆ. ಇಂತಹದೊಂದು ಅಪಾಯಕ್ಕೆ ಈ ದೇಶವನ್ನು ತಳ್ಳುತ್ತಿರುವವರು ಸ್ವತಃ ಈ ದೇಶವನ್ನು ಆಳುತ್ತಿರುವವರೇ ಎನ್ನುವುದು ದೊಡ್ಡ ವಿಪರ್ಯಾಸವಾಗಿದೆ. ದ್ವೇಷ ಭಾಷಣಗಳು ಈ ದೇಶವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಿ ತೆಗೆದುಕೊಳ್ಳಲಿರುವ ಅತ್ಯಂತ ಅಪಾಯಕಾರಿ ವೈರಸ್‌ಗಳಾಗಿವೆ. ಈ ವೈರಸ್‌ಗಳಿಗೆ ಪರಿಣಾಮಕಾರಿ ಲಸಿಕೆಯನ್ನು ತಕ್ಷಣ ಸಂಶೋಧಿಸದೇ ಇದ್ದರೆ ಭಾರತಕ್ಕೆ ಯಾವ ಭವಿಷ್ಯವೂ ಇಲ್ಲ.