ಪ್ರಜಾಸತ್ತೆಯ ಕಟ್ಟಡದ ಮೇಲೆ ಎಸ್‌ಐಆರ್ ಬುಲ್ಡೋಜರ್
ಸಾಂದರ್ಭಿಕ ಚಿತ್ರ | Photo Credit ; PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣಾ ಆಯೋಗದ ‘ಬುಲ್ಡೋಜರ್ ಕಾರ್ಯಾಚರಣೆ’ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಶ್ಚಿಮಬಂಗಾಳದಲ್ಲಿ ಬೂತ್‌ಮಟ್ಟದ ಮಹಿಳಾ ಸಿಬ್ಬಂದಿ ಸಾವನ್ನಪ್ಪುವುದರೊಂದಿಗೆ ಈ ರಾಜ್ಯದಲ್ಲಿ ಮೃತ ಬಿಎಲ್‌ಒಗಳ ಸಂಖ್ಯೆ ಏಳಕ್ಕೇರಿದೆ. ಮಾಲ್ಡಾ ಜಿಲ್ಲೆಯ ಪಕುರ್ತಲಾದ ಐಸಿಡಿಎಸ್ ಕಾರ್ಯಕರ್ತೆ ಸಂಪ್ರಿತಾ ಚೌಧುರಿ ಬುಧವಾರ ಮೃತಪಟ್ಟಿದ್ದಾರೆ. ‘‘ಕೆಲವು ದಿನಗಳ ಹಿಂದೆ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಆಕೆಯ ಮೇಲೆ ಎಸ್‌ಐಆರ್ ಹೊಣೆಯನ್ನು ಹೆಚ್ಚುವರಿಯಾಗಿ ಹೊರಿಸಲಾಯಿತು. ದೈನಂದಿನ ಕೆಲಸದ ಜೊತೆಗೆ ಈ ಒತ್ತಡ ಸಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಕೆಲ ದಿನ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದರೂ, ಎಸ್‌ಐಆರ್‌ಗಾಗಿ ಕೆಲಸ ಮಾಡುವುದು ಅನಿವಾರ್ಯವಾಯಿತು. ಕಾಯಿಲೆ ಉಲ್ಬಣಗೊಂಡು ಅವರು ಇಂದು ಮೃತಪಟ್ಟರು’’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಎಸ್‌ಐಆರ್‌ನ್ನು ಆತುರಾತುರವಾಗಿ ರಾಜ್ಯಗಳ ಮೇಲೆ ಹೇರುತ್ತಿರುವ ಪರಿಣಾಮವಾಗಿ ಸಂಭವಿಸುತ್ತಿರುವ ದುರಂತಗಳು ಹಲವು ಬಗೆಯದು. ಅವುಗಳಲ್ಲಿ ಬಿಎಲ್‌ಒಗಳ ಸಾವುಗಳು ಒಂದು ಸಣ್ಣ ಭಾಗ. ಚುನಾವಣಾ ಆಯೋಗದ ಅವಸರ ಮತ್ತು ಒತ್ತಡಕ್ಕೆ ಸಿಲುಕಿದ ಶಿಕ್ಷಕರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಕಂಗಾಲಾಗಿದ್ದಾರೆ. ಪರಿಷ್ಕರಣೆಯ ಅರ್ಜಿಗಳಲ್ಲಿರುವ ಗೊಂದಲಗಳು, ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳಿಂದ ಎದುರಾಗುತ್ತಿರುವ ಒತ್ತಡಗಳು, ಇನ್ನಿತರ ಸ್ಥಳೀಯ ರಾಜಕೀಯ ಹಸ್ತಕ್ಷೇಪಗಳಿಂದ ಚುನಾವಣಾ ಆಯೋಗ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ಬಿಎಲ್‌ಒಗಳು ವಿಫಲವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿಯೇತರ ರಾಜ್ಯಗಳು ಚುನಾವಣಾ ಆಯೋಗದ ಈ ಕಾರ್ಯದಲ್ಲಿ ಅಸಹಕಾರ ವ್ಯಕ್ತಪಡಿಸುತ್ತಿವೆ. ಇಂತಹ ಅಸಹಕಾರಗಳೂ ಬಿಎಲ್‌ಒಗಳನ್ನು ಉಭಯ ಸಂಕಟದಲ್ಲಿ ಸಿಲುಕಿಸಿವೆ. ಹಲವೆಡೆ ಬಿಎಲ್‌ಒಗಳನ್ನು ಅಮಾನತುಗೊಳಿಸಲಾಗಿದೆ. ಕೆಲವರ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದರಿಂದ ತೀವ್ರ ಆತಂಕ, ಖಿನ್ನತೆಗಳನ್ನು ಎದುರಿಸುತ್ತಿರುವ ಬಿಎಲ್‌ಒಗಳಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಹೃದಯಾಘಾತದಂತಹ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಪರಿಷ್ಕರಣೆಯ ಸಂದರ್ಭದಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ಕಿತ್ತು ಹಾಕಲಾಗುತ್ತದೆ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿದ್ದು, ಇದಕ್ಕೆ ಬೆದರಿ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಸ್‌ಐಆರ್ ಎಂದರೆ ವೇಷ ಮರೆಸಿ ಬಂದ ‘ಎನ್‌ಆರ್‌ಸಿ’ ಎನ್ನುವ ಆತಂಕ ಪಶ್ಚಿಮಬಂಗಾಳವು ಸೇರಿದಂತೆ ಈಶಾನ್ಯ ಭಾರತದಲ್ಲಿ ವ್ಯಾಪಕವಾಗಿದೆ. ಈಗಾಗಲೇ ಎನ್‌ಆರ್‌ಸಿಯ ಹೆಸರಿನಲ್ಲಿ ಅಸ್ಸಾಮಿನಂತಹ ರಾಜ್ಯಗಳಲ್ಲಿ ನೂರಾರು ಮಂದಿ ಬಂಧನ ಕೇಂದ್ರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಪಶ್ಚಿಮಬಂಗಾಳದಲ್ಲಿ ಬಡ ಕೂಲಿಕಾರ್ಮಿಕರ ತಲೆಗೆ ‘ಬಾಂಗ್ಲಾ ನುಸುಳುಕೋರರು’ ಎಂಬ ಹಣೆ ಪಟ್ಟಿ ಕಟ್ಟಿ ಅವರನ್ನು ಹೊರಹಾಕುವ ಸಂಚು ನಡೆಯುತ್ತಿವೆ. ಇದೀಗ ಎಸ್‌ಐಆರ್ ಮೂಲಕ ತಮ್ಮನ್ನು ಮತದಾರರ ಪಟ್ಟಿಯಿಂದ ಕಿತ್ತು ಹಾಕಿ ಆ ಮೂಲಕ ಭಾರತದ ಪೌರತ್ವವನ್ನೂ ನಮ್ಮಿಂದ ಕಿತ್ತುಕೊಳ್ಳಲಾಗುತ್ತದೆ ಎನ್ನುವ ಭಯ ಕಾರ್ಮಿಕ ವರ್ಗದಲ್ಲಿ ಮನೆ ಮಾಡಿದೆ. ಸೂಕ್ತ ದಾಖಲೆಗಳಿಲ್ಲದ ಕಾರ್ಮಿಕರೆಲ್ಲ ಅಭದ್ರತೆಯಿಂದ ದಿನ ಕಳೆಯುತ್ತಿದ್ದಾರೆ. ಪರಿಷ್ಕರಣೆಯ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಒದಗಿಸದ ಕಾರಣಕ್ಕಾಗಿ ಸುಕ್ಷಿತರಿಗೇ ಚುನಾವಣಾ ಆಯೋಗ ನೋಟಿಸ್‌ಗಳನ್ನು ನೀಡುತ್ತಿದೆ. ಹೀಗಿರುವಾಗ, ಈ ವಲಸೆ ಕಾರ್ಮಿಕರು ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನು ಎಲ್ಲಿಂದ ತರಬೇಕು? ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗುತ್ತದೆ ಎಂಬ ಭಯದಿಂದ ಹಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ಬುಲ್ಡೋಜರ್ ಕಾರ್ಯಾಚರಣೆಗೆ ಈ ಬಡ ಕಾರ್ಮಿಕರು ನೇರ ಬಲಿಪಶುಗಳಾಗುತ್ತಿದ್ದಾರೆ.
ಇನ್ನೊಂದೆಡೆ ಎಸ್‌ಐಆರ್ ಇಡೀ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಪರಿಷ್ಕರಣೆಯ ಬಳಿಕ ಚುನಾವಣಾ ಆಯೋಗವು ಪ್ರಕಟಿಸಿದ ನೂತನ ಪಟ್ಟಿಯಲ್ಲಿ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 6.5 ಕೋಟಿ ಮತದಾರರ ಹೆಸರು ಮಾಯವಾಗಿವೆ. ಅ. 27ರಂದು ಆರಂಭಗೊಂಡಿದ್ದ ಎಸ್‌ಐಆರ್‌ನ ಎರಡನೇ ಹಂತದ ಮೊದಲು ಈ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು 50.90 ಕೋಟಿ ಮತದಾರರನ್ನು ಹೊಂದಿದ್ದವು. ಪ್ರತ್ಯೇಕ ಪರಿಷ್ಕರಣೆಯ ಪಟ್ಟಿಗಳ ಪ್ರಕಟಣೆಯ ಬಳಿಕ ಈ ಮತದಾರರ ಸಂಖ್ಯೆ 44.40 ಕೋಟಿಗೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಪಟ್ಟಿಗಳಿಂದ ಸುಮಾರು 2.89 ಕೋಟಿ ಹೆಸರುಗಳು ಹೊರ ಬಿದ್ದಿವೆ. ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ 3.66 ಕೋಟಿ ಮತದಾರರ ಹಕ್ಕು ಅಪಾಯದಲ್ಲಿದೆ. ಅಂದರೆ ನಾಳೆ ಇಷ್ಟು ಪ್ರಮಾಣದ ಮತದಾರರು ಚುನಾವಣಾ ಆಯೋಗ ಹೇಳಿದ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಇವರೆಲ್ಲರನ್ನು ಹೊರಗಿಟ್ಟು ಚುನಾವಣೆಯನ್ನು ನಡೆಸುತ್ತದೆಯೆ? ಇವರು ಮತದಾರರ ಪಟ್ಟಿಯಿಂದ ಹೊರಬೀಳುವುದರೊಂದಿಗೆ ಈ ದೇಶದ ಪೌರತ್ವವನ್ನೂ ಪರೋಕ್ಷವಾಗಿ ಕಳೆದುಕೊಳ್ಳುತ್ತಾರೆ. ಹಾಗಾದರೆ ಇವರೆಲ್ಲ ಯಾರು? ಮತದಾರರ ಪಟ್ಟಿಯಿಂದ ಹೊರ ಬಿದ್ದ ಅಷ್ಟೂ ಮತದಾರರನ್ನು ಪಾಕಿಸ್ತಾನ, ಬಾಂಗ್ಲಾದ ನುಸುಳುಕೋರರು ಎಂದು ಚುನಾವಣಾ ಆಯೋಗ ನಿರ್ಧರಿಸಿದೆಯೆ? ವಿಶ್ವಾಸಾರ್ಹತೆಯನ್ನು ಹೊಂದಿಲ್ಲದ ಸಾಫ್ಟ್ ವೇರ್‌ಗಳ ಮೂಲಕ ನಡೆಸುತ್ತಿರುವ ಈ ಪರಿಷ್ಕರಣೆಯ ಮೂಲಕ ಚುನಾವಣಾ ಆಯೋಗ ಸಂವಿಧಾನದ ಆಶಯಗಳನ್ನೇ ಬುಡಮೇಲುಗೊಳಿಸಲು ಮುಂದಾಗಿದೆ. ಚುನಾವಣಾ ಆಯೋಗವು ಪರಿಷ್ಕರಣೆಯ ಹೆಸರಿನಲ್ಲಿ ಭಾರತದ ಆರೂವರೆ ಕೋಟಿ ಪೌರರನ್ನು ಪರೋಕ್ಷವಾಗಿ ಕೊಂದು ಹಾಕಲು ಹೊರಟಿದೆ. ಇದರಲ್ಲೇನಾದರೂ ಯಶಸ್ವಿಯಾದರೆ, ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ನರಮೇಧ ನಡೆಸಿದ ಹೆಗ್ಗಳಿಕೆ ಚುನಾವಣಾ ಆಯೋಗಕ್ಕೆ ಸೇರುತ್ತದೆ. ಆರೂವರೆ ಕೋಟಿಗೂ ಅಧಿಕ ಭಾರತೀಯರನ್ನು ಹೊರಗಿಟ್ಟು ನಡೆಸುವ ಚುನಾವಣೆಯು ಪ್ರಜಾಸತ್ತೆಯ ಕಗ್ಗೊಲೆಯಾಗಿದೆ.