×
Ad

ಅಕ್ರಮ ಬಂಧನದಲ್ಲಿ ನ್ಯಾಯ ದೇವತೆ?

Update: 2026-01-07 08:20 IST

ಉಮರ್ ಖಾಲಿದ್ ಹಾಗೂ ಶರ್ಜಿಲ್ ಇಮಾಮ್ | Photo Credit : PTI

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಉಮರ್ ಖಾಲಿದ್ ಜಾಮೀನು ನಿರಾಕರಣೆಯಿಂದ ನಿಜಕ್ಕೂ ಅನ್ಯಾಯವಾಗಿರುವುದು ನಮ್ಮ ನ್ಯಾಯ ವ್ಯವಸ್ಥೆಗೆ. ಎಲ್ಲೆಡೆ ನ್ಯಾಯದ ಬಾಗಿಲು ಮುಚ್ಚಿದಾಗ ‘ಸುಪ್ರೀಂಕೋರ್ಟ್‌ಗೆ ಹೋಗಿಯಾದರೂ ನ್ಯಾಯವನ್ನು ಪಡೆಯುತ್ತೇನೆ’ ಎಂಬ ಶ್ರೀಸಾಮಾನ್ಯನೊಬ್ಬನ ಆತ್ಮವಿಶ್ವಾಸ, ನಂಬಿಕೆಯ ಬೆನ್ನು ಮೂಳೆಯನ್ನು ಉಮರ್ ಖಾಲಿದ್‌ಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಮುರಿದು ಹಾಕಿದೆ. ಒಂದೆಡೆ ಈ ದೇಶದಲ್ಲಿ ವಿಚಾರಣೆಯ ಹೆಸರಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಸುಪ್ರೀಂಕೋರ್ಟ್, ಉಮರ್ ಖಾಲಿದ್ ವಿಷಯದಲ್ಲಿ ಮಾತ್ರ ‘ದೀರ್ಘ ಕಾಲದ ಜೈಲು ವಾಸವು ಜಾಮೀನು ಪಡೆಯಲು ಸಂಪೂರ್ಣ ಅರ್ಹತೆಯಾಗುವುದಿಲ್ಲ’’ ಎಂದು ಷರಾ ಬರೆದಿದೆ. 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಆದರೆ ಅವರ ಸಹವರ್ತಿಗಳಾಗಿರುವ ಇತರ ಐದು ಮಂದಿಗೆ ಶರತ್ತುಗಳ ಜೊತೆಗೆ ಜಾಮೀನು ಮಂಜೂರು ಮಾಡಿದೆ. ಜಾಮೀನಿಗೆ ವಿಧಿಸಿರುವ ಕಠಿಣ ನಿಯಮಗಳು ಅವರ ಪಾಲಿಗೆ ಹೊರ ಜಗತ್ತನ್ನೂ ಜೈಲಾಗಿಯೇ ಪರಿವರ್ತಿಸಿದೆ. ಸಾಮಾಜಿಕ ಅಥವಾ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಅವರ ಎಲ್ಲಾ ಹಕ್ಕುಗಳಿಗೆ ಕತ್ತರಿ ಹಾಕಲಾಗಿದೆ ಮಾತ್ರವಲ್ಲ, ಅವರ ಪ್ರತಿ ಹೆಜ್ಜೆಗಳ ಮೇಲೂ ಕಣ್ಣಿಡುವುದಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಯಾವುದೇ ಭಯೋತ್ವ್ವಾದನಾ ಕೃತ್ಯಗಳಲ್ಲಿ ನೇರವಾಗಿ ಭಾಗವಹಿಸಿದ ಆರೋಪ ಉಮರ್ ಖಾಲಿದ್ ಮೇಲಾಗಲಿ, ಶರ್ಜೀಲ್ ಇಮಾಮ್ ಮೇಲಾಗಲಿ ಇಲ್ಲ. ಉಮರ್ ಖಾಲಿದ್ ಮೇಲಿರುವ ಆರೋಪಗಳ ವಿಚಾರಣೆಯೇ ಕಳೆದ ಐದು ವರ್ಷಗಳಲ್ಲಿ ನಡೆದಿಲ್ಲ. ಹೀಗಿರುವಾಗ, ಯುಎಪಿಎ ಕಾಯ್ದೆಯನ್ನು ಮುಂದಿಟ್ಟುಕೊಂಡು ಐದು ವರ್ಷಗಳ ದೀರ್ಘ ಸೆರೆಮನೆವಾಸದ ಬಳಿಕವೂ ಈ ಜಾಮೀನು ನಿರಾಕರಣೆ ಎಷ್ಟರಮಟ್ಟಿಗೆ ನ್ಯಾಯಯುತವಾಗಿದೆ ಎಂದು ಕಾನೂನು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ದಿಲ್ಲಿ ಗಲಭೆಗೆ ಪೂರ್ವದಲ್ಲಿ ಬಿಜೆಪಿ ನಾಯಕನೊಬ್ಬ ‘‘ಗೋಲಿ ಮಾರೋ ಸಾಲೋಂಕೋ’ ಎಂದು ಬಹಿರಂಗ ಕರೆ ನೀಡಿರುವುದು ದಿಲ್ಲಿ ಪೊಲೀಸರಿಗೆ ಪ್ರಚೋದನೆ ಎಂದು ಅನ್ನಿಸಿಲ್ಲ. ಆದರೆ ಯಾವುದೇ ಹಿಂಸಾತ್ಮಕ ಅಥವಾ ಪ್ರಚೋದನಾತ್ಮಕ ಹೇಳಿಕೆಗಳನ್ನು ತನ್ನ ಭಾಷಣದಲ್ಲಿ ನೀಡಿರದೇ ಇದ್ದರೂ ಉಮರ್ ಖಾಲಿದ್‌ರ ಮಾತುಗಳಲ್ಲಿ ಭಯೋತ್ಪಾದನೆಯ ‘ವಿಧಾನ’ಗಳು ಸುಪ್ರೀಂಕೋರ್ಟ್‌ಗೆ ಗೋಚರಿಸಿರುವುದು ಹೇಗೆ ಎಂದು ಹಿರಿಯ ನ್ಯಾಯವಾದಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ.ಶರ್ಜೀಲ್ ಇಮಾಮ್ ರಸ್ತೆ ತಡೆ, ಚಕ್ಕಜಾಂಗೆ ಕರೆ ನೀಡಿರುವುದನ್ನು ಭಯೋತ್ಪಾದನಾ ಕೃತ್ಯವಾಗಿ ಸುಪ್ರೀಂಕೋರ್ಟ್ ಭಾವಿಸುತ್ತದೆ. ಆದರೆ ಈ ದೇಶದ ಹಲವು ಹೋರಾಟಗಳಲ್ಲಿ ರಸ್ತೆ ತಡೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಾ ಬಂದಿದ್ದಾರೆ. ಈ ದೇಶದ ರೈತ ಹೋರಾಟಗಳು ರಸ್ತೆ ತಡೆಗಳ ಮೂಲಕ ಹಲವು ಬಾರಿ ನಡೆದಿವೆ. ರಸ್ತೆ ತಡೆಗೆ ಕರೆ ನೀಡಿರುವುದು ಭಯೋತ್ಪಾದನಾ ಚಟುವಟಿಕೆಯಾಗಿ ಸುಪ್ರೀಂಕೋರ್ಟ್‌ಗೆ ಕಂಡ ಬಗೆಯಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ರಸ್ತೆ ತಡೆಗಳನ್ನು ‘ಭಯೋತ್ಪಾದನಾ ಕೃತ್ಯ’ಗಳಾಗಿ ನ್ಯಾಯಾಲಯ ಪರಿಭಾವಿಸುವ ಸಾಧ್ಯತೆಗಳಿವೆಯೇ ಎಂದು ಆತಂಕಪಡುವಂತಾಗಿದೆ. ಜಾಮೀನು ನಿರಾಕರಣೆಗೆ ಸುಪ್ರೀಂಕೋರ್ಟ್ ಮಂಡಿಸಿರುವ ತರ್ಕವನ್ನು, ಮುಂದಿನ ದಿನಗಳಲ್ಲಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧದ ಎಲ್ಲ ಪ್ರತಿಭಟನೆಗಳ ವಿರುದ್ಧ, ಪ್ರತಿಭಟನಾಕಾರರ ವಿರುದ್ಧ ಅನ್ವಯಿಸಬಹುದಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹತ್ತು ಹಲವು ವಿರೋಧಾಭಾಸಗಳಿರುವುದನ್ನು ಕಾನೂನು ತಜ್ಞರು ಎತ್ತಿ ತೋರಿಸಿದ್ದಾರೆ. ವಿಚಾರಣೆ ಯಾಕೆ ವಿಳಂಬವಾಗುತ್ತಿದೆ ಎನ್ನುವುದನ್ನು ಪರಿಗಣಿಸಲು ಸುಪ್ರೀಂಕೋರ್ಟ್ ಸಿದ್ಧವಿರಲಿಲ್ಲ. ಒಂದೆಡೆ ದೀರ್ಘಕಾಲ ವಶದಲ್ಲಿಟ್ಟಿರುವುದನ್ನು ತಪ್ಪು ಎಂದು ಹೇಳುತ್ತಲೇ, ಅದರ ಆಧಾರದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದೂ ಹೇಳುತ್ತದೆ. ವಿಚಾರಣೆಯೇ ನಡೆಯದ ಪ್ರಕರಣದಲ್ಲಿ, ಖಾಲಿದ್‌ರನ್ನು ಯಾವ ಆಧಾರದಲ್ಲಿ ಪ್ರಮುಖ ಆರೋಪಿಯೆಂದು ಭಾವಿಸುತ್ತದೆ ಎನ್ನುವುದೂ ಸ್ಪಷ್ಟವಿಲ್ಲ. ಒಂದು ರೀತಿಯಲ್ಲಿ ವಿಚಾರಣೆ ನಡೆಯುವ ಮುನ್ನವೇ ಉಮರ್ ಖಾಲಿದ್‌ರನ್ನು ನ್ಯಾಯಾಲಯ ಅಪರಾಧಿಯೆಂದು ಘೋಷಿಸಿದೆ. ‘ರಹಸ್ಯ ಸಾಕ್ಷ್ಯದ ಪರಿಶೀಲನೆ ಒಂದು ವರ್ಷದ ಒಳಗೆ ನಡೆಯದೇ ಇದ್ದಲ್ಲಿ ಮತ್ತೆ ಜಾಮೀನು ಅರ್ಜಿ ಹಾಕಬಹುದು’’ ಇದು ಸುಪ್ರೀಂ ಕೋರ್ಟ್ ಉಮರ್ ಖಾಲಿದ್‌ಗೆ ತೋರಿಸಿದ ಬಹುದೊಡ್ಡ ಕೃಪೆ.

ಮೋದಿ ಸರಕಾರ ವರ್ಷಗಳ ಹಿಂದೆ ನ್ಯಾಯ ದೇವತೆಯ ಕಣ್ಣ ಪಟ್ಟಿಯನ್ನು ಬಿಚ್ಚಿತು. ತ್ವರಿತ ನ್ಯಾಯದ ಸಂಕೇತವಾಗಿದ್ದ ಖಡ್ಗವನ್ನು ಕಿತ್ತುಕೊಂಡು ನ್ಯಾಯ ದೇವತೆಯ ಕೈಗೆ ಪುಸ್ತಕವನ್ನು ನೀಡಿತು. ಇದೀಗ ನ್ಯಾಯ ದೇವತೆಯ ಕೈಯಲ್ಲಿರುವ ಆ ಪುಸ್ತಕ ನಿಜಕ್ಕೂ ಸಂವಿಧಾನದ ಪುಸ್ತಕ ಹೌದೇ ಎಂದು ಜನಸಾಮಾನ್ಯರು ಅನುಮಾನಿಸುವಂತಾಗಿದೆ. ಯಾವುದೇ ಜಾತಿ, ಧರ್ಮ, ವರ್ಗಗಳನ್ನು ನೋಡದೆ ನ್ಯಾಯ ನೀಡಬೇಕು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಕಟ್ಟಲಾಗಿತ್ತು. ಇದೀಗ ನ್ಯಾಯದೇವತೆಗೆ ತನ್ನೆದುರು ನಿಂತಿರುವ ಉಮರ್ ಖಾಲಿದ್‌ರ ಧರ್ಮ ಸ್ಪಷ್ಟವಾಗಿ ಕಾಣುತ್ತಿರುವ ಕಾರಣಕ್ಕೇ ನ್ಯಾಯ ವಿಳಂಬವಾಗುತ್ತಿದೆಯೇ ಎಂದು ಜನರು ಅನುಮಾನ ಪಡುವಂತಾಗಿದೆ. ಒಂದು ರೀತಿಯಲ್ಲಿ ಕಳೆದ ಐದು ವರ್ಷಗಳಿಂದ ಯುಎಪಿಎ ಕಾಯ್ದೆಯ ಹೆಸರಿನಲ್ಲಿ ಉವರ್ ಖಾಲಿದ್ ಮೂಲಕ ನಮ್ಮ ನ್ಯಾಯವ್ಯವಸ್ಥೆಯೇ ‘ಅಕ್ರಮ ಬಂಧನ’ದಲ್ಲಿದೆ ಎಂದು ಕಾನೂನು ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಈ ದೇಶದಲ್ಲಿ ಜಾಮೀನು ಮಂಜೂರಾಗಿದ್ದರೂ 5,000ಕ್ಕೂ ಅಧಿಕ ವಿಚಾರಣಾಧೀನ ಕೈದಿಗಳು ಶರತ್ತುಗಳನ್ನು ಪೂರೈಸಲಾಗದೆ ಜೈಲುಗಳಲ್ಲೇ ಕೊಳೆಯುತ್ತಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ಲಕ್ಷಾಂತರ ವಿಚಾರಣಾಧೀನ ಕೈದಿಗಳು ಅಪರಾಧ ಸಾಬೀತಾಗದಿದ್ದರೂ ಪರೋಕ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಕುರಿತಂತೆ ಸುಪ್ರೀಂಕೋರ್ಟ್ ಹಲವು ಬಾರಿ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಆದರೆ ಉಮರ್ ಖಾಲಿದ್‌ರ ಪ್ರಕರಣ ಬಂದಾಗ ಸುಪ್ರೀಂಕೋರ್ಟ್‌ನ ಕಣ್ಣೇಕೆ ಕುರುಡಾಯಿತು? ಉಮರ್ ಖಾಲಿದ್‌ರ ವಿಷಯದಲ್ಲಿ ದಿಲ್ಲಿ ಪೊಲೀಸರ ಆಮೆಗತಿ ತನಿಖೆ ಕಾನೂನಿನ ವೈಫಲ್ಯವೆನ್ನುವುದು ಸುಪ್ರೀಂಕೋರ್ಟ್‌ಗೆ ಅರ್ಥವಾಗಿಲ್ಲವೆ? ಪೊಲೀಸರ ಪೂರ್ವಾಗ್ರಹ ಪೀಡಿತ ತನಿಖೆಗೆ ಬಲಿಯಾಗಿ ಅಕ್ರಮ ಬಂಧನದಲ್ಲಿ ಐದು ವರ್ಷ ಕಳೆದಿರುವ ನ್ಯಾಯ ದೇವತೆಗೆ ನ್ಯಾಯ ನೀಡುವವರು ಯಾರು? ಈ ಪ್ರಶ್ನೆಗೆ ಉತ್ತರ ಯಾರಲ್ಲಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News