×
Ad

ನೀಟ್ ಅಕ್ರಮ ಖಂಡಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ

Update: 2026-07-02 00:01 IST

ಶಿವಮೊಗ್ಗ : ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ಖಂಡಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ನೀಟ್ ರದ್ದುಗೊಳಿಸಿ, ಸಿಇಟಿ ಜಾರಿಗೆ ತನ್ನಿ’ ಎನ್ನುವ ಘೋಷಣೆಯೊಂದಿಗೆ ನಗರದ ಸೈನ್ಸ್ ಮೈದಾನ ಹಾಗೂ ಬಸ್ ನಿಲ್ದಾಣದಿಂದ ಗೋಪಿ ವೃತ್ತದವರೆಗೂ ಎರಡು ಪ್ರತ್ಯೇಕ ಮೆರವಣಿಗೆಯ ಮೂಲಕ ಬಂದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದು ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೆರವಣಿಗೆ ನಂತರ ಗೋಪಿ ವೃತ್ತದಲ್ಲಿ ನೀಟ್ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ, ಸಿಇಟಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು, ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವೈಫಲ್ಯವೇ ಕಾರಣವಾಗಿದ್ದು, ತಕ್ಷಣವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 12 ವರ್ಷಗಳಲ್ಲಿ 75 ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿವೆ. ಸುಸೂತ್ರವಾಗಿ ಪರೀಕ್ಷೆ ನಡೆಸಲಾಗದ ಇಂತಹ ಸರಕಾರ ಹೇಗೆ ದೇಶದ ಜನತೆಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯ?. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೆ ತಂದ ಸಿಇಟಿ ಪರೀಕ್ಷೆ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಕೇಂದ್ರ ಸರಕಾರವು ಉತ್ತರ ಭಾರತದ ಲಾಭಿಗೆ ಮಣಿದು, ನೀಟ್ ರೂಪಿಸಿದೆ ಎಂದು ಕಿಡಿಕಾರಿದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸೇವಾ ದಳದ ನೂತನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ದಿಲ್ಲಿಯಿಂದ ದೂರವಾಣಿ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿ, ನೀಟ್ ವಿರುದ್ಧ ಕಾಂಗ್ರೆಸ್ ರಾಷ್ಟ್ರ ವ್ಯಾಪಿ ಹೋರಾಟ ರೂಪಿಸಿದೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ತನಕ ಈ ಹೋರಾಟ ನಡೆಯಲಿದೆ ಎಂದು ಘೋಷಿಸಿದರು.

ಮನಪಾ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಮಕ್ಕಳಿಗೆ ಎರಡು ಬಾರಿ ಪರೀಕ್ಷೆ ಬರೆಯುವ ದುಸ್ಥಿತಿಯನ್ನು ಕೇಂದ್ರದ ಬಿಜೆಪಿ ಸರಕಾರ ತಂದೊಡ್ಡಿದೆ. ಒಳ್ಳೆಯ ರೀತಿಯಲ್ಲಿ ಪರೀಕ್ಷೆ ನಡೆಸುವ ಯೋಗ್ಯತೆಯೂ ಈ ಸರಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.

ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಪರೀಕ್ಷಾ ಪೇ ಚರ್ಚೆ ನಡೆಸುವ ಈ ದೇಶದ ಪ್ರಧಾನಿಗೆ, ಒಳ್ಳೆಯ ರೀತಿಯಲ್ಲಿ ಪರೀಕ್ಷೆ ಹೇಗೆ ನಡೆಸಬೇಕೆನ್ನುವುದೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಖಾನ್, ರಾಜ್ಯ ಜವಳಿ ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ಗೌಡ, ಮುಖಂಡರಾದ ಶ್ರೀನಿವಾಸ್ ಕರಿಯಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ರವಿಕುಮಾರ್, ಕಲಗೋಡು ರತ್ನಾಕರ ಮಾತನಾಡಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಜಿ.ಡಿ.ಮಂಜುನಾಥ್ ಹಾಗೂ ರಮೇಶ್ ಶಂಕರಘಟ್ಟ, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಮುಖಂಡರಾದ ವಿಜಯ್ ಕುಮಾರ್, ಕೆ.ದೇವೇಂದ್ರಪ್ಪ, ಆರ್. ರಾಜಶೇಖರ್, ಡಾ. ನೇತ್ರಾವತಿ, ಸ್ಟೇಲಾ ಮಾರ್ಟಿನ್, ಅರ್ಚನಾ ನಿರಂಜನ್, ಸಮಿನಾ ಕೌಸರ್, ಯು. ಶಿವಾನಂದ್, ಡಾ.ಶರತ್ ಮರಿಯಪ್ಪ, ಮಧು ಸೂದನ್, ಸುವರ್ಣ ನಾಗರಾಜ್, ಎಸ್.ಪಿ.ಶೇಷಾದ್ರಿ, ಶಿವಕುಮಾರ್, ಪಾಲಾಕ್ಷಿ, ಹರ್ಷಿತ್ ಗೌಡ, ಬಸವರಾಜ್, ಶಿವಣ್ಣ, ಸವಿತಾ ಮತ್ತಿತರರಿದ್ದರು.

ಕೇಂದ್ರ ಸರಕಾರ ದೇಶದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿದೆ. ಕೇಂದ್ರದ ವೈಫಲ್ಯಕ್ಕೆ ಈಗ 13 ಮಕ್ಕಳು ಬಲಿಯಾಗಿದ್ದಾರೆ. ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರು ಮೃತಪಟ್ಟ ಮಕ್ಕಳ ಕುಟುಂಬದವರಿಗೆ ಕನಿಷ್ಠ ಸಾಂತ್ವನವೂ ಹೇಳಿಲ್ಲ. ಅಷ್ಟು ದುರಹಂಕಾರ ಕೇಂದ್ರದ ಬಿಜೆಪಿ ಸರಕಾರಕ್ಕೆ ಬಂದಿದೆ.

-ಬಲ್ಕೀಸ್ ಬಾನು, ವಿಧಾನ ಪರಿಷತ್ ಸದಸ್ಯೆ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News