×
Ad

ಮುಸ್ಲಿಮರ ಮತಕ್ಕಾಗಿ ಆರೆಸ್ಸೆಸ್‌ ವಿರುದ್ಧ ಟೀಕೆ : ಪ್ರಿಯಾಂಕ್ ಖರ್ಗೆ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ

Update: 2026-06-24 14:13 IST

ಆರಗ ಜ್ಞಾನೇಂದ್ರ

ಶಿವಮೊಗ್ಗ: ಆರೆಸ್ಸೆಸ್‌ ವಿರುದ್ಧ ಮಾತನಾಡಿದರೆ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಸಿಗುತ್ತವೆ ಎಂಬ ಭಾವನೆಯಿಂದ ಸಚಿವ ಪ್ರಿಯಾಂಕ್ ಖರ್ಗೆ ಆರೆಸ್ಸೆಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಹಾಗೂ ಬಿ.ಕೆ.ಹರಿಪ್ರಸಾದ್ ಅವರು ಆರೆಸ್ಸೆಸ್‌ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಹಿಂದೂ ಧರ್ಮದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ಹಿಂದೂ ಮತಗಳು ದೂರವಾಗುವ ಭೀತಿಯಿಂದ ಆರೆಸ್ಸೆಸ್‌ ಅನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಆರೆಸ್ಸೆಸ್‌ ಗೆ 100 ವರ್ಷಗಳ ಇತಿಹಾಸವಿದ್ದು, ದೇಶಭಕ್ತರನ್ನು ನಿರ್ಮಾಣ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ. ಸಂಘದ ಚಟುವಟಿಕೆಗಳ ಬಗ್ಗೆ ಜನರಿಗೆ ಸಂಪೂರ್ಣ ಅರಿವಿದೆ. ಕೋಟ್ಯಾಂತರ ಜನರು ಆರೆಸ್ಸೆಸ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಕಾಂಗ್ರೆಸ್‌ನವರು ಸಂಘವನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಆರೆಸ್ಸೆಸ್‌ ಗೆ ನೋಟಿಸ್ ನೀಡುವುದಾಗಿ ಹೇಳುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಅವರು, ಕಾನೂನುಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡಲಿ. ಅನೇಕ ಪ್ರಕರಣಗಳು ಈಗಾಗಲೇ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಟ್ಟಿವೆ. ಹೊಸದಾಗಿ ಕಾಂಗ್ರೆಸ್ ನಾಯಕರು ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದರು.

ಇತ್ತೀಚಿನ ಚುನಾವಣೆಯಲ್ಲಿ ಮುಸ್ಲಿಂ ಮತಗಳಲ್ಲಿ ಕಾಂಗ್ರೆಸ್‌ಗೆ ವ್ಯತ್ಯಾಸ ಉಂಟಾಗಿರುವ ಹಿನ್ನೆಲೆಯಲ್ಲಿ, ಮೌಲ್ವಿಗಳು ಹಾಗೂ ಧಾರ್ಮಿಕ ಮುಖಂಡರು ಕಾಂಗ್ರೆಸ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಒತ್ತಡವನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ಆರೆಸ್ಸೆಸ್‌ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದು ಕೇವಲ ರಾಜಕೀಯ ತಂತ್ರ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ :

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿರುವುದು ನೋವು ತಂದಿದೆ. ಬಿಜೆಪಿಯಂತಹ ಪಕ್ಷಕ್ಕೆ ದ್ರೋಹ ಮಾಡುವುದನ್ನು ಯಾರೂ ಮಾಡಬಾರದು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಅಡ್ಡ ಮತದಾನದ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾಧ್ಯಕ್ಷರು ತನಿಖೆಗೆ ಸಮಿತಿ ರಚಿಸಿದ್ದಾರೆ. ಇಂದು ಅಥವಾ ನಾಳೆ ವರದಿ ಸಲ್ಲಿಕೆಯಾಗಲಿದ್ದು, ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ರೆಸಾರ್ಟ್‌ನಲ್ಲಿ ಇರಿಸಿ ಮತ ಅಡ್ಡ ಹೋಗದಂತೆ ಬಂದೋಬಸ್ತ್ ಮಾಡಿತ್ತು. ಆದರೆ ಬಿಜೆಪಿ ನಾಯಕತ್ವವು ಶಾಸಕರ ಮೇಲೆ ನಂಬಿಕೆ ಇಟ್ಟಿತ್ತು. ಕೆಲವರು ಆ ನಂಬಿಕೆಗೆ ದ್ರೋಹ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮಸ್ಥಳದಂತಹ ಶ್ರದ್ಧಾ ಕೇಂದ್ರಗಳನ್ನು ರಾಜಕೀಯಕ್ಕೆ ಬಳಸಬಾರದು ಎಂದು ಕೆಲ ಹಿರಿಯರು ಸಲಹೆ ನೀಡಿದ್ದರಿಂದ ಆ ಪ್ರಯತ್ನದಿಂದ ಹಿಂದೆ ಸರಿಯಲಾಗಿದೆ. ಬಿಜೆಪಿ ತನ್ನದೇ ಮತಗಳಿಂದ ಗೆಲುವು ಸಾಧಿಸಿದೆ. ಆದರೆ ಕೆಲ ಮತಗಳು ಅಡ್ಡ ಹೋಗಿರುವುದು ವಿಶ್ವಾಸಘಾತಕತನವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News