Shivamogga | ಸಿಎಂ ಪಿಎ ಹೆಸರಲ್ಲಿ ವ್ಯಕ್ತಿಗೆ 15 ಲಕ್ಷ ರೂ. ವಂಚನೆ; ಆರೋಪಿಯ ಬಂಧನ

Update: 2026-07-30 01:08 IST

ಶಿವಮೊಗ್ಗ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಸಹಾಯಕ (ಪಿ.ಎ.) ಎಂದು ಪರಿಚಯಿಸಿಕೊಂಡು ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂ. ವಂಚನೆ ಎಸಗಿದ ಆರೋಪದಲ್ಲಿ ತುಂಗಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಬಂಧಿತ ಆರೋಪಿ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್ ಎಂಬಾತ ತಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಿ.ಎ. ಎಂದು ಪರಿಚಯಿಸಿಕೊಂಡು, ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿ ದೂರುದಾರ ಶಿವಮೊಗ್ಗದ ಕೆಎಚ್‌ಬಿ ಕಾಲನಿಯ ನಿವಾಸಿ ಹಾಗೂ ರೈತರಾದ ಮಂಜುನಾಥ ಹಂಜಿ ಅವರಿಂದ ವಿವಿಧ ಹಂತಗಳಲ್ಲಿ ಒಟ್ಟು 15 ಲಕ್ಷ ರೂ. ಪಡೆದಿದ್ದ. ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ಶಿವಮೊಗ್ಗದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್ ಹಾಗೂ ವಡ್ಡಿನಕೊಪ್ಪದಲ್ಲಿಯೂ ನಗದು ರೂಪದಲ್ಲಿ ಹಣ ಸ್ವೀಕರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಂತರ ಲೈಸೆನ್ಸ್ ಕೊಡಿಸದೇ ಹಣದೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ದೂರುದಾರ ಮಂಜುನಾಥ ಹಂಜಿ ಅವರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತುಂಗಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ್‌ನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News