ಸಾಂದರ್ಭಿಕ ಚಿತ್ರ (Photo: Magnific)

ಹೊಸದಿಲ್ಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್‌ ವಾಟ್ಸಾಪ್‌ ನ ಹೆಸರಿನಲ್ಲಿ ನಕಲಿ ಆ್ಯಪ್‌ ವೊಂದು ಗೂಗಲ್‌ ಪ್ಲೇ ಸ್ಟೋರ್‌ ನಲ್ಲಿ 5 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿರುವುದು ವರದಿಯಾಗಿದೆ. ಅಧಿಕೃತ ವಾಟ್ಸಾಪ್‌ ಗಿಂತ ಮೇಲ್ಭಾಗದಲ್ಲೇ ಪ್ರಾಯೋಜಿತ ಹುಡುಕಾಟ ಫಲಿತಾಂಶವಾಗಿ ಕಾಣಿಸಿಕೊಂಡಿರುವ ಈ ಆ್ಯಪ್‌, ಬಳಕೆದಾರರು ಸುಲಭವಾಗಿ ಮೋಸ ಹೋಗುವ ಆತಂಕ ಮೂಡಿಸಿದೆ.

ರೆಡ್ಡಿಟ್ ಬಳಕೆದಾರರೊಬ್ಬರು ಈ ನಕಲಿ ಆ್ಯಪ್‌ ಅನ್ನು ಗುರುತಿಸಿದ್ದು, ಬಳಿಕ ‘ಆಂಡ್ರಾಯ್ಡ್ ಅಥಾರಿಟಿ’ ಮತ್ತು ‘ದಿ ವರ್ಜ್’ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಅಕ್ಟೋಬರ್‌ 16ರಂದು ‘ದಿ ವರ್ಜ್’ ವರದಿ ಪ್ರಕಟಿಸುವ ವೇಳೆಯಲ್ಲೂ ಆ್ಯಪ್‌ ಪ್ಲೇ ಸ್ಟೋರ್‌ ನಲ್ಲಿ ಲಭ್ಯವಿತ್ತು. ಈ ಬಗ್ಗೆ ಪ್ರತಿಕ್ರಿಯೆ ಕೋರಿ ಸಂಪರ್ಕಿಸಿದರೂ ಗೂಗಲ್‌ ನಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಅಧಿಕೃತ ಆ್ಯಪ್‌ ನಂತೆಯೇ ರೂಪ

‘WhatsApp Messenger’ ಎಂಬ ಹೆಸರಿನಲ್ಲಿ ಪಟ್ಟಿಮಾಡಲಾಗಿರುವ ಈ ಆ್ಯಪ್‌ ಅನ್ನು ‘Agment Assets sallu’ ಎಂಬ ಡೆವಲಪರ್‌ ಪ್ರಕಟಿಸಿದ್ದಾರೆ. ಈ ಡೆವಲಪರ್‌ ಪ್ಲೇ ಸ್ಟೋರ್‌ನಲ್ಲಿ ಬೇರೆ ಯಾವುದೇ ಆ್ಯಪ್‌ ಪ್ರಕಟಿಸಿಲ್ಲ ಎಂದು ವರದಿಯಾಗಿದೆ.

ನಕಲಿ ಆ್ಯಪ್‌ ನಲ್ಲಿ ಮೂಲ ವಾಟ್ಸಾಪ್‌ ನ ಐಕಾನ್‌, ಸ್ಕ್ರೀನ್‌ಶಾಟ್‌ ಗಳು ಮತ್ತು ವಿವರಣಾ ಪಠ್ಯವನ್ನು ಹೋಲುವ ಅಂಶಗಳನ್ನು ಬಳಸಲಾಗಿದೆ. ಹೀಗಾಗಿ, ಹೆಸರು ಮತ್ತು ನೋಟವನ್ನು ಮಾತ್ರ ಗಮನಿಸುವ ಬಳಕೆದಾರರಿಗೆ ಅಸಲಿ ಹಾಗೂ ನಕಲಿ ಆ್ಯಪ್‌ಗಳ ನಡುವಿನ ವ್ಯತ್ಯಾಸ ಗುರುತಿಸುವುದು ಕಷ್ಟವಾಗಬಹುದು.

‘ದಿ ವರ್ಜ್’ ವರದಿಯ ಪ್ರಕಾರ, ‘WhatsApp LLC’ ಪ್ರಕಟಿಸಿರುವ ಅಧಿಕೃತ ‘WhatsApp Messenger’ ಆ್ಯಪ್‌ 10 ಶತಕೋಟಿಗೂ ಹೆಚ್ಚು ಡೌನ್‌ಲೋಡ್‌ ಗಳನ್ನು ಮಾಡಲಾಗಿದೆ. ಅಲ್ಲದೆ, ‘ಎಡಿಟರ್ಸ್ ಚಾಯ್ಸ್‌’ ಬ್ಯಾಡ್ಜ್‌ ಮತ್ತು 24.6 ಕೋಟಿಗೂ ಹೆಚ್ಚು ವಿಮರ್ಶೆಗಳನ್ನು ದಾಖಲಾಗಿದೆ.

ವಿಮರ್ಶೆಗಳಿಂದಲೂ ಎಚ್ಚರಿಕೆ ಸಿಗದಂತೆ ತಂತ್ರ?

ಬಳಕೆದಾರರ ಸಾರ್ವಜನಿಕ ವಿಮರ್ಶೆಗಳು ಕಾಣಿಸದಂತೆ ಮಾಡಲು ಗೂಗಲ್‌ ಪ್ಲೇನ ‘ಅರ್ಲಿ ಆಕ್ಸೆಸ್‌’ ಯೋಜನೆಯನ್ನು ನಕಲಿ ಆ್ಯಪ್‌ ಪ್ರಕಟಕರು ಬಳಸಿಕೊಂಡಿರಬಹುದು ಎಂದು ‘ಆಂಡ್ರಾಯ್ಡ್ ಅಥಾರಿಟಿ’ ಶಂಕಿಸಿದೆ. ಇದರಿಂದ ಆ್ಯಪ್‌ ಇನ್‌ಸ್ಟಾಲ್‌ ಮಾಡುವ ಮುನ್ನ ಇತರ ಬಳಕೆದಾರರು ನೀಡಿರುವ ಎಚ್ಚರಿಕೆಗಳನ್ನು ಗಮನಿಸುವ ಅವಕಾಶ ತಪ್ಪಿರಬಹುದು.

ನಕಲಿ ಆ್ಯಪ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆಯೇ ಅಥವಾ ದುರುಪಯೋಗಪಡಿಸಿಕೊಳ್ಳುತ್ತಿದೆಯೇ ಎಂಬುದು ವರದಿಗಳಿಂದ ಖಚಿತವಾಗಿಲ್ಲ. ಆದರೂ, ಆ್ಯಪ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ. ಅಧಿಕೃತ ವಾಟ್ಸಾಪ್‌ ಆ್ಯಪ್‌ ಅನ್ನು ‘WhatsApp LLC’ ಪ್ರಕಟಿಸಿರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ಇನ್‌ಸ್ಟಾಲ್‌ ಮಾಡಬೇಕು.

ಸೌಜನ್ಯ: madhyamamonline.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor