Asian Games | ಭಾರತದ ಪುರುಷರ, ಮಹಿಳೆಯರ ಸ್ಕೀಟ್ ಶೂಟಿಂಗ್ ತಂಡಗಳಿಗೆ ಕಂಚು
ಮೈರಾಜ್ ಅಹ್ಮದ್ ಖಾನ್ , ಅನಂತ್‌ಜೀತ್ ಸಿಂಗ್ ನರುಕಾ, ಭವತೇಘ್ ಸಿಂಗ್ ಗಿಲ್ | Photo Credit : PTI
ನಗೋಯ: ಈಗ ನಡೆಯುತ್ತಿರುವ ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಗೂ ಮಹಿಳೆಯರ ಸ್ಕೀಟ್ ಶೂಟಿಂಗ್ ತಂಡಗಳು ಕಂಚಿನ ಪದಕ ಜಯಿಸಿವೆ.
ಪುರುಷರ ಸ್ಕೀಟ್ ಸ್ಪರ್ಧಾವಳಿಯ ಎಲ್ಲ ಮೂರು ದಿನಗಳ ಅರ್ಹತಾ ಸುತ್ತುಗಳಲ್ಲಿ ಅನಂತ್‌ಜೀತ್ ಸಿಂಗ್ ನರುಕಾ(119), ಹಿರಿಯ ಆಟಗಾರ ಮೈರಾಜ್ ಅಹ್ಮದ್ ಖಾನ್(116)ಹಾಗೂ ಭವತೇಘ್ ಸಿಂಗ್ ಗಿಲ್(111)ಒಟ್ಟು 346 ಅಂಕ ಕಲೆ ಹಾಕಿ ಭಾರತಕ್ಕೆ ಕಂಚು ಗೆಲ್ಲುವಲ್ಲಿ ನೆರವಾದರು.
ಈ ಮೂವರ ಪೈಕಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಅನಂತ್‌ಜೀತ್ ಅವರು ಈ ಹಿಂದಿನ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಬುಧವಾರ ವೈಯಕ್ತಿಕ ವಿಭಾಗದ ಫೈನಲ್‌ಗೆ ತಲುಪಿದ್ದರೂ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಮಹಿಳೆಯರ ಸ್ಕೀಟ್ ಟೀಮ್ ಸ್ಪರ್ಧೆ: ಕಂಚು ಗೆದ್ದ ಭಾರತ
ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಸ್ಕೀಟ್ ಟೀಮ್ ಸ್ಪರ್ಧೆಯಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿದೆ. ರೈಝಾ ದಿಲ್ಲೋನ್, ಪರಿನಾಝ್ ಧಲಿವಾಲ್ ಹಾಗೂ ಮಹೇಶ್ವರಿ ಚೌಹಾಣ್ ಒಟ್ಟಿಗೆ 331 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು.
ರೈಝಾ ಹಾಗೂ ಪರಿನಾಝ್ ಇಬ್ಬರೂ 125ರಲ್ಲಿ 111 ಅಂಕ ಗಳಿಸಿದರೆ, ಮಹೇಶ್ವರಿ 109 ಅಂಕ ಗಳಿಸಿದರು.
346 ಅಂಕ ಗಳಿಸಿದ ಚೀನಾ ಚಿನ್ನದ ಪದಕ ಜಯಿಸಿತು. ಕಝಕ್‌ಸ್ತಾನ ಬೆಳ್ಳಿ ಪದಕ ಜಯಿಸಿದೆ.