Photo Credit : PTI 

ನಗೋಯ, ಸೆ. 20: ಐಚಿ-ನಗೋಯದಲ್ಲಿ ರವಿವಾರ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ತನ್ನ ಪದಕದ ಬೇಟೆ ಆರಂಭಿಸಿದ್ದು, ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕ ಜಯಿಸಿದೆ.

ಭಾರತದ ಪದಕ ಬೇಟೆಗೆ ಇಳವೆನಿಲ್ ಚಾಲನೆ

ಭಾರತದ ಮೊದಲ ದಿನದ ಪದಕ ಬೇಟೆಯಲ್ಲಿ ಶೂಟರ್ ಇಳವೆನಿಲ್ ವಲರಿವಾನ್ ಮಿಂಚಿದ್ದು, ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಲ್ಲದೆ, ಸೋನಮ್ ಮಸ್ಕರ್ ಹಾಗೂ ವಿದರ್ಶ್ ವಿನೋದ್ ಅವರೊಂದಿಗೆ ತಂಡದ ಸ್ಪರ್ಧೆಯಲ್ಲೂ ಬೆಳ್ಳಿ ಪದಕ ಗೆದ್ದುಕೊಂಡರು.

ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಇಳವೆನಿಲ್ 252.4 ಅಂಕ ಗಳಿಸಿದರು. ಜಪಾನಿನ ಹಿನಾಟಾ ತೈಚಿ ಏಶ್ಯನ್ ಗೇಮ್ಸ್ ದಾಖಲೆ (253.0)ಯೊಂದಿಗೆ ಚಿನ್ನದ ಪದಕ ಜಯಿಸಿದರು. ದಕ್ಷಿಣ ಕೊರಿಯಾದ ಹಿಯೊಜಿನ್ ಬಾನ್ (230.4) ಕಂಚಿನ ಪದಕ ಗೆದ್ದರು.

ರವಿವಾರ ಮೊದಲಿಗೆ ನಡೆದ ಮಹಿಳೆಯರ 10 ಮೀ. ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಸೋನಮ್ ಮಸ್ಕರ್ ಹಾಗೂ ವಿದರ್ಶ್ ವಿನೋದ್ ಅವರೊಂದಿಗೆ ಸ್ಪರ್ಧಿಸಿದ ಇಳವೆನಿಲ್ ಎರಡನೇ ಸ್ಥಾನ ಪಡೆದರು. ಭಾರತದ ಮೂವರು ಶೂಟರ್‌ಗಳು 1,898 ಅಂಕ ಗಳಿಸಿದರು. ಚೀನಾ ಮೊದಲ ಸ್ಥಾನ ಪಡೆದರೆ, ಜಪಾನ್ ನಾಲ್ಕನೇ ಸ್ಥಾನ ಪಡೆಯಿತು.

ತಂಡದ ಸ್ಪರ್ಧೆಯಲ್ಲಿ ಇಳವೆನಿಲ್ 633.5 ಅಂಕ ಗಳಿಸಿ ಉತ್ತಮ ಪ್ರದರ್ಶನದೊಂದಿಗೆ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದರು. ಸೋನಮ್ ಕೂಡ ಫೈನಲ್‌ಗೆ ತಲುಪಿದ್ದು, 167 ಅಂಕ ಗಳಿಸಿ ಆರನೇ ಸ್ಥಾನ ಪಡೆದಿದ್ದಾರೆ.

ಅವಳಿ ಬೆಳ್ಳಿ ಪದಕಗಳು ಇಳವೆನಿಲ್ ಪಾಲಿಗೆ ಮಹತ್ವದ ಮೈಲಿಗಲ್ಲಾಗಿವೆ. 2018ರ ಜಕಾರ್ತ ಗೇಮ್ಸ್‌ನಲ್ಲಿ ಪಾದಾರ್ಪಣೆಗೈದಿದ್ದ ಇಳವೆನಿಲ್ ಏಶ್ಯನ್ ಗೇಮ್ಸ್‌ನಲ್ಲಿ ಮೊದಲ ಪದಕ ಗೆಲ್ಲಲು ಎಂಟು ವರ್ಷ ಕಾಯಬೇಕಾಯಿತು.

ಇದೀಗ ಭಾರತವು ಐಚಿ-ನಗೋಯ ಗೇಮ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಪದಕ ಜಯಿಸಿದೆ. ಹಾಂಗ್‌ಝೌ ಗೇಮ್ಸ್‌ನಲ್ಲಿ ಏಳು ಚಿನ್ನ, 9 ಬೆಳ್ಳಿ ಹಾಗೂ ಆರು ಕಂಚು ಸಹಿತ ದಾಖಲೆಯ 22 ಪದಕಗಳನ್ನು ಗೆದ್ದಿರುವ ಭಾರತೀಯ ಶೂಟರ್‌ಗಳು ಈ ಬಾರಿ ಉತ್ತೇಜನಕಾರಿ ಆರಂಭ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor