ಶೆಫಾಲಿ ವರ್ಮಾ | Photo Credit: PTI 

ಹೊಸದಿಲ್ಲಿ, ಸೆ.20: ಜಪಾನ್‌ ನ ನಿಶಿನ್‌ ನಲ್ಲಿ ರವಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 114 ರನ್‌ಗಳಿಂದ ಸುಲಭ ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್ ಭಾರತದ ಮಹಿಳಾ ಕ್ರಿಕೆಟ್ ತಂಡವು ಐಚಿ-ನಗೋಯಾ ಏಶ್ಯನ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಸುತ್ತಿಗೆ ತೇರ್ಗಡೆಯಾಗಿದೆ.

ಭಾರತ ತಂಡವು ಮೊದಲಿಗೆ 20 ಓವರ್‌ ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು. ಭಾರತದ ಬೌಲರ್‌ಗಳು ಬಾಂಗ್ಲಾದೇಶ ತಂಡವನ್ನು 15.4 ಓವರ್‌ ಗಳಲ್ಲಿ ಕೇವಲ 81 ರನ್‌ಗೆ ಆಲೌಟ್ ಮಾಡಿದರು.

ಸುಲಭ ಗೆಲುವು ಪಡೆದಿರುವ ಭಾರತ ತಂಡವು ಪದಕವನ್ನು ಖಚಿತಪಡಿಸಿದ್ದು, ಸೆ.22ರಂದು ಶ್ರೀಲಂಕಾ ವಿರುದ್ಧ ಫೈನಲ್ ಪಂದ್ಯವನ್ನಾಡಲಿದೆ.

ಶೆಫಾಲಿ ಐತಿಹಾಸಿಕ ಶತಕ, ಭಾರತ 195 ರನ್:

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅಗ್ರ ಸರದಿಯು ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಸ್ಮೃತಿ ಮಂಧಾನ ಹಾಗೂ ಶೆಫಾಲಿ ವರ್ಮಾ ಪವರ್‌ಪ್ಲೇನಲ್ಲಿ 71 ರನ್ ಗಳಿಸಿ ಬಿರುಸಿನ ಆರಂಭ ಒದಗಿಸಿದರು. ಮಂಧಾನ 18 ಎಸೆತಗಳಲ್ಲಿ 37 ರನ್ ಗಳಿಸಿದರು.

ಮಂಧಾನ ಔಟಾದ ನಂತರ ಇನಿಂಗ್ಸ್ ಆಧರಿಸಿದ ಶೆಫಾಲಿ 49 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ 100 ರನ್ ಗಳಿಸಿದರು. ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಹರ್ಮನ್‌ಪ್ರೀತ್ 33 ಎಸೆತಗಳಲ್ಲಿ 40 ರನ್ ಗಳಿಸಿದ್ದು, ಭಾರತ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು. ಬಾಂಗ್ಲಾದೇಶದ ಗೆಲುವಿಗೆ 196 ರನ್ ಗುರಿ ನೀಡಿತು.

ರನ್ ಚೇಸ್ ವೇಳೆ ಇನಿಂಗ್ಸ್ ಆರಂಭದಲ್ಲೇ 9 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡ ಬಾಂಗ್ಲಾದೇಶ ಕಳಪೆ ಆರಂಭ ಪಡೆಯಿತು. ಎದುರಾಳಿ ತಂಡಕ್ಕೆ ಒತ್ತಡ ಮುಂದುವರಿಸಿದ ಭಾರತದ ಬೌಲರ್‌ಗಳು ನಿರಂತರವಾಗಿ ವಿಕೆಟ್ ಉರುಳಿಸುತ್ತಾ ಸಾಗಿದರು. 23 ಎಸೆತಗಳಲ್ಲಿ 27 ರನ್ ಗಳಿಸಿದ ದಿಲಾರ ಅಖ್ತರ್ ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಉಳಿದ ಬ್ಯಾಟರ್‌ಗಳು ಪರದಾಟ ನಡೆಸಿದರು. ಎಂಟು ಬ್ಯಾಟರ್‌ಗಳು ಒಂದಂಕಿ ಸ್ಕೋರ್ ಗಳಿಸಿದರು.

ತಲಾ ಮೂರು ವಿಕೆಟ್‌ಗಳನ್ನು ಕೆಡವಿದ ನಂದಿನಿ ಶರ್ಮಾ (3-25) ಹಾಗೂ ದೀಪ್ತಿ ಶರ್ಮಾ (3-7) ಭಾರತ ತಂಡದ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದರು. ಶ್ರೀ ಚರಣಿ (2-7) ಕೂಡ ಅತ್ಯುತ್ತಮ ಪ್ರದರ್ಶನ ನೀಡಿ ಬಾಂಗ್ಲಾದೇಶವನ್ನು 15.4 ಓವರ್‌ಗಳಲ್ಲಿ 81 ರನ್‌ಗೆ ಕಟ್ಟಿ ಹಾಕುವಲ್ಲಿ ನೆರವಾದರು.

ಶ್ರೀಲಂಕಾ ವಿರುದ್ಧ ಚಿನ್ನದ ಪದಕದ ಪಂದ್ಯ

ಈ ಗೆಲುವಿನ ಮೂಲಕ ಭಾರತವು ಚಿನ್ನದ ಪದಕದ ಪಂದ್ಯಕ್ಕೆ ತೇರ್ಗಡೆಯಾಗಿದ್ದು, ಸೆ.22ರಂದು ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಶ್ರೀಲಂಕಾ ತಂಡವು ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿದೆ.

2022ರ ಏಶ್ಯನ್ ಗೇಮ್ಸ್‌ ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡವು ಇದೀಗ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಕಂಚಿನ ಪದಕಕ್ಕಾಗಿ ಪ್ಲೇ ಆಫ್ ಪಂದ್ಯವನ್ನಾಡಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor