ಸಾಂದರ್ಭಿಕ ಚಿತ್ರ |Photo Credit : PTI 

ಹೊಸದಿಲ್ಲಿ, ಸೆ. 19: ಏಶ್ಯನ್ ಗೇಮ್ಸ್‌ ಗಾಗಿ ರವಿವಾರ ನಸುಕಿನ ಜಾವ ಜಪಾನ್‌ಗೆ ಹೊರಡಲಿರುವ ಭಾರತೀಯ ಪುರುಷರ ಕ್ರಿಕೆಟ್ ತಂಡದ ಸದಸ್ಯರು, ಸರಿಯಾದ ಅಳತೆಯ ಕಿಟ್‌ಗಳಿಗಾಗಿ ಕಾಯುತ್ತಿದ್ದಾರೆ.

ಆಟಗಾರರ ಜರ್ಸಿಗೆ ಸಂಬಂಧಿಸಿದಂತೆ BCCI ಹಾಗೂ ಇಂಡಿಯನ್ ಒಲಿಂಪಿಕ್ಸ್ ಸಂಸ್ಥೆಯ ಕಿಟ್ ಪೂರೈಕೆದಾರರಾದ ‘ಜೆಎಸ್‌ಡಬ್ಲ್ಯು ಇನ್ಸ್‌ಪೈರ್’ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ಪಿಟಿಐ ವರದಿ ಮಾಡಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡವು ರವಿವಾರ ಮುಂಜಾನೆ ರಾಷ್ಟ್ರ ರಾಜಧಾನಿಯಿಂದ ಪ್ರಯಾಣ ಬೆಳೆಸಲಿದೆ.

ಸೆ. 28ರಿಂದ ಆರಂಭವಾಗಲಿರುವ ಏಶ್ಯನ್ ಗೇಮ್ಸ್ ಸ್ಪರ್ಧೆಗಾಗಿ ಅಧಿಕೃತ ಜರ್ಸಿಯನ್ನು ಧರಿಸುವ ಮೊದಲು, ಸೆ. 22ರಂದು ಜಪಾನ್ ವಿರುದ್ಧ ನಡೆಯಲಿರುವ ಏಕೈಕ T20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ಆಟಗಾರರು ತಮ್ಮ ಸಾಮಾನ್ಯ ಕಿಟ್ ಅನ್ನು ಧರಿಸಲಿದ್ದಾರೆ.

‘ಕ್ರಿಕೆಟಿಗರ ಕಿಟ್‌ಗಳ ಅಳತೆಯಲ್ಲಿ ಸಮಸ್ಯೆಯಿತ್ತು. ಅವುಗಳಲ್ಲಿ ಹೆಚ್ಚಿನವುಗಳನ್ನು ಸರಿಪಡಿಸಲಾಗಿದೆ. ಇನ್ನೂ ಕೆಲವು ಬಾಕಿ ಉಳಿದಿದ್ದು, ಅವುಗಳನ್ನು ಶೀಘ್ರದಲ್ಲೇ ತಂಡಕ್ಕೆ ತಲುಪಿಸಲಾಗುವುದು. ಆಟಗಾರರಿಗೆ ಜಪಾನ್‌ನಲ್ಲಿ ದ್ವಿಪಕ್ಷೀಯ ಸರಣಿ ಹಾಗೂ ಏಶ್ಯನ್ ಗೇಮ್ಸ್‌ಗಾಗಿ ಎರಡು ವಿಭಿನ್ನ ಜರ್ಸಿಗಳ ಅಗತ್ಯವಿರುವುದರಿಂದ ಇಂತಹ ಸಮಸ್ಯೆ ಉಂಟಾಗಿದೆ’ ಎಂದು ಐಒಎ ಮೂಲವೊಂದು ಪಿಟಿಐಗೆ ತಿಳಿಸಿದೆ.

ನಗೋಯಾದಲ್ಲಿ ವಸತಿ ಪಡೆಯುವ ವಿಷಯದಲ್ಲಿ ಇತರ ಭಾರತೀಯ ಕ್ರೀಡಾಪಟುಗಳು ಎದುರಿಸಿದ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಈ ಸ್ಪರ್ಧೆಗಾಗಿ ತನ್ನದೇ ಹೋಟೆಲ್ ವ್ಯವಸ್ಥೆಯನ್ನು ಮಾಡಿಕೊಳ್ಳಲು BCCI ನಿರ್ಧರಿಸಿದೆ. ಜಪಾನ್‌ನ ಆಟದ ಮೈದಾನ ಸೇರಿದಂತೆ ಕ್ರಿಕೆಟ್‌ಗೆ ಸಂಬಂಧಿಸಿದ ಸೌಲಭ್ಯಗಳ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಇದೆ.

ಏಶ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿರುವ ಕೆಲವು ಕ್ರೀಡಾಪಟುಗಳು ತಮ್ಮ ವಸತಿ ಸೌಕರ್ಯವನ್ನು ಪರಿಶೀಲಿಸಲು ಗಂಟೆಗಟ್ಟಲೆ ಕಾಯಬೇಕಾಯಿತು. ಈ ಬಾರಿ ಸಮರ್ಪಿತ ಕ್ರೀಡಾಗ್ರಾಮವಿಲ್ಲ. ಆಯೋಜಕರು ಕ್ರೂಸ್ ಹಡಗುಗಳು, ಕಂಟೇನರ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಕ್ರೀಡಾಪಟುಗಳಿಗೆ ವಸತಿ ಕಲ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor