Photo Credit : AFI/X 

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ, ಗುರುವಾರ ಮಹಿಳೆಯರ 10,000 ಮೀಟರ್ ಓಟದ ಫೈನಲ್‌ನಲ್ಲಿ ಭಾರತದ ಸೀಮಾ ಕುಮಾರಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ, ಈ ಸ್ಪರ್ಧೆಯಲ್ಲಿ ದೇಶದ 16 ವರ್ಷಗಳ ಪದಕದ ಬರವನ್ನು ಅವರು ಕೊನೆಗೊಳಿಸಿದ್ದಾರೆ.

ಮಿಜುಹೋ ಪಾರ್ಕ್ ಅತ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ, ಸೀಮಾ 32 ನಿಮಿಷ 50.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಬಹರೈನ್‌ನ ವಿನ್ಫ್ರೆಡ್ ಯಾವಿ 32:39.18 ಹೊತ್ತುಗಾರಿಕೆಯೊಂದಿಗೆ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಜಪಾನ್ನ ನೊಜೊಮಿ ತನಕಾ 32:41.54 ಹೊತ್ತುಗಾರಿಕೆಯೊಂದಿಗೆ ಬೆಳ್ಳಿ ಪದಕ ಪಡೆದರು.

ಭಾರತದ ದೂರದ ಓಟಗಾರ್ತಿ ಉತ್ತಮ ಆರಂಭವನ್ನು ಪಡೆದು, ಮೊದಲ 2,000 ಮೀಟರ್‌ವರೆಗೆ ಮುಂಚೂಣಿಯಲ್ಲಿದ್ದರು. ಅವರು ಮೊದಲ 1,000 ಮೀಟರ್ ದೂರವನ್ನು 3:18.12ರಲ್ಲಿ ಕ್ರಮಿಸಿದರೆ, 2,000 ಮೀಟರ್ ಅಂತರವನ್ನು 6:36.13 ಹೊತ್ತುಗಾರಿಕೆಯೊಂದಿಗೆ ಕ್ರಮಿಸಿದರು.

ಸ್ಪರ್ಧೆಯ ವೇಗ ಹೆಚ್ಚುತ್ತಿದ್ದಂತೆ ಸೀಮಾ ನಾಲ್ಕನೇ ಸ್ಥಾನಕ್ಕೆ ಇಳಿದರೂ, ಮುಂಚೂಣಿಯಲ್ಲಿದ್ದ ಓಟಗಾರರ ಬೆನ್ನಿಗೇ ಇದ್ದರು. ಅಂತಿಮ 1,000 ಮೀಟರ್ ಬಾಕಿ ಇರುವಾಗ ಅವರು ಮತ್ತೆ ಮೂರನೇ ಸ್ಥಾನಕ್ಕೆ ಮರಳಿ, ಅಂತಿಮ ಹಂತದವರೆಗೂ ಆ ಸ್ಥಾನವನ್ನು ಕಾಯ್ದುಕೊಂಡು ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.

ಸೀಮಾ, ಚಿನ್ನ ಗೆದ್ದ ಯಾವಿಗಿಂತ 10.87 ಸೆಕೆಂಡುಗಳ ಬಳಿಕ ಗುರಿ ಮುಟ್ಟಿದರು. ಕಝಖ್ಸ್ತಾನದ ಡೈಸಿ ಜೆಪ್ಕೆಮೆ 33:03.21ರಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು.

ಈ ಕಂಚಿನ ಪದಕದೊಂದಿಗೆ, ಏಶ್ಯನ್ ಗೇಮ್ಸ್‌ನ 10,000 ಮೀಟರ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸೀಮಾ ಪಾತ್ರರಾಗಿದ್ದಾರೆ. ಈ ಹಿಂದೆ 2010ರ ಏಶ್ಯನ್ ಗೇಮ್ಸ್‌ನಲ್ಲಿ ಪ್ರೀಜಾ ಶ್ರೀಧರನ್ ಚಿನ್ನ ಮತ್ತು ಕವಿತಾ ರಾವತ್ ಬೆಳ್ಳಿ ಗೆದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor