×
Ad

ಏಶ್ಯನ್ ಅಂಡರ್-20 ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ | ಚಿನ್ನ ಜಯಿಸಿದ ಭಾರತದ ಮಹಿಳೆಯರ ರಿಲೇ ತಂಡ

Update: 2026-05-31 20:53 IST

Photo Credit : Facebook 

ಹೊಸದಿಲ್ಲಿ, ಮೇ 31: ಹಾಂಕಾಂಗ್‌ನಲ್ಲಿ ಏಶ್ಯನ್ ಅಂಡರ್-20 ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆಲ್ಲುವ ಮೂಲಕ ಭಾರತವು ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ.

ಸ್ಪರ್ಧೆಯ ಕೊನೆಯ ದಿನವಾದ ರವಿವಾರ ಭೂಮಿಕಾ ಸಂಜಯ್, ತಹುರಾ ಖತುನ್, ಸೆಹ್ನೂರ್ ಬಾವಾ ಹಾಗೂ ನೀರೂ ಪಾಠಕ್ ಅವರನ್ನೊಳಗೊಂಡ ಮಹಿಳೆಯರ 4-400 ಮೀ.ರಿಲೇ ತಂಡವು 3:38.07 ಸೆಕೆಂಡ್‌ನಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆಯಿತು. 3:43.63 ಸೆಕೆಂಡ್‌ನಲ್ಲಿ ಗುರಿ ತಲುಪಿದ ಕಝಕ್‌ಸ್ತಾನ ತಂಡವು ಬೆಳ್ಳಿ ಜಯಿಸಿದರೆ, ಆತಿಥೇಯ ಹಾಂಕಾಂಗ್ ತಂಡವು(3:49.94)ಕಂಚಿನ ಪದಕ ಜಯಿಸಿತು.

ಆ ನಂತರ ಪಿಯೂಷ್ ರಾಜ್, ಸಯ್ಯದ್ ಶಬೀರ್, ರಂಜಿತ್‌ಕುಮಾರ್ ಹಾಗೂ ಮುಹಮ್ಮದ್ ಅಶ್ಫಕ್ ಅವರನ್ನೊಳಗೊಂಡ ಪುರುಷರ 4-400 ಮೀ. ರಿಲೇ ತಂಡವು 3:05.54 ಸೆಕೆಂಡ್‌ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿತು. ಚೀನಾ(3:04.88) ಹಾಗೂ ಖತರ್(3:05.06)ತಂಡಗಳು ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದವು.

ದಿನದಾರಂಭದಲ್ಲಿ ಪುರುಷರ 800 ಮೀ. ಓಟದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(1:48.27 ಸೆ.)ನೀಡಿದ ವೆಂಕಟರಾಮ್ ರೆಡ್ಡಿ ಚಿನ್ನದ ಪದಕ ಜಯಿಸಿದರು.

ಮಹಿಳೆಯರ 5,000 ಮೀ. ಓಟದಲ್ಲಿ 16:53.08 ಸೆಕೆಂಡ್‌ನಲ್ಲಿ ಗುರಿ ತಲುಪಿದ ಮುಸ್ಕಾನ್ ಅಗ್ರ ಸ್ಥಾನ ಪಡೆದರು. ಪುರುಷರ ಡಿಸ್ಕಸ್ ಎಸೆತದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(60.10 ಮೀ.)ನೀಡಿದ ನಿಶ್ಚಯ್ ಬೆಳ್ಳಿ ಪದಕ ತನ್ನದಾಗಿಸಿಕೊಂಡರು.

ಕೊನೆಯ ದಿನ ಹಲವು ಪದಕಗಳನ್ನು ಗೆದ್ದಿರುವ ಭಾರತೀಯ ತಂಡವು ಜೂನಿಯರ್ ಕ್ರೀಡಾಕೂಟದಲ್ಲಿ ತನ್ನ ಅಭಿಯಾನವನ್ನು ಸಕಾರಾತ್ಮಕವಾಗಿ ಅಂತ್ಯಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News