ವೀಸಾ ಸಮಸ್ಯೆ: ಫಿಫಾ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ತಂಡದ ನಿರ್ಗಮನ ವಿಳಂಬ
Photo Credit : aljazeera.com
ಕೇಪ್‌ಟೌನ್, ಮೇ 31: ಕೆಲವು ಆಟಗಾರರಿಗೆ ಇನ್ನೂ ವೀಸಾ ಸಿಗದ ಕಾರಣ 2026ರ ಫುಟ್ಬಾಲ್ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ತಂಡದ ನಿರ್ಗಮನವು ವಿಳಂಬವಾಗಿದೆ.
ದಕ್ಷಿಣ ಆಫ್ರಿಕಾ ಫುಟ್ಬಾಲ್ ತಂಡವು ಮೆಕ್ಸಿಕನ್ ನಗರವಾದ ಪಚುಕಾದಲ್ಲಿರುವ ತನ್ನ ತರಬೇತಿ ನೆಲೆಗೆ ಚಾರ್ಟರ್ ವಿಮಾನದಲ್ಲಿ ಹೊರಡಬೇಕಿತ್ತು. ಆದರೆ ಅದು ‘ಅನಿರ್ದಿಷ್ಟವಾಗಿ’ ವಿಳಂಬವಾಗಿದೆ ಎಂದು ದಕ್ಷಿಣ ಆಫ್ರಿಕಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಫುಟ್ಬಾಲ್ ಅಸೋಸಿಯೇಶನ್(ಎಸ್‌ಎಎಫ್‌ಎ) ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ ಕ್ರೀಡಾ ಸಚಿವ ಗೇಟನ್ ಮೆಕೆಂಝಿ ಎಕ್ಸ್‌ನಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘‘ಪ್ರಯಾಣ ಹಾಗೂ ವೀಸಾ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಫುಟ್ಬಾಲ್ ಅಸೋಸಿಯೇಶನ್‌ನ ವೈಫಲ್ಯವು ಆಟಗಾರರು ಹಾಗೂ ತರಬೇತಿ ಸಿಬ್ಬಂದಿಗೆ ಆಗಿರುವ ಅನ್ಯಾಯವಾಗಿದೆ. ಇದೊಂದು ಮುಜುಗರದ ಸಂಗತಿ. ನನಗೆ ಈ ಕುರಿತು ಮಾಹಿತಿ ಬೇಕು. ಈ ಅವ್ಯವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಸೋಸಿಯೇಶನ್‌ಗೆ ತಿಳಿಸಿದ್ದೇನೆ. ನಮ್ಮನ್ನು ಮೂರ್ಖರೆಂದು ಭಾವಿಸಿದ್ದಾರೆ’’ ಎಂದು ಮೆಕೆಂಝಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ತಂಡವು ಜೂನ್ 11ರಂದು ಮೆಕ್ಸಿಕೊ ನಗರದಲ್ಲಿ ಸಹ ಆತಿಥೇಯ ದೇಶ ಮೆಕ್ಸಿಕೊ ವಿರುದ್ಧ ವಿಶ್ವಕಪ್‌ನ ಆರಂಭಿಕ ಪಂದ್ಯವನ್ನು ಆಡಲಿದೆ. 2010ರಲ್ಲಿ ವಿಶ್ವಕಪ್ ಆಯೋಜಿಸಿದ ನಂತರ ಮೊದಲ ಬಾರಿ ಜಾಗತಿಕ ಟೂರ್ನಿಯಲ್ಲಿ ಆಡುತ್ತಿದೆ.
‘ಎ’ ಗುಂಪಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಜೂನ್ 18ರಂದು ಅಟ್ಲಾಂಟದಲ್ಲಿ ಝೆಕ್ ಗಣರಾಜ್ಯ ತಂಡ ಹಾಗೂ ಜೂನ್ 24ರಂದು ಮಾಂಟೆರ್ರಿಯಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.