×
Ad

IPL 2026 | ಕ್ವಾಲಿಫೈಯರ್‌ ನಲ್ಲಿ ಗುಜರಾತ್ ಟೈಟಾನ್ಸ್ ನ 'ಶುಭ್ಮನ್' ಅಬ್ಬರ; ಗಿಲ್‌ ಪಡೆಗೆ ಫೈನಲ್‌ ಟಿಕೆಟ್

Update: 2026-05-29 23:41 IST

Photo credit: X/@IPL

ನ್ಯೂ ಚಂಡಿಗಡ, ಮೇ 29: ಶುಭಮನ್ ಗಿಲ್ (104 ರನ್, 53 ಎಸೆತ, 15 ಬೌಂಡರಿ, 3 ಸಿಕ್ಸರ್) ಹಾಗೂ ಸಾಯಿ ಸುದರ್ಶನ್ (58 ರನ್, 32 ಎಸೆತ, 8 ಬೌಂಡರಿ, 1 ಸಿಕ್ಸರ್) ನೀಡಿದ ಭರ್ಜರಿ ಆರಂಭದ ಬಲದಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಐಪಿಎಲ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿತು.

ಈ ಮೂಲಕ ತನ್ನ ಎರಡನೇ ಪ್ರಯತ್ನದಲ್ಲಿ ಫೈನಲ್ ಪ್ರವೇಶಿಸಿದ ಗುಜರಾತ್, ರವಿವಾರ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ.

ಶುಕ್ರವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಭರ್ಜರಿ ಅರ್ಧಶತಕದ (96 ರನ್, 47 ಎಸೆತ, 8 ಬೌಂಡರಿ, 7 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 214 ರನ್ ಗಳಿಸಿತು.

215 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡವು 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 219 ರನ್ ಗಳಿಸಿ ಸುಲಭ ಜಯ ಸಾಧಿಸಿತು. ಗಿಲ್ ಹಾಗೂ ಸುದರ್ಶನ್ ಎರಡನೇ ವಿಕೆಟ್‌ಗೆ 12.5 ಓವರ್‌ಗಳಲ್ಲಿ 167 ರನ್‌ಗಳ ಜೊತೆಯಾಟ ನಡೆಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಸುದರ್ಶನ್ ಅವರ ವಿಕೆಟ್ ಪಡೆದ ಬ್ರಿಜೇಶ್ ಈ ಜೊತೆಯಾಟವನ್ನು ಮುರಿದರು.

ಇದಕ್ಕೂ ಮೊದಲು ರಾಜಸ್ಥಾನ ತಂಡವು 1.5 ಓವರ್‌ಗಳಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (1) ಹಾಗೂ ಧ್ರುವ ಜುರೆಲ್ (7) ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಕಂಡಿತು. ಜೈಸ್ವಾಲ್ ಮೊದಲ ಓವರ್‌ನಲ್ಲಿ ಹಾಗೂ ಜುರೆಲ್ ಎರಡನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್‌ಗಳನ್ನು ಕ್ರಮವಾಗಿ ಮುಹಮ್ಮದ್ ಸಿರಾಜ್ ಹಾಗೂ ಕಾಗಿಸೊ ರಬಾಡ ಪಡೆದರು.

ನಾಲ್ಕನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ರವೀಂದ್ರ ಜಡೇಜ (ಔಟಾಗದೆ 45, 35 ಎಸೆತ, 5 ಬೌಂಡರಿ, 1 ಸಿಕ್ಸರ್) ಗಾಯಾಳು ನಿವೃತ್ತಿಯಾಗುವ ಮುನ್ನ ಸೂರ್ಯವಂಶಿ ಅವರೊಂದಿಗೆ ಮೂರನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ರಾಜಸ್ಥಾನ ತಂಡವು ಪವರ್‌ಪ್ಲೇನಲ್ಲಿ 70 ರನ್ ಕಲೆಹಾಕಿತು.

ನಾಯಕ ರಿಯಾನ್ ಪರಾಗ್ (11, 6 ಎಸೆತ) ಹಾಗೂ ದಸುನ್ ಶನಕ (3, 9 ಎಸೆತ) ಕಳಪೆ ಬ್ಯಾಟಿಂಗ್ ಮುಂದುವರಿಸಿದರು. ಜೋಫ್ರಾ ಆರ್ಚರ್ (7, 4 ಎಸೆತ) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಸೂರ್ಯವಂಶಿ ಅವರ ಅಬ್ಬರದ ಆಟಕ್ಕೆ ಕಾಗಿಸೊ ರಬಾಡ 18ನೇ ಓವರ್‌ನಲ್ಲಿ ತೆರೆ ಎಳೆದರು. ಸತತ ಎರಡನೇ ಪಂದ್ಯದಲ್ಲೂ ಸೂರ್ಯವಂಶಿ ಶತಕದಿಂದ ವಂಚಿತರಾದರು. ಎಲಿಮಿನೇಟರ್ ಪಂದ್ಯದಲ್ಲಿ 3 ರನ್‌ಗಳಿಂದ ಶತಕ ತಪ್ಪಿಸಿಕೊಂಡಿದ್ದ ಅವರು, ಈ ಪಂದ್ಯದಲ್ಲಿ 4 ರನ್‌ಗಳ ಅಂತರದಿಂದ ಶತಕ ಕಳೆದುಕೊಂಡರು.

ಇನಿಂಗ್ಸ್ ಅಂತ್ಯದಲ್ಲಿ ಜಡೇಜ ಹಾಗೂ ಡೊನಾವನ್ ಫೆರೇರ (ಔಟಾಗದೆ 38, 11 ಎಸೆತ, 2 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ತಂಡವು 214 ರನ್‌ಗಳ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ಗುಜರಾತ್ ಪರ ಜೇಸನ್ ಹೋಲ್ಡರ್ (2–27) ಹಾಗೂ ಕಾಗಿಸೊ ರಬಾಡ (2–35) ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: 20 ಓವರ್‌ಗಳಲ್ಲಿ 214/6

(ವೈಭವ್ ಸೂರ್ಯವಂಶಿ 96, ರವೀಂದ್ರ ಜಡೇಜ ಔಟಾಗದೆ 45, ಡೊನಾವನ್ ಫೆರೇರ ಔಟಾಗದೆ 38; ಜೇಸನ್ ಹೋಲ್ಡರ್ 2–27, ಕಾಗಿಸೊ ರಬಾಡ 2–35)

ಗುಜರಾತ್ ಟೈಟಾನ್ಸ್: 18.4 ಓವರ್‌ಗಳಲ್ಲಿ 219/3

(ಶುಭಮನ್ ಗಿಲ್ 104, ಸಾಯಿ ಸುದರ್ಶನ್ 58; ಬ್ರಿಜೇಶ್ 1–44)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News