14.20 ಕೋಟಿ ರೂ.ಗೆ ಖರೀದಿಸಿದ್ದ ಆಟಗಾರನನ್ನು ಕೈಬಿಟ್ಟ ಸಿಎಸ್‌ಕೆ!
ಪ್ರಶಾಂತ್ ವೀರ್ , ಅಕೀಲ್ ಹುಸೇನ್ | Photo Credit : IPL
ಹೊಸದಿಲ್ಲಿ, ಮೇ 21: ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಗುರುವಾರ ಟಾಸ್ ಜಯಿಸಿದ ಸಿಎಸ್‌ಕೆ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ದುಕೊಂಡರು.
ಗೆಲ್ಲಲೇಬೇಕಾದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸಿಎಸ್‌ಕೆ ತಂಡವು ಆಡುವ 11ರ ಬಳಗದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಪ್ರಶಾಂತ್ ವೀರ್ ಬದಲಿಗೆ ಮ್ಯಾಟ್ ಶಾರ್ಟ್, ಅಕೀಲ್ ಹುಸೇನ್ ಸ್ಥಾನಕ್ಕೆ ಗುರ್ಜಪ್ನೀತ್ ಸಿಂಗ್‌ಗೆ ಅವಕಾಶ ನೀಡಿತು.
ಪ್ರಶಾಂತ್‌ರನ್ನು 2026ರ ಐಪಿಎಲ್ ಹರಾಜಿನ ವೇಳೆ ಸಿಎಸ್‌ಕೆ ತಂಡವು 14.20 ಕೋಟಿ.ರೂ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಆದರೆ ಅವರನ್ನು ಪ್ರಮುಖ ಪಂದ್ಯದಿಂದ ಕೈಬಿಡಲಾಗಿದೆ.
ಇದೇ ವೇಳೆ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ ಕೇವಲ ಒಂದು ಬದಲಾವಣೆಯನ್ನು ಮಾಡಿದರು. ಸಾಯಿ ಕಿಶೋರ್ ಬದಲಿಗೆ ಪ್ರಸಿದ್ಧ ಕೃಷ್ಣ ಅವಕಾಶ ಪಡೆದಿದ್ದಾರೆ. ಗುಜರಾತ್ ತಂಡವು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.
ಸಿಎಸ್‌ಕೆ ತಂಡವು ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಗುಜರಾತ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಜೊತೆಗೆ ಇತರ ಪಂದ್ಯಗಳ ಫಲಿತಾಂಶ ಅದರ ಪರವಾಗಿರಬೇಕಾಗುತ್ತದೆ.