×
Ad

ಫ್ರೆಂಚ್ ಓಪನ್| ಜನ್ನಿಕ್ ಸಿನ್ನರ್‌ಗೆ ಕ್ಲೆಮೆಂಟ್ ಮೊದಲ ಎದುರಾಳಿ

Update: 2026-05-21 20:20 IST

 ಜನ್ನಿಕ್ ಸಿನ್ನರ್‌ | Photo Credit : AP , PTI 

ಹೊಸದಿಲ್ಲಿ, ಮೇ 21: ಪ್ಯಾರಿಸ್‌ನಲ್ಲಿ ಗುರುವಾರ ನಡೆದ ಡ್ರಾ ಸಮಾರಂಭದ ಪ್ರಕಾರ ತನ್ನ ಚೊಚ್ಚಲ ಫ್ರೆಂಚ್‌ಓಪನ್ ಪ್ರಶಸ್ತಿಯನ್ನು ಹಿಂಬಾಲಿಸುತ್ತಿರುವ ಇಟಲಿ ಆಟಗಾರ ಜನ್ನಿಕ್ ಸಿನ್ನರ್ ಮೊದಲ ಸುತ್ತಿನಲ್ಲಿ ಫ್ರಾನ್ಸ್ ಆಟಗಾರ ಕ್ಲೆಮೆಂಟ್ ಟಬೂರ್‌ರನ್ನು ಎದುರಿಸುವ ಮೂಲಕ ಈ ವರ್ಷದ ಅಭಿಯಾನವನ್ನು ಆರಂಭಿಸಲಿದ್ದಾರೆ.

ಎರಡು ಬಾರಿಯ ಹಾಲಿ ಚಾಂಪಿಯನ್, ವಿಶ್ವದ ನಂ.2ನೇ ಆಟಗಾರ ಕಾರ್ಲೊಸ್ ಅಲ್ಕರಾಝ್ ಮಣಿಕಟ್ಟು ಗಾಯದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. ಸ್ಪೇನ್ ಆಟಗಾರನ ಅನುಪಸ್ಥಿತಿಯಲ್ಲಿ ಜರ್ಮನಿಯ ವಿಶ್ವದ ನಂ.3ನೇ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಅವರು ಎರಡನೇ ಶ್ರೇಯಾಂಕ ಪಡೆದಿದ್ದು, ಮೊದಲ ಸುತ್ತಿನಲ್ಲಿ ಫ್ರಾನ್ಸ್ ಆಟಗಾರ ಬೆಂಜಮಿನ್ ಬೋಂಝಿ ಅವರನ್ನು ಎದುರಿಸಲಿದ್ದಾರೆ.

25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನೊವಾಕ್ ಜೊಕೊವಿಕ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಇನ್ನೋರ್ವ ಆಟಗಾರ ಜಿಯೊವನ್ ಪೆರಿಕಾರ್ಡ್‌ರನ್ನು ಎದುರಿಸಲಿದ್ದಾರೆ.

ಜೊಕೊವಿಕ್ ಹಾಗೂ ಝ್ವೆರೆವ್ ಅವರು ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಅಗ್ರ ಶ್ರೇಯಾಂಕದ ಸಿನ್ನರ್ ಅವರು ಮತ್ತೊಂದು ಸೆಮಿ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಕೆನಡಾದ ಆಟಗಾರ ಫೆಲಿಕ್ಸ್ ಅಗ್ಯುರ್ ಅಲಿಯಸಿಮ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಹಾಲಿ ಚಾಂಪಿಯನ್ ಗೌಫ್‌ಗೆ ಟೇಲರ್ ಟೌನ್‌ಸೆಂಡ್ ಮೊದಲ ಎದುರಾಳಿ

ಪ್ಯಾರಿಸ್‌ನಲ್ಲಿ ಗುರುವಾರ ಡ್ರಾ ಸಮಾರಂಭ ನಡೆದಿದ್ದು, ಇದರ ಪ್ರಕಾರ ಮಹಿಳೆಯರ ಸಿಂಗಲ್ಸ್ ವಿಭಾಗದ ಹಾಲಿ ಚಾಂಪಿಯನ್ ಕೊಕೊ ಗೌಫ್ ತಮ್ಮದೇ ದೇಶದ ಟೇಲರ್ ಟೌನ್‌ಸೆಂಡ್‌ರನ್ನು ಎದುರಿಸುವ ಮೂಲಕ ಈ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದ್ದಾರೆ.

ವಿಶ್ವದ ನಂ.1 ಆಟಗಾರ ಹಾಗೂ ಕಳೆದ ವರ್ಷದ ರನ್ನರ್ಸ್ ಅಪ್ ಆರ್ಯನಾ ಸಬಲೆಂಕಾ ಅವರು ಮೊದಲ ಸುತ್ತಿನಲ್ಲಿ ಸ್ಪೇನ್‌ನ ಜೆಸ್ಸಿಕಾ ಬೌಝಾಸ್ ಮನೆರೊರನ್ನು ಎದುರಿಸಲಿದ್ದಾರೆ.

ಈ ವರ್ಷದ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಜಯಿಸಿರುವ ಕಝಕ್‌ನ ವಿಶ್ವದ ನಂ.2ನೇ ಆಟಗಾರ್ತಿ ಎಲೆನಾ ರೈಬಾಕಿನಾ ಅವರು ಮೊದಲ ಸುತ್ತಿನಲ್ಲಿ ಸ್ಲೋವೆನಿಯಾದ ವೆರೊನಿಕಾರನ್ನು ಮುಖಾಮುಖಿಯಾಗಲಿದ್ದಾರೆ.

ಮೂರನೇ ಶ್ರೇಯಾಂಕದ ಇಗಾ ಸ್ವಿಯಾಟೆಕ್, ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಯುವ ಆಟಗಾರ್ತಿ ಎಮರ್ಸನ್ ಜೋನ್ಸ್‌ರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News