2026-27ರ ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ BCCI
ಆಗಸ್ಟ್ ನಲ್ಲಿ ದುಲೀಪ್ ಟ್ರೋಫಿ, ಅಕ್ಟೋಬರ್ 11ರಿಂದ ರಣಜಿ
Photo Credit : @BCCI
ಹೊಸದಿಲ್ಲಿ, ಮೇ 20: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬುಧವಾರ 2026-27ರ ದೇಶೀಯ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಣಜಿ ಟ್ರೋಫಿ ಟೂರ್ನಿಯು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಖಚಿತಪಡಿಸಿದೆ. ಪ್ರಮುಖ ಪ್ರಥಮ ದರ್ಜೆ ಪಂದ್ಯಾವಳಿ ರಣಜಿಯು ಅಕ್ಟೋಬರ್ 11ರಿಂದ ಆರಂಭವಾಗಲಿದೆ. ಆಗಸ್ಟ್ 23ರಂದು ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ.
ಮುಂಬರುವ ಋತುವಿನಲ್ಲಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ನಲ್ಲಿ ಎಲ್ಲ ವಿಭಾಗಗಳಲ್ಲಿ 1,788 ಪಂದ್ಯಗಳು ನಡೆಯಲಿವೆ. ಸ್ಪರ್ಧಾವಳಿಗಳು ಪುರುಷರ ವಿಭಾಗದಲ್ಲಿ ಅಂಡರ್-16, ಅಂಡರ್-19, ಅಂಡರ್-23 ಹಾಗೂ ಸೀನಿಯರ್ ಟೂರ್ನಮೆಂಟ್ಗಳಲ್ಲಿ ನಡೆಯಲಿವೆ. ಮಹಿಳೆಯರ ವಿಭಾಗದಲ್ಲಿ ಅಂಡರ್-15, ಅಂಡರ್-19, ಅಂಡರ್-23 ಹಾಗೂ ಸೀನಿಯರ್ ವಲಯದಲ್ಲಿ ನಡೆಯಲಿವೆ.
‘‘2026-27ರ ದೇಶೀಯ ಋತುವು ದೇಶೀಯ ಕ್ರಿಕೆಟ್ ಅನ್ನು ಬಲಿಷ್ಠ ಹಾಗೂ ಸ್ಪರ್ಧಾತ್ಮಕವಾಗಿ ರೂಪಿಸುವ ಬಿಸಿಸಿಐನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಎಲ್ಲ ಮಾದರಿಗಳು ಹಾಗೂ ವಿಭಾಗಗಳಲ್ಲಿ ಸಮತೋಲಿತ ಪ್ರಗತಿಯನ್ನು ಇದು ಖಚಿತಪಡಿಸಲಿದೆ’’ ಎಂದು ಬಿಸಿಸಿಐ ತಿಳಿಸಿದೆ.
ವಲಯ ಮಾದರಿಯಲ್ಲಿ ನಡೆಯಲಿರುವ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 23ರಿಂದ ಸೆಪ್ಟಂಬರ್ 10ರ ತನಕ ನಡೆಯಲಿದೆ. ಇಡೀ ಟೂರ್ನಿಯು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿದೆ.
ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ಹಾಗೂ ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್ ಅನ್ನು ಶ್ರೀನಗರದಲ್ಲಿ ಅಕ್ಟೋಬರ್ 1ರಿಂದ 5ರ ತನಕ ಆಡಲಾಗುತ್ತದೆ.
ರಣಜಿ ಟೂರ್ನಿಯ ಮೊದಲ ಹಂತವು ಅಕ್ಟೋಬರ್ 11ರಿಂದ ನವೆಂಬರ್ 5ರ ತನಕ ನಾಲ್ಕು ಸುತ್ತುಗಳಲ್ಲಿ ನಡೆಯಲಿದೆ.
ಎರಡನೇ ಹಂತವು 2027ರ ಜನವರಿ 17ರಿಂದ ಮಾರ್ಚ್ 3ರ ತನಕ ನಡೆಯಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯು (ನೇಶನಲ್ ಟಿ-20) ನ.14ರಿಂದ ಡಿ.6ರ ತನಕ ಹಾಗೂ ವಿಜಯ್ ಹಝಾರೆ ಟ್ರೋಫಿ (ನೇಶನಲ್ 50 ಓವರ್ ಮಾದರಿ) ಟೂರ್ನಿಯು 2026ರ ಡಿ.14ರಿಂದ 2027ರ ಜನವರಿ 8ರ ತನಕ ನಡೆಯಲಿದೆ.