×
Ad

FIFA 2026: ಕೆನಡಾ ವಿರುದ್ಧ ಸ್ವಿಟ್ಜರ್ಲೆಂಡ್‌ಗೆ 2-1 ಅಂತರದ ಗೆಲುವು

Update: 2026-06-25 07:51 IST

Photo: x.com/brfootball

ವ್ಯಾಂಕೂವರ್ : ಬಿ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು ಕೆನಡಾ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಆತಿಥೇಯ ರಾಷ್ಟ್ರಕ್ಕೆ ಆಘಾತ ನೀಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ನಾಕೌಟ್‌ಗೆ ಪ್ರವೇಶಿಸಿದೆ.

ಉತ್ತಮ ಗೋಲು ವ್ಯತ್ಯಾಸದ ಆಧಾರದ ಮೇಲೆ ಈ ಪಂದ್ಯದಲ್ಲಿ ಕೇವಲ ಒಂದು ಡ್ರಾ ಪಾಯಿಂಟ್ ಗಳಿಸಿದರೂ ಗ್ರೂಪ್‌ನಲ್ಲಿ ಅಗ್ರಸ್ಥಾನ ಪಡೆಯಬಹುದು ಎಂಬ ನಂಬಿಕೆಯೊಂದಿಗೆ ಜೆಸ್ಸಿ ಮಾರ್ಷ್ ನೇತೃತ್ವದ ಕೆನಡಾ ತಂಡ ಮೈದಾನಕ್ಕಿಳಿದಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸ್ವಿಟ್ಜರ್ಲೆಂಡ್ ತಂಡ ನಡೆಸಿದ ಭರ್ಜರಿ ಆಟ ಕೆನಡಾಕ್ಕೆ ಆಘಾತ ನೀಡಿತು.

ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಪ್ರಭಾವ ಬೀರಲು ವಿಫಲವಾಗಿದ್ದ ಕಾರಣ ಪಂದ್ಯ ನೀರಸವಾಗಿತ್ತು. ಆದರೆ, ದ್ವಿತೀಯಾರ್ಧ ಆರಂಭವಾದ ಕೇವಲ 40 ಸೆಕೆಂಡುಗಳಲ್ಲಿ ರುಬೆನ್ ವರ್ಗಾಸ್ ಬಾರಿಸಿದ ಭರ್ಜರಿ ಗೋಲು ಸ್ವಿಟ್ಜರ್ಲೆಂಡ್ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು.

ಬಳಿಕ ಕೇವಲ 10 ನಿಮಿಷಗಳಲ್ಲಿ, ಕೆನಡಾದ ಕಳಪೆ ರಕ್ಷಣಾ ಆಟದ ಲಾಭ ಪಡೆದ ಜೊಹಾನ್ ಮಂಜಾಂಬಿ ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. ಕೆನಡಾದ ಗೋಲ್‌ಕೀಪರ್ ಮ್ಯಾಕ್ಸಿಮ್ ಕ್ರೆಪೌ ಇದನ್ನು ತಡೆಯಬಹುದಿತ್ತಾದರೂ, ಅವರ ಕೈತಪ್ಪಿ ಚೆಂಡು ನೆಟ್ ಸೇರಿತು.

ಬಳಿಕ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಪ್ರಾಮಿಸ್ ಡೇವಿಡ್, ಕೆನಡಾ ಪರ ಒಂದು ಗೋಲು ಬಾರಿಸಿದರಾದರೂ, ಅದು ಪಂದ್ಯದ ಫಲಿತಾಂಶ ಬದಲಿಸಲು ಸಾಕಾಗಲಿಲ್ಲ. ಕೊನೆಯ ನಿಮಿಷಗಳಲ್ಲಿ ಕೆನಡಾ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೆ ಸೋಲೊಪ್ಪಿಕೊಳ್ಳಬೇಕಾಯಿತು.

ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ತಂಡವು 4 ನೇರ ಗುರಿಯೊಂದಿಗೆ 6 ಬಾರಿ ಗೋಲು ಪ್ರಯತ್ನ ನಡೆಸಿದರೆ, ಕೆನಡಾ 7 ನೇರ ಗುರಿಯೊಂದಿಗೆ 13 ಬಾರಿ ಗೋಲು ಪ್ರಯತ್ನ ನಡೆಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News