WTC ಅಂಕಪಟ್ಟಿಯಲ್ಲಿ ಸ್ಥಾನ ಭದ್ರಪಡಿಸಿದ ಭಾರತ
Photo Credit : PTI
ಗಾಲೆ, ಆ. 19: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭರ್ಜರಿ 165 ರನ್‌ಗಳ ಅಂತರದಿಂದ ಜಯಿಸಿದ ಬಳಿಕ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಭಾರತವು ತನ್ನ ಸ್ಥಾನವನ್ನು ಭದ್ರಪಡಿಸಿದೆ.
ಭಾರತವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲೇ ಮುಂದುವರಿದಿದ್ದರೂ, ಅದರ ಶೇಕಡಾವಾರು ಅಂಕ (ಪಿಸಿಟಿ) ಶೇ. 48.15 ರಿಂದ 53.33ಕ್ಕೆ ಏರಿಕೆಯಾಗಿದೆ. ಅದೇ ವೇಳೆ, ಶ್ರೀಲಂಕಾ ಆರನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಅದರ ಶೇಕಡಾವಾರು ಅಂಕ ಶೇ. 33.33 ಕ್ಕೆ ಕುಸಿದಿದೆ.
ದೊಡ್ಡ ಗೆಲುವಿನ ಹೊರತಾಗಿಯೂ ಭಾರತಕ್ಕೆ ತನ್ನ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇಶ ಕಳೆದ ವಾರ ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯವನ್ನು ಸೋಲಿಸಿತ್ತು.
ಆಗಸ್ಟ್ 23ರಿಂದ ಕೊಲಂಬೊದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಹೊರತುಪಡಿಸಿ, ಪ್ರಸ್ತುತ ಡಬ್ಲ್ಯುಟಿಸಿ ಚಕ್ರದಲ್ಲಿ ಭಾರತಕ್ಕೆ ಇನ್ನೂ ಏಳು ಟೆಸ್ಟ್‌ಗಳು ಬಾಕಿ ಉಳಿದಿವೆ.
ಈಗಾಗಲೇ ಆಡಿರುವ 10 ಟೆಸ್ಟ್‌ಗಳಲ್ಲಿ ನಾಲ್ಕನ್ನು ಸೋತಿರುವ ಹಿನ್ನೆಲೆಯಲ್ಲಿ, ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಬಾಕಿ ಉಳಿದಿರುವ ಪ್ರತಿಯೊಂದು ಪಂದ್ಯವೂ ಬಹುತೇಕ ನಾಕೌಟ್ ಪಂದ್ಯವೇ ಆಗಿದೆ.
ಶ್ರೀಲಂಕಾ ವಿರುದ್ಧದ ಸರಣಿಯ ನಂತರ, ಭಾರತವು ಇದೇ ವರ್ಷದ ನವೆಂಬರ್‌ನಲ್ಲಿ ಎರಡು ಟೆಸ್ಟ್‌ಗಳ ಸರಣಿಗಾಗಿ ನ್ಯೂಝಿಲ್ಯಾಂಡ್ ಪ್ರವಾಸ ಕೈಗೊಳ್ಳಲಿದೆ.
ಕೊನೆಯದಾಗಿ, ಮುಂದಿನ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೂ ಮುನ್ನ ಭಾರತವು ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.