×
Ad

ಟೀಮ್ ಇಂಡಿಯಾದ T20 ತಂಡದಲ್ಲಿ ಪಾಟಿದಾರ್‌ ಗೆ ಸ್ಥಾನ ನೀಡಬೇಕು: ಮಾಜಿ ಆಟಗಾರರ ಆಗ್ರಹ

Update: 2026-05-27 20:31 IST

 ರಜತ್ ಪಾಟಿದಾರ್ | Photo Credit : PTI 

ಹೊಸದಿಲ್ಲಿ, ಮೇ 27: ಟೀಮ್ ಇಂಡಿಯಾದ T20 ತಂಡದಲ್ಲಿ ಸ್ಥಾನ ಪಡೆಯಲು ತಾನು ಅರ್ಹನಿದ್ದೇನೆ ಎಂದು ರಜತ್ ಪಾಟಿದಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. 2025ರಲ್ಲಿ RCBಗೆ ಮೊದಲ ಐಪಿಎಲ್ ಪ್ರಶಸ್ತಿ ತಂದುಕೊಟ್ಟ ನಾಯಕತ್ವ ವಹಿಸಿದ್ದ ಪಾಟಿದಾರ್, 18 ವರ್ಷಗಳ ಕನಸನ್ನು ನನಸಾಗಿಸಿದ್ದರು. ನಾಯಕತ್ವ ಹಾಗೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಧರ್ಮಶಾಲಾದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಪಾಟಿದಾರ್ ಅವರ ಪ್ರಚಂಡ ಬ್ಯಾಟಿಂಗ್ ಪ್ರದರ್ಶನದ ಬಳಿಕ ಕ್ರಿಕೆಟ್ ತಜ್ಞರು ಹಾಗೂ ಮಾಜಿ ಆಟಗಾರರು, ಪಾಟಿದಾರ್ ಟೀಮ್ ಇಂಡಿಯಾದ T20 ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ಅರ್ಹರು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಾಟಿದಾರ್ ಗುಜರಾತ್ ವಿರುದ್ಧ ಕೇವಲ 33 ಎಸೆತಗಳಲ್ಲಿ ಔಟಾಗದೆ 93 ರನ್ ಗಳಿಸಿದ್ದರು. ಹೀಗಾಗಿ RCB 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತ್ತು. ಇದು ಐಪಿಎಲ್ ಪ್ಲೇಆಫ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಅಂತಿಮವಾಗಿ RCB 92 ರನ್‌ ಗಳ ಅಂತರದಿಂದ ಜಯಶಾಲಿಯಾಗಿ ಫೈನಲ್‌ಗೆ ಲಗ್ಗೆ ಇಟ್ಟಿತು.

RCB ನಾಯಕ ಪಾಟಿದಾರ್ 281.82ರ ಸ್ಟ್ರೈಕ್‌ ರೇಟ್‌ ನಲ್ಲಿ 9 ಸಿಕ್ಸರ್ ಹಾಗೂ ಐದು ಬೌಂಡರಿ ಸಿಡಿಸುವ ಮೂಲಕ ಗುಜರಾತ್ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದರು. ಕುಲ್ವಂತ್ ಖೆಜ್ರೋಲಿಯಾ ಅವರ ಓವರೊಂದರಲ್ಲಿ 28 ರನ್ ಗಳಿಸಿದ್ದರು.

T20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲಿರುವ ಹೊಸ ತಂಡದಲ್ಲಿ ಪಾಟಿದಾರ್ ಪ್ರಮುಖ ಮೂವರು ಆಟಗಾರರ ಪೈಕಿ ಒಬ್ಬರಾಗಬೇಕು ಎಂದು ಭಾರತದ ಮಾಜಿ ಬ್ಯಾಟರ್ ಅಂಬಟಿ ರಾಯುಡು ಒತ್ತಾಯಿಸಿದ್ದಾರೆ.

‘‘ನಾನು ಮೊದಲಿಗೆ ಎರಡರಿಂದ ಮೂವರು ಆಟಗಾರರ ಹೆಸರನ್ನು ಬರೆಯುವೆ. ಇವರನ್ನು ಕೇಂದ್ರೀಕರಿಸಿ ತಂಡ ಕಟ್ಟಬೇಕು. ಅಂತಹ ಆಟಗಾರರ ಪೈಕಿ ಪಾಟಿದಾರ್ ಕೂಡ ಒಬ್ಬರು. T20 ತಂಡದಲ್ಲಿ ಅವರ ಅಗತ್ಯವಿದೆ. ಇದರಲ್ಲಿ ಎರಡು ಮಾತೇ ಇಲ್ಲ’’ ಎಂದು ರಾಯುಡು ಹೇಳಿದ್ದಾರೆ.

ಭಾರತದ T20 ತಂಡದಲ್ಲಿ ಪಾಟಿದಾರ್ ಅವರನ್ನು ಸೇರಿಸಿಕೊಳ್ಳಲೇಬೇಕು ಎಂದು ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಆಗ್ರಹಿಸಿದ್ದಾರೆ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತು ಗಂಭೀರ ಚರ್ಚೆ ನಡೆಯಬೇಕಾಗಿದೆ ಎಂದರು.

‘‘ಈ ಕುರಿತು ಚರ್ಚೆ ಆಗಬೇಕಾಗಿದೆ. ಚರ್ಚೆ ಆಗದಿದ್ದರೆ ಏನೋ ತಪ್ಪಾಗಿದೆ ಎಂದರ್ಥ. ರಜತ್ ಪಾಟಿದಾರ್ ಪ್ರಮುಖ ಇನಿಂಗ್ಸ್ ಆಡಿದ್ದಾರೆ. ಕ್ವಾಲಿಫೈಯರ್ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿರುವ ಪಾಟಿದಾರ್ ಈ ಹಿಂದೆ ಹಲವು ಉತ್ತಮ ಇನಿಂಗ್ಸ್ ಆಡಿದ್ದಾರೆ. ಕಾಗಿಸೊ ರಬಾಡ ಬೌಲಿಂಗ್‌ ನಲ್ಲಿ ಬ್ಯಾಕ್‌ಫುಟ್‌ ನಲ್ಲಿ ಸಿಡಿಸಿದ ಸಿಕ್ಸರ್ ಟೂರ್ನಿಯ ಅತ್ಯಂತ ಶ್ರೇಷ್ಠ ಹೊಡೆತವಾಗಿದೆ’’ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.

..........................

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News