ಏಶ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಮಾಜಿ ಶೂಟರ್ ರಣಧೀರ್ ಸಿಂಗ್ ನಿಧನ
ರಣಧೀರ್ ಸಿಂಗ್ | Photo Credit : PTI
ಹೊಸದಿಲ್ಲಿ, ಮೇ 27: ಹಿರಿಯ ಕ್ರೀಡಾ ಆಡಳಿತಗಾರ ಹಾಗೂ ಮಾಜಿ ಶೂಟರ್ ರಣಧೀರ್ ಸಿಂಗ್ ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬುಧವಾರ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆಯುವ ಮೊದಲು ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿಂಗ್ ಅವರು ಕ್ರೀಡೆ ಹಾಗೂ ಕ್ರೀಡಾ ಆಡಳಿತದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಆರೋಗ್ಯ ಸಮಸ್ಯೆಯ ಕಾರಣಕ್ಕೆ ಇತ್ತೀಚೆಗೆ ಒಲಿಂಪಿಕ್ಸ್ ಕೌನ್ಸಿಲ್ ಆಫ್ ಏಶ್ಯಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನ್ಯಾಶನಲ್ ರೈಫಲ್ ಅಸೋಸಿಯೇಶನ್ ನ ಕಾರ್ಯದರ್ಶಿ ರಾಜೀವ್ ಭಾಟಿಯಾ ಸಿಂಗ್ ಅವರ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ.
1978ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನ ಟ್ರ್ಯಾಪ್ ಇವೆಂಟ್‌ನಲ್ಲಿ ರಣಧೀರ್ ಸಿಂಗ್ ಚಿನ್ನದ ಪದಕ ಜಯಿಸಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಶೂಟರ್ ಎನಿಸಿಕೊಂಡಿದ್ದರು. ತಮ್ಮ ದೀರ್ಘ ಶೂಟಿಂಗ್ ವೃತ್ತಿಜೀವನದಲ್ಲಿ ಐದು ಒಲಿಂಪಿಕ್ ಗೇಮ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ತಮ್ಮ ಸಾಧನೆಗಳಿಗಾಗಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದರು.
ಸಕ್ರಿಯ ಕ್ರೀಡೆಯಿಂದ ನಿವೃತ್ತಿಯಾದ ನಂತರ ಸಿಂಗ್ ಆಡಳಿತಾಧಿಕಾರಿಯಾಗಿ ಭಾರೀ ಯಶಸ್ಸು ಕಂಡಿದ್ದರು. ಭಾರತದ ಅತ್ಯಂತ ಪ್ರಭಾವಿ ಕ್ರೀಡಾ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರಾಗಿದ್ದರು.