IPL- 2026| ಅಹ್ಮದಾಬಾದ್‌ನಲ್ಲಿ ಎಲ್ಲರ ಗಮನ ಸೆಳೆದ ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ | Photo Credit : PTI
ಹೊಸದಿಲ್ಲಿ, ಮೇ 31: ಅಹ್ಮದಾಬಾದ್‌ನಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್-2026ರ ಫೈನಲ್ ಪಂದ್ಯದಲ್ಲಿ ಓರ್ವ ಆಟಗಾರ ಎಲ್ಲರ ಗಮನ ಸೆಳೆದರು.
ರಾಜಸ್ಥಾನ ರಾಯಲ್ಸ್ ತಂಡವು ಫೈನಲ್‌ಗೆ ತಲುಪದೇ ಇದ್ದರೂ ಆ ತಂಡವನ್ನು ಪ್ರತಿನಿಧಿಸುತ್ತಿರುವ 15ರ ವಯಸ್ಸಿನ ಸೂರ್ಯವಂಶಿ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು.
ಸೂರ್ಯವಂಶಿ ಅವರು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಅಸಾಮಾನ್ಯ ಸಾಧನೆ ಮಾಡಿದ್ದು, ಪಂದ್ಯಾವಳಿಯ ಅಂತ್ಯದಲ್ಲಿ ಹಲವು ಪ್ರಶಸ್ತಿಗಳನ್ನು ಬಾಚಿಕೊಳ್ಳಲು ಸಜ್ಜಾಗಿದ್ದಾರೆ.
ರಾಜಸ್ಥಾನ ತಂಡವನ್ನು ಪ್ರತಿನಿಧಿಸಿರುವ ಸೂರ್ಯವಂಶಿ, ಈ ವರ್ಷದ ಐಪಿಎಲ್‌ನಲ್ಲಿ 237.31ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 776 ರನ್ ಗಳಿಸಿದ್ದಾರೆ. ಫೈನಲ್ ಪಂದ್ಯಕ್ಕಿಂತ ಮೊದಲು ಆರೆಂಜ್ ಕ್ಯಾಪ್ ಪಡೆದಿರುವ ಸೂರ್ಯವಂಶಿ, ಗರಿಷ್ಠ ಸಿಕ್ಸರ್‌ಗಳನ್ನು ಸಿಡಿಸಿದ್ದು, ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ಗೆಲ್ಲುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸೂರ್ಯವಂಶಿ ಈ ವರ್ಷದ ಐಪಿಎಲ್‌ನಲ್ಲಿ ಒಟ್ಟು 72 ಸಿಕ್ಸರ್‌ಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈ ಮೂಲಕ ದೀರ್ಘಸಮಯದಿಂದ ವಿಂಡೀಸ್ ದಂತಕತೆ ಕ್ರಿಸ್ ಗೇಲ್ ಹೆಸರಲ್ಲಿದ್ದ ಸಿಕ್ಸರ್ ದಾಖಲೆ(59)ಯನ್ನು ಮುರಿದಿದ್ದಾರೆ.
ನಿರ್ಭೀತಿಯ, ಆಕ್ರಮಣಕಾರಿ ಬ್ಯಾಟರ್ ಆಗಿರುವ ಸೂರ್ಯವಂಶಿ ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿ ಗೇಲ್ ಅವರ ದಾಖಲೆಯನ್ನು ಮುರಿಯುವ ಸನಿಹ ತಲುಪಿದ್ದರು.
ರವಿವಾರ ಯಾರೇ ಟ್ರೋಫಿ ಗೆದ್ದರೂ ಸೂರ್ಯವಂಶಿ ಐಪಿಎಲ್ 2026ರಲ್ಲಿ ಪ್ರಮುಖ ವಿಜೇತರ ಪೈಕಿ ಒಬ್ಬರಾಗುವುದು ನಿಶ್ಚಿತ. ರನ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸೂರ್ಯವಂಶಿ, ಸಿಕ್ಸರ್ ದಾಖಲೆಯನ್ನು ಮರು ರಚಿಸಿದರು. ಸೂರ್ಯುವಂಶಿ ಪಂದ್ಯಾವಳಿಯಲ್ಲಿ ಹೊರಹೊಮ್ಮಿದ ಓರ್ವ ಪ್ರತಿಭಾವಂತ ಆಟಗಾರನಾಗಿದ್ದಾರೆ