×
Ad

ನಾಳೆ ಐಪಿಎಲ್ ಲೀಗ್ ಹಂತದ ಪಂದ್ಯಗಳಿಗೆ ತೆರೆ: ಪ್ಲೇ ಆಫ್ ಸ್ಥಾನ ಗಿಟ್ಟಿಸುವ ವಿಶ್ವಾಸದಲ್ಲಿ ರಾಜಸ್ಥಾನ ರಾಯಲ್ಸ್

Update: 2026-05-23 20:03 IST

Photo Credit : PTI 

ಮುಂಬೈ, ಮೇ 23: ಮಾರ್ಚ್ 28ರಿಂದ ಆರಂಭವಾಗಿರುವ 19ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯ 70ನೇ ಹಾಗೂ ಕೊನೆಯ ಲೀಗ್ ಹಂತದ ಪಂದ್ಯವು ರವಿವಾರ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಲಿದೆ. ರವಿವಾರ ಮಧ್ಯಾಹ್ನ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಆತಿಥೇಯ ಮುಂಬೈ ಇಂಡಿಯನ್ಸ್ ನಡುವಿನ 69ನೇ ಪಂದ್ಯವು ಭಾರೀ ಕುತೂಹಲ ಕೆರಳಿಸಿದೆ.

ಐಪಿಎಲ್‌ನ ಏಕೈಕ ಪ್ಲೇ ಆಫ್ ಸ್ಥಾನಕ್ಕಾಗಿ ನಾಲ್ಕು ತಂಡಗಳು ಸ್ಪರ್ಧೆಯಲ್ಲಿವೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ತಂಡ ಫೇವರಿಟ್ ಆಗಿದ್ದು, ಪ್ಲೇ ಆಫ್‌ಗೆ ತಲುಪುವ ಅವಕಾಶ ಸಂಪೂರ್ಣವಾಗಿ ಅದರ ಕೈಯಲ್ಲೇ ಇದೆ. ರಾಜಸ್ಥಾನ ತಂಡವು ಈ ಪಂದ್ಯವನ್ನು ಗೆದ್ದರೆ ಇತರ ಫಲಿತಾಂಶವನ್ನು ಲೆಕ್ಕಿಸದೆ 16 ಅಂಕದೊಂದಿಗೆ ನೇರವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ರಾಜಸ್ಥಾನ ತಂಡವು ಮುಂಬೈ ವಿರುದ್ಧ ಸೋತರೆ, ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತನ್ನ ಕೊನೆಯ ಪಂದ್ಯಗಳಲ್ಲಿ ಸೋತರೆ ಮಾತ್ರ ರಾಜಸ್ಥಾನಕ್ಕೆ ಮತ್ತೆ ಅವಕಾಶ ಸಿಗಲಿದೆ.

ಕೆಕೆಆರ್ ಸೋತರೆ ಡೆಲ್ಲಿ ತಂಡವು 14 ಅಂಕ ಗಳಿಸುತ್ತದೆ. ಆದರೆ ಡೆಲ್ಲಿಯ ರನ್‌ರೇಟ್ ಉತ್ತೇಜನಕಾರಿಯಾಗಿಲ್ಲ.

ಮುಂಬೈ ಇಂಡಿಯನ್ಸ್ ಮಾಲಕರ ಶಿಕ್ಷಣ ಹಾಗೂ ಕ್ರೀಡೆಗಳ ಉಪಕ್ರಮದ ಭಾಗವಾಗಿ ಸುಮಾರು 19,000 ಶಾಲಾ ಮಕ್ಕಳು ಪಂದ್ಯ ವೀಕ್ಷಿಸಲು ವಾಂಖೆಡೆ ಸ್ಟೇಡಿಯಂಗೆ ಆಗಮಿಸಲಿದ್ದು, ರಾಜಸ್ಥಾನದ 15ರ ವಯಸ್ಸಿನ ಆಟಗಾರ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ.

ನಾಯಕ ರಿಯಾನ್ ಪರಾಗ್ ಹಾಗೂ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜರ ಫಿಟ್ನೆಸ್ ಅನ್ನು ರಾಜಸ್ಥಾನ ತಂಡದ ಮ್ಯಾನೇಜ್‌ಮೆಂಟ್ ಆತಂಕದಿಂದ ಗಮನಿಸುತ್ತಿದೆ. ಈ ಇಬ್ಬರ ಅನುಪಸ್ಥಿತಿಯಲ್ಲೂ ಹಂಗಾಮಿ ನಾಯಕ ಯಶಸ್ವಿ ಜೈಸ್ವಾಲ್ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಪಂದ್ಯವನ್ನು ಜಯಿಸಿದ್ದರು. ಸೂರ್ಯವಂಶಿ ಸ್ಫೋಟಕ ಇನಿಂಗ್ಸ್‌ನ ಮೂಲಕ ಗೆಲುವಿಗೆ ನೆರವಾಗಿದ್ದರು.

ರಾಜಸ್ಥಾನ ತಂಡವು ಮತ್ತೊಮ್ಮೆ ಯುವ ಆಟಗಾರರಾದ ಸೂರ್ಯವಂಶಿ ಹಾಗೂ ಜೈಸ್ವಾಲ್‌ರನ್ನು ಹೆಚ್ಚು ಅವಲಂಬಿಸಿದೆ. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ತನ್ನ ಶ್ರೇಷ್ಠ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ ತಂಡಕ್ಕೆ ಈ ಪಂದ್ಯದ ಫಲಿತಾಂಶದಿಂದ ಯಾವುದೇ ಪರಿಣಾಮಬೀರುವುದಿಲ್ಲ. ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್‌ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ರನ್ ಬರ ನೀಗಿಸಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.

ಒಂದು ವೇಳೆ ರಾಜಸ್ಥಾನ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದರೆ ಕೆಕೆಆರ್ ಹಾಗೂ ಡೆಲ್ಲಿ ನಡುವಿನ ಕೊನೆಯ ಲೀಗ್ ಪಂದ್ಯವು ಮಹತ್ವ ಕಳೆದುಕೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News