IPL-2026| ಪ್ಲೇ ಆಫ್‌ನ ಒಂದು ಸ್ಥಾನಕ್ಕೆ ನಾಲ್ಕು ತಂಡಗಳ ಪೈಪೋಟಿ
Photo Credit : X
ಹೊಸದಿಲ್ಲಿ, ಮೇ 22: ಗುಜರಾತ್ ಟೈಟಾನ್ಸ್ ತಂಡ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಗೆಲುವು ದಾಖಲಿಸುವುದರೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದೆ. ಸಿಎಸ್‌ಕೆ ತಂಡ ತನ್ನ ಅಭಿಯಾನ ಅಂತ್ಯಗೊಳಿಸಿದೆ.
14 ಪಂದ್ಯಗಳಿಂದ ಒಟ್ಟು 12 ಅಂಕ ಗಳಿಸಿರುವ ಸಿಎಸ್‌ಕೆ ತಂಡ ಅಧಿಕೃತವಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ.
13 ಪಂದ್ಯಗಳಿಂದ 18 ಅಂಕ ಪಡೆದಿರುವ ಆರ್‌ಸಿಬಿ, 14 ಪಂದ್ಯಗಳಿಂದ 18 ಅಂಕ ಪಡೆದಿರುವ ಗುಜರಾತ್ ಹಾಗೂ 13 ಪಂದ್ಯಗಳಿಂದ 16 ಅಂಕ ಗಳಿಸಿರುವ ಎಸ್‌ಆರ್‌ಎಚ್ ಈಗಾಗಲೇ ಪ್ಲೇ ಆಫ್ ಹಂತಕ್ಕೆ ಮುನ್ನಡೆದಿವೆ.
ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ(14), ಪಂಜಾಬ್ ಕಿಂಗ್ಸ್(13), ಕೋಲ್ಕತಾ ನೈಟ್ ರೈಡರ್ಸ್(13)ಹಾಗೂ ಡೆಲ್ಲಿ ಕ್ಯಾಪಿಟಲ್ಸ್(12)ತಂಡಗಳು ರೇಸ್‌ನಲ್ಲಿ ಇದ್ದು, ಮುಂದಿನ ಹಂತಕ್ಕೇರಲು ಎಲ್ಲ ತಂಡಗಳು ತಮ್ಮ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿವೆ.
ರವಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಸೋತರೂ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಪ್ಲೇ ಆಫ್ ಹಂತಕ್ಕೇರುವ ಅವಕಾಶ ಇರುತ್ತದೆ. ಆದರೆ ಆಗ ರಾಜಸ್ಥಾನ ತಂಡದ ಭವಿಷ್ಯ ಹೆಚ್ಚಿನ ರನ್‌ರೇಟ್ ಕಾಯ್ದುಕೊಳ್ಳುವ ಜೊತೆಗೆ ಇತರ ತಂಡಗಳು ಸೋಲುವುದನ್ನು ಅವಲಂಬಿಸಿರುತ್ತದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ತಂಡಗಳು ಸೆಣಸಾಡಲಿವೆ. ಕೊನೆಯ ಪಂದ್ಯವನ್ನು ಸೋತರೂ ರಾಜಸ್ಥಾನ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಬೇಕಿದ್ದರೆ, 12 ಅಂಕಗಳನ್ನು ಹೊಂದಿರುವ ಡೆಲ್ಲಿ ತಂಡವು 13 ಅಂಕ ಹೊಂದಿರುವ ಕೆಕೆಆರ್ ತಂಡವನ್ನು ಅಲ್ಪ ಅಂತರದಿಂದ ಮಣಿಸಬೇಕಾಗುತ್ತದೆ.