×
Ad

ಐಪಿಎಲ್‌ನಲ್ಲಿ ಐತಿಹಾಸಿಕ ಸಾಧನೆಗೈದ ಸುದರ್ಶನ್, ಶುಭಮನ್ ಗಿಲ್

Update: 2026-05-22 20:38 IST

ಸಾಯಿ ಸುದರ್ಶನ್ , ಶುಭಮನ್ ಗಿಲ್ | Photo Credit : PTI 

ಹೊಸದಿಲ್ಲಿ, ಮೇ 22: ಅಹ್ಮದಾಬಾದ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 89 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ದಾಖಲೆಗಳನ್ನು ನಿರ್ಮಿಸುವುದರೊಂದಿಗೆ ಈ ವರ್ಷದ ಐಪಿಎಲ್‌ನಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ.

ಮೊದಲ ವಿಕೆಟ್‌ಗೆ 125 ರನ್ ಜೊತೆಯಾಟವನ್ನು ನಡೆಸಿರುವ ಗುಜರಾತ್ ತಂಡದ ಆರಂಭಿಕ ಜೋಡಿ ಸುದರ್ಶನ್- ಗಿಲ್ ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಮಾತ್ರವಲ್ಲ ಗುಜರಾತ್ ತಂಡವು 4 ವಿಕೆಟ್‌ಗಳ ನಷ್ಟಕ್ಕೆ 229 ರನ್ ಗಳಿಸಲು ನೆರವಾದರು. ಗಿಲ್ ಕೇವಲ 37 ಎಸೆತಗಳಲ್ಲಿ 64 ರನ್ ಗಳಿಸಿದರೆ, ಸುದರ್ಶನ್ 53 ಎಸೆತಗಳಲ್ಲಿ 84 ರನ್ ಕಲೆ ಹಾಕಿದರು.

ರನ್ ಹಾಗೂ ಬೌಂಡರಿಗಳ ಜೊತೆಗೆ ಈ ಇಬ್ಬರು ಬ್ಯಾಟರ್‌ಗಳು ಐಪಿಎಲ್ ಹಾಗೂ ಟಿ-20 ಕ್ರಿಕೆಟ್‌ನ ದಾಖಲೆಗಳನ್ನು ಮುರಿದರು ಹಾಗೂ ಸರಿಗಟ್ಟಿದರು.

ಸುದರ್ಶನ್ ಹಾಗೂ ಶುಭಮನ್ ಈ ವರ್ಷದ ಐಪಿಎಲ್‌ನಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಒಂದೇ ಆವೃತ್ತಿಯ ಐಪಿಎಲ್‌ನಲ್ಲಿ ಒಂದೇ ತಂಡದ ಇಬ್ಬರು ಬ್ಯಾಟರ್‌ಗಳು 600ಕ್ಕೂ ಅಧಿಕ ರನ್ ಗಳಿಸಿದ್ದು ಇದು ಆರನೇ ದೃಷ್ಟಾಂತ.

ಈ ಇಬ್ಬರು 2025ರ ಆವೃತ್ತಿಯ ಐಪಿಎಲ್‌ನಲ್ಲೂ ಇದನ್ನು ಸಾಧಿಸಿದ್ದಾರೆ. ಎರಡು ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ ಮೊದಲ ಜೋಡಿ ಇವರಾಗಿದ್ದಾರೆ.

ಐಪಿಎಲ್‌ನಲ್ಲಿ ತಂಡದ ಪರ 600ಕ್ಕೂ ಅಧಿಕ ರನ್ ಗಳಿಸಿದ ಇಬ್ಬರು ಬ್ಯಾಟರ್‌ಗಳು

ಕ್ರಿಸ್ ಗೇಲ್     -    ವಿರಾಟ್ ಕೊಹ್ಲಿ        (ಆರ್‌ಸಿಬಿ, 2013)

ವಿರಾಟ್ ಕೊಹ್ಲಿ-  ಎಬಿ ಡಿವಿಲಿಯರ್ಸ್  (ಆರ್‌ಸಿಬಿ, 2016)

ಋತುರಾಜ್ ಗಾಯಕ್ವಾಡ್   - ಎಫ್ ಡು ಪ್ಲೆಸಿಸ್     (ಸಿಎಸ್‌ಕೆ, 2021)

ವಿರಾಟ್ ಕೊಹ್ಲಿ-   ಎಫ್‌ಡು ಪ್ಲೆಸಿಸ್        (ಆರ್‌ಸಿಬಿ, 2023)

ಶುಭಮನ್ ಗಿಲ್-   ಸಾಯಿ ಸುದರ್ಶನ್   (ಗುಜರಾತ್ ಟೈಟಾನ್ಸ್, 2025)

ಶುಭಮನ್ ಗಿಲ್-   ಸಾಯಿ ಸುದರ್ಶನ್    (ಗುಜರಾತ್ ಟೈಟಾನ್ಸ್, 2026)

ಸುದರ್ಶನ್ ಅವರು ಐಪಿಎಲ್ ಅಭಿಯಾನದಲ್ಲಿ ಸತತವಾಗಿ 600ಕ್ಕೂ ಅಧಿಕ ರನ್ ಗಳಿಸಿದ ಬ್ಯಾಟರ್‌ಗಳ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾದರು. ಸುದರ್ಶನ್‌ಗಿಂತ ಮೊದಲು ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಕೆ.ಎಲ್.ರಾಹುಲ್ ಹಾಗೂ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದರು.

ಸತತ ಎರಡನೇ ಋತುವಿನಲ್ಲಿ 600 ಪ್ಲಸ್ ಸ್ಕೋರ್ ಗಳಿಸಿದ ಗಿಲ್ ಈ ಪಟ್ಟಿಗೆ ಸೇರಿದ್ದಾರೆ. ಇದು ಗುಜರಾತ್ ತಂಡದ ಆರಂಭಿಕ ಜೋಡಿಯ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಅಪರೂಪದ ಐಪಿಎಲ್ ಮೈಲಿಗಲ್ಲು ಸರಿಗಟ್ಟಿದ ಸುದರ್ಶನ್

ಸಿಎಸ್‌ಕೆ ವಿರುದ್ಧ 84 ರನ್ ಗಳಿಸಿದ ಸುದರ್ಶನ್ ಅವರು ಈ ವರ್ಷದ ಐಪಿಎಲ್‌ನಲ್ಲಿ ಸತತ ಐದನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಈ ಮೂಲಕ ವೀರೇಂದ್ರ ಸೆಹ್ವಾಗ್, ಜೋಸ್ ಬಟ್ಲರ್ ಹಾಗೂ ವಾರ್ನರ್ ಅವರ ಸಾರ್ವಕಾಲಿಕ ಐಪಿಎಲ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎಡಗೈ ಬ್ಯಾಟರ್ ಸುದರ್ಶನ್ ಅವರು ಈ ಋತುವಿನಲ್ಲಿ 14 ಪಂದ್ಯಗಳಿಂದ ಒಟ್ಟು 638 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್‌ನಲ್ಲಿ ಸ್ಪರ್ಧೆಯಲ್ಲಿರುವ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.

ಸಿಎಸ್‌ಕೆ ವಿರುದ್ಧದ ಇನಿಂಗ್ಸ್‌ನ ವೇಳೆ ಗಿಲ್ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದರು. ಪುರುಷರ ಟಿ-20 ಕ್ರಿಕೆಟ್‌ನಲ್ಲಿ ವೇಗವಾಗಿ 6,000 ರನ್ ಗಳಿಸಿದ ಏಳನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಗುಜರಾತ್ ನಾಯಕ ಗಿಲ್ ಕೇವಲ 185 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ರಾಹುಲ್ ನಂತರ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರನಾಗಿದ್ದಾರೆ.

27ನೇ ವಯಸ್ಸಿಗೆ ಕಾಲಿಡುವ ಮೊದಲೇ ಕೇವಲ ಮೂವರು ಕ್ರಿಕೆಟಿಗರಾದ-ಬಾಬರ್ ಆಝಂ, ರಹಮಾನುಲ್ಲಾ ಗುರ್ಬಾಝ್ ಹಾಗೂ ವಿಲ್ ಜಾಕ್ಸ್ ಟಿ-20 ಕ್ರಿಕೆಟ್‌ನಲ್ಲಿ 6,000 ರನ್ ಪೂರೈಸಿದ್ದಾರೆ.

10ನೇ ಬಾರಿ ಶತಕದ ಜೊತೆಯಾಟ ನಡೆಸಿದ ಗಿಲ್-ಸುದರ್ಶನ್

ಗಿಲ್ ಹಾಗೂ ಸುದರ್ಶನ್ ಅವರ ಜೊತೆಯಾಟವು ಇತಿಹಾಸದ ಪುಟ ಸೇರಿದೆ. ಈ ಜೋಡಿಯು ಪುರುಷರ ಟಿ-20 ಕ್ರಿಕೆಟ್‌ನಲ್ಲಿ 10ನೇ ಬಾರಿ ಶತಕದ ಜೊತೆಯಾಟ ನಡೆಸಿತು. ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು 100 ಪ್ಲಸ್ ಜೊತೆಯಾಟ ನಡೆಸಿರುವ ಲೆಜೆಂಡ್‌ಗಳಾದ ಗೇಲ್-ಕೊಹ್ಲಿ, ಕೊಹ್ಲಿ-ಎಬಿಡಿ ವಿಲಿಯರ್ಸ್ ಹಾಗೂ ಬಾಬರ್ ಆಝಂ-ಮುಹಮ್ಮದ್ ರಿಝ್ವಾನ್ ದಾಖಲೆಯನ್ನು ಸರಿಗಟ್ಟಿದರು.

ಒಟ್ಟಿಗೆ 1,898 ರನ್ ಗಳಿಸಿರುವ ಗಿಲ್ ಹಾಗೂ ಸುದರ್ಶನ್ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಆರಂಭಿಕ ಜೊತೆಯಾಟ ನಡೆಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಡೇವಿಡ್ ವಾರ್ನರ್ ಹಾಗೂ ಶಿಖರ್ ಧವನ್ ಜೋಡಿ ಮೊದಲ ಸ್ಥಾನದಲ್ಲಿದೆ.

ಪ್ಲೇ ಆಫ್ ಪಂದ್ಯಗಳು ಹತ್ತಿರವಾಗುತ್ತಿದ್ದು, ಗುಜರಾತ್ ತಂಡದ ವಿಧ್ವಂಸಕ ಆರಂಭಿಕ ಜೋಡಿಯು ಸರಿಯಾದ ಸಮಯಕ್ಕೆ ಭರ್ಜರಿ ಫಾರ್ಮ್‌ನಲ್ಲಿದ್ದು, ಮತ್ತಷ್ಟು ದಾಖಲೆ ನಿರ್ಮಿಸಬಹುದು.

ಐಪಿಎಲ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್ ಜೊತೆಯಾಟ

2,220-   ಡೇವಿಡ್ ವಾರ್ನರ್, ಶಿಖರ್ ಧವನ್

1,898-   ಶುಭಮನ್ ಗಿಲ್, ಸಾಯಿ ಸುದರ್ಶನ್

1,890-   ವಿರಾಟ್ ಕೊಹ್ಲಿ, ಎಫ್‌ಡು ಪ್ಲೆಸಿಸ್

1,755-   ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್

1,547-   ರೋಹಿತ್ ಶರ್ಮಾ, ಇಶಾನ್ ಕಿಶನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News