Photo Credit : X/@DeoKalikesh

ದೋಹಾ: ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ, ಪುರುಷರ ಟ್ರ್ಯಾಪ್ ವಿಭಾಗದಲ್ಲಿ ಗುರುವಾರ ಭಾರತದ ವಿವಾನ್ ಕಪೂರ್ ಐತಿಹಾಸಿಕ ವಿಶ್ವ ಪ್ರಶಸ್ತಿಯನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಆದಾಗ್ಯೂ, ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಭಾರತಕ್ಕೆ ಕೋಟಾ ಸ್ಥಾನವೊಂದನ್ನು ಖಚಿತಪಡಿಸಿಕೊಂಡರು.

ಪುರುಷರ ಟ್ರ್ಯಾಪ್ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯನಾಗುವ ಸನಿಹಕ್ಕೆ ಅವರು ಬಂದಿದ್ದರು. ಜೈಪುರದ ಈ ಶೂಟರ್, ನಿಗದಿತ ಸುತ್ತುಗಳಲ್ಲಿ 30ರಲ್ಲಿ29 ಅಂಕಗಳನ್ನು ಗಳಿಸಿದರಾದರೂ, ಅವರ ಎದುರಾಳಿ ಕುವೈತ್‌ನ ಅಬ್ದುಲ್‌ರಹಮಾನ್ ಅಲ್‌ಫೈಹಾನ್ ಕೂಡ ಅಷ್ಟೇ ಅಂಕಗಳನ್ನು ಗಳಿಸಿದರು. ಆ ಮೂಲಕ ಸ್ಪರ್ಧೆ ಸಮಬಲದಲ್ಲಿ ಕೊನೆಗೊಂಡಿತು. ಆಗ ಫಲಿತಾಂಶವನ್ನು ನಿರ್ಣಯಿಸಲು ಶೂಟ್-ಆಫ್ ಅನಿವಾರ್ಯವಾಯಿತು. ಶೂಟ್-ಆಫ್‌ನಲ್ಲಿ ಅವರ ಚಿನ್ನದ ಪದಕದ ಕನಸು ಭಗ್ನಗೊಂಡಿತು.

ನಿರ್ಣಾಯಕ ಶೂಟ್-ಆಫ್‌ನಲ್ಲಿ ಕಪೂರ್ ಒಂದು ಕ್ಲೇ ಬರ್ಡ್ ಗುರಿ ತಪ್ಪಿಸಿಕೊಂಡಿದ್ದರಿಂದ, ಅಲ್‌ಫೈಹಾನ್ ಅಗ್ರಸ್ಥಾನ ಪಡೆದರು ಮತ್ತು ಕಪೂರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಚಿನ್ನದ ಪದಕ ಸ್ವಲ್ಪದರಲ್ಲೇ ಕೈತಪ್ಪಿದರೂ, ಕಪೂರ್ ಅವರ ಈ ಸಾಧನೆಯು ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಭಾರತದ ಇತಿಹಾಸಕ್ಕೆ ಮತ್ತೊಂದು ಮಹತ್ವದ ಅಧ್ಯಾಯವನ್ನು ಸೇರಿಸಿತು. ವಿಶ್ವ ಚಾಂಪಿಯನ್‌ಶಿಪ್ಸ್‌ನ ಈ ವಿಭಾಗದಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಇದಕ್ಕೂ ಮೊದಲು, ಕರ್ಣಿ ಸಿಂಗ್, ಮಾನವ್‌ಜಿತ್ ಸಿಂಗ್ ಸಂಧು ಮತ್ತು ಜೊರಾವರ್ ಸಿಂಗ್ ಸಂಧು ಈ ಸಾಧನೆ ಮಾಡಿದ್ದರು.

ಈ ಗೆಲುವಿನೊಂದಿಗೆ ಕಪೂರ್ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಕೋಟಾ ಸ್ಥಾನ ಪಡೆದರು. ಆ ಮೂಲಕ ಈ ಅರ್ಹತೆ ಗಳಿಸಿದ ಮೂರನೇ ಭಾರತೀಯ ಶೂಟರ್ ಆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor