ಸಯ್ಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ| ಮುಂಬೈ ಕ್ರಿಕೆಟ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕ
PC: x.com/IndiaToday
ಮುಂಬೈ: ಭಾರತ ತಂಡದ 2026ರ ಟಿ-20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಕ್ರಿಕೆಟ್ ಸಂಸ್ಥೆಯು(ಎಂಸಿಎ)ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಮುಂಬೈ ಕ್ರಿಕೆಟ್ ತಂಡದ ನಾಯಕರನ್ನಾಗಿ ಸೋಮವಾರ ನೇಮಕ ಮಾಡಿದೆ.
ಮುಂಬರುವ ಭಾರತದ ಪ್ರಮುಖ ದೇಶೀಯ ಟಿ-20 ಸ್ಪರ್ಧಾವಳಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈನ ಸೀನಿಯರ್ ಪುರುಷರ ತಂಡವನ್ನು ಪ್ರಕಟಿಸಲು ಎಂಸಿಎ ಸಂತೋಷಪಡುತ್ತಿದೆ. ಭಾರತದ ಟಿ-20 ತಂಡದ ನಾಯಕ ಸೂರ್ಯಕುಮಾರ್ ಮುಂಬೈ ತಂಡವನ್ನು ಮುನ್ನಡೆಸಲಿದ್ದು, ತನ್ನ ಅಪಾರ ಅಂತರ್‌ರಾಷ್ಟ್ರೀಯ ಅನುಭವ, ನಾಯಕತ್ವ ಹಾಗೂ ಸ್ಫೋಟಕ ಬ್ಯಾಟಿಂಗ್ ಪರಾಕ್ರಮವನ್ನು ತಂಡಕ್ಕೆ ಧಾರೆ ಎಳೆಯಲಿದ್ದಾರೆ. ತಂಡವು ಅನುಭವಿ ಅಂತರ್‌ರಾಷ್ಟ್ರೀಯ ಹಾಗೂ ದೇಶೀಯ ಆಟಗಾರರ ಜೊತೆಗೆ ಭರವಸೆಯ ಯುವ ಪ್ರತಿಭೆಯನ್ನು ಒಳಗೊಂಡಿದೆ ಎಂದು ಎಂಸಿಎ ತಿಳಿಸಿದೆ.
‘‘ಮುಂಬೈ ತಂಡವನ್ನು ಪ್ರತಿನಿಧಿಸುವುದು ಯಾವಾಗಲೂ ಅತ್ಯಂತ ಹೆಚ್ಚು ಹೆಮ್ಮೆಯ ವಿಚಾರ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪ್ರತಿಭಾವಂತರ ಗುಂಪನ್ನು ಮುನ್ನಡೆಸುವ ಗೌರವ ಲಭಿಸಿದೆ. ಮುಂಬೈ ಶ್ರೀಮಂತ ಕ್ರಿಕೆಟ್ ಪರಂಪರೆ ಹಾಗೂ ಗೆಲುವಿನ ಸಂಸ್ಕೃತಿಯನ್ನು ಹೊಂದಿದೆ. ನಾವು ಅಂತಹ ಸಂಪ್ರದಾಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದೇವೆ’’ ಎಂದು ಸೂರ್ಯಕುಮಾರ್ ಹೇಳಿದರು.
ಟಿ-20 ವಿಶ್ವಕಪ್ ಗೆದ್ದ ನಂತರ ರನ್ ಬರ ಎದುರಿಸುತ್ತಿದ್ದ ಸೂರ್ಯಕುಮಾರ್‌ರನ್ನು ಭಾರತೀಯ ತಂಡದಿಂದ ಕೈಬಿಡಲಾಗಿತ್ತು. ಅವರು ಜೂನ್‌ನಲ್ಲಿ ಟಿ-20 ಮುಂಬೈ ಲೀಗ್‌ನಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಪಂದ್ಯ ಆಡಿದ್ದರು. ಟೀಮ್ ಇಂಡಿಯಾಕ್ಕೆ ಮರಳಲು ಸಯ್ಯದ್ ಮುಷ್ತಾಕ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಲಕ್ಷ್ಯ ಹರಿಸಿದ್ದಾರೆ.
ರಣಜಿ ಟ್ರೋಫಿಯ ಮೊದಲ ಹಂತದಲ್ಲಿ ಆಡಿರುವ ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಮುಂಬೈ ತಂಡವು ನವೆಂಬರ್ 14ರಿಂದ ಕೋಲ್ಕತಾದಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ 20 ಟ್ರೋಫಿ ಲೀಗ್ ಪಂದ್ಯಗಳನ್ನು ಆಡಲಿದೆ.