Asian Games | ಉದ್ಘಾಟನಾ ಸಮಾರಂಭದಲ್ಲಿ ಎರವಲು ಪಡೆದ ಉಡುಪು ಧರಿಸಿದ ಮನು ಭಾಕರ್!
ಮನು ಭಾಕರ್ | Photo Credit : PTI
ಹೊಸದಿಲ್ಲಿ, ಸೆ.20: ನಗೋಯದಲ್ಲಿ ಶನಿವಾರ ನಡೆದ ಏಶ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ತನಗೆ ನೀಡಲಾದ ಸಮವಸ್ತ್ರವು ಸರಿಯಾಗಿ ಹೊಂದಾಣಿಕೆಯಾಗದ ಕಾರಣ ಮನು ಭಾಕರ್ ಎರವಲು ಪಡೆದ ಉಡುಪನ್ನು ಧರಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಒಲಿಂಪಿಕ್ಸ್ ಪದಕ ವಿಜೇತೆಗೆ ನೀಡಲಾದ ಬೂಟುಗಳ ಅಳತೆಯೂ ತಪ್ಪಾಗಿತ್ತು ಎಂದು ಭಾಕರ್ ಅವರ ತಂದೆ ರಾಮ್‌ಕಿಶನ್ ಹೇಳಿದ್ದಾರೆ.
‘‘ಮಗಳ ಬೂಟಿನ ಅಳತೆಯು ಸರಿಯಾಗಿರಲಿಲ್ಲ. ಮನು 5ನೇ ನಂಬರ್ ಅಳತೆಯ ಬೂಟುಗಳನ್ನು ಧರಿಸುತ್ತಾಳೆ, ಆದರೆ ಆಕೆಗೆ ನೀಡಲಾದ ಬೂಟು 4 ಅಥವಾ 6 ನಂಬರ್‌ನದ್ದಾಗಿತ್ತು. ಹೀಗಾಗಿ ಆಕೆ ಅಳತೆಗೆ ಸರಿಯಾದ ಬೂಟನ್ನು ಎರವಲು ಪಡೆದಳು’’ ಎಂದು ರಾಮ್‌ಕಿಶನ್ ಹೇಳಿದ್ದಾರೆ.
ಮನು ಅವರಿಗೆ ಸಮವಸ್ತ್ರ ನೀಡಲಾಗಿತ್ತು. ಆದರೆ ಅದರ ಅಳತೆಯೂ ಸರಿಯಿರಲಿಲ್ಲ. ಜಾಕೆಟ್ ಕೂಡ ಸರಿಯಾಗಿ ಹೊಂದಿಕೆಯಾಗಲಿಲ್ಲ. ಕೊನೆಗೆ ಭಾರತೀಯ ಶೂಟಿಂಗ್ ತಂಡದೊಂದಿಗೆ ಇರುವ ಮಸಾಜ್ ತಜ್ಞರೊಬ್ಬರಿಂದ ಎರವಲು ಪಡೆದ ಉಡುಪನ್ನು ಧರಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಖಾಸಗಿ ಪ್ರಾಯೋಜಕರಿಂದ ಶೂಟಿಂಗ್ ತಂಡದೊಂದಿಗಿದ್ದ ಮಸಾಜ್ ತಜ್ಞರು ಮನುವಿಗೆ ಸರಿಯಾದ ಅಳತೆಯ ಉಡುಪನ್ನು ಒದಗಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡವನ್ನು ಮುನ್ನಡೆಸುವಾಗ ಮನು ಇದನ್ನೇ ಧರಿಸಿದ್ದರು ಎಂದು ತಿಳಿದುಬಂದಿದೆ.