ಕ್ರೀಡಾಪಟುಗಳಿಗೆ ಜಪಾನ್ ಮಾದರಿ ವಸತಿ ವ್ಯವಸ್ಥೆ ಕಲ್ಪಿಸಿದ ಎಸ್‌ಎಐ
Photo Credit : PTI
ಪಟಿಯಾಲ: ಜಪಾನ್‌ನ ನಗೋಯ ಮತ್ತು ಐಚಿ ನಗರಗಳಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್‌ನಲ್ಲಿ ಲಭ್ಯವಿರುವ ವಸತಿ ವ್ಯವಸ್ಥೆಯ ಅನುಭವವನ್ನು ಅತ್ಲೀಟ್‌ಗಳಿಗೆ ಮುಂಚಿತವಾಗಿಯೇ ಒದಗಿಸವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯಿಟ್ಟಿದೆ. ಜಪಾನ್‌ನ ವಸತಿ ಕೋಣೆಗಳನ್ನೇ ಹೋಲುವಂಥ ಶಿಪ್ಪಿಂಗ್ ಕಂಟೇನರ್ ಮಾದರಿಯ ಕೋಣೆಗಳಲ್ಲಿ ಕ್ರೀಡಾಪಟುಗಳಿಗೆ ವಾಸ್ತವ್ಯ ಕಲ್ಪಿಸಲಾಗಿದೆ.
ಖಂಡ ಮಟ್ಟದ ಕ್ರೀಡಾಕೂಟವು ಸೆಪ್ಟಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಗೋಯಾ ಮತ್ತು ಐಚಿ ನಗರಗಳಲ್ಲಿ ನಡೆಯಲಿದೆ. ಆದರೆ ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ಈ ಬಾರಿ ಪ್ರತ್ಯೇಕ ಕ್ರೀಡಾಪಟುಗಳ ಗ್ರಾಮ ಇರುವುದಿಲ್ಲ.
ಬದಲಿಗೆ, 17,000ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಕ್ರೂಸ್ ಹಡಗು ಹಾಗೂ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲಿದ್ದಾರೆ.
ಇವುಗಳ ಹೊರತಾಗಿ ಮೂರನೇ ವಿಧದ ವಸತಿ ವ್ಯವಸ್ಥೆಯೂ ಇದೆ. ಇದು ಸಾಮಾನ್ಯವಾಗಿ ಮರದಿಂದ ನಿರ್ಮಿಸಲಾದ ತಾತ್ಕಾಲಿಕ ಮನೆಗಳಾಗಿದ್ದು, ಸುಮಾರು 2,000 ಸ್ಪರ್ಧಿಗಳಿಗೆ ಇಲ್ಲಿ ವಾಸ್ತವ್ಯ ಕಲ್ಪಿಸುವ ನಿರೀಕ್ಷೆಯಿದೆ.
ತನ್ನ ಕ್ರೀಡಾಪಟುಗಳನ್ನು ಇದಕ್ಕೆ ಸಜ್ಜುಗೊಳಿಸಲು, ಭಾರತೀಯ ಕ್ರೀಡಾ ಪ್ರಾಧಿಕಾರವು (ಎಸ್‌ಎಐ) ಪಟಿಯಾಲ ಮತ್ತು ಬೆಂಗಳೂರಿನ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಜಪಾನ್ ವಸತಿಗಳನ್ನು ಹೋಲುವ ವಸತಿ ಘಟಕಗಳನ್ನು ಶುಕ್ರವಾರ ಅನಾವರಣಗೊಳಿಸಿದೆ.
ಮುಂದೆ ಎದುರಾಗಲಿರುವ ವಾತಾವರಣಕ್ಕೆ ಹೊಂದಿಕೊಳ್ಳಲು ಭಾರತೀಯ ಸ್ಪರ್ಧಿಗಳು ಇವುಗಳಲ್ಲಿ ಒಂದು ಅಥವಾ ಎರಡು ರಾತ್ರಿ ಕಳೆಯಲಿದ್ದಾರೆ.