ಹರ್ಷ ಭೋಗ್ಲೆ | Photo Credit : PTI

ಮುಂಬೈ: ಪಾಕಿಸ್ತಾನ ಕ್ರಿಕೆಟ್‌ನ ಪ್ರಸ್ತುತ ಪರಿಸ್ಥಿತಿಯ ಕುರಿತು ಭಾರತದ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ವ್ಯಕ್ತಪಡಿಸಿರುವ ಅನಿಸಿಕೆಗಳು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ.

‘‘ನಂಬಲಸಾಧ್ಯವಾದ ಕೆಲಸಗಳನ್ನು ಮಾಡಲು ಪಾಕಿಸ್ತಾನ ಕ್ರಿಕೆಟ್‌ನಿಂದ ಮಾತ್ರ ಸಾಧ್ಯ. ಮೊದಲ ಟೆಸ್ಟ್‌ನಲ್ಲಿ ತಂಡದ ನಾಯಕರಾಗಿದ್ದ ಸಲ್ಮಾನ್ ಅಘಾ ಅವರನ್ನು ಎರಡನೇ ಪಂದ್ಯದಿಂದ ಕೈಬಿಡಲಾಯಿತು ಹಾಗೂ ಮೂರನೇ ಟೆಸ್ಟ್‌ಗೂ ಮುನ್ನವೇ ಮನೆಗೆ ಕಳುಹಿಸಲಾಯಿತು. ಸರಣಿಯ ಮಧ್ಯದಲ್ಲೇ ಮುಖ್ಯ ಕೋಚ್ ಮತ್ತು ಬೌಲಿಂಗ್ ಕೋಚ್ ಇಬ್ಬರನ್ನೂ ವಜಾಗೊಳಿಸಲಾಗಿದೆ. ಹಿರಿಯ ವಿಕೆಟ್‌ಕೀಪರ್‌ನನ್ನು ಮನೆಗೆ ಕಳುಹಿಸಲಾಗಿದೆ. ಇನ್ನು ಟೆಸ್ಟ್ ಪಂದ್ಯಕ್ಕೆ ಸಜ್ಜಾಗುವುದು ಹಾಗಿರಲಿ, ಬದಲಿ ಆಟಗಾರರು ಸರಿಯಾದ ಸಮಯಕ್ಕೆ ವೀಸಾ ಸಿಗುತ್ತದೆಯೇ ಎಂದು ಕಾಯುತ್ತಿದ್ದಾರೆ. ಮೈದಾನಕ್ಕಿಂತ ಮೈದಾನದ ಹೊರಗಡೆಯೇ ಹೆಚ್ಚು ಚಟುವಟಿಕೆಗಳು ನಡೆಯುತ್ತಿವೆ!’’ ಎಂದು ಎಕ್ಸ್‌ನಲ್ಲಿ ಭೋಗ್ಲೆ ಬರೆದಿದ್ದಾರೆ.

ಆತಿಥೇಯ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 2 ಪಂದ್ಯಗಳಲ್ಲಿ ತಂಡ ಸೋತ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಳು ಆಟಗಾರರನ್ನು ಕೈಬಿಟ್ಟು ತವರಿಗೆ ವಾಪಸ್ ಕಳುಹಿಸಲು ನಿರ್ಧರಿಸಿದೆ. ಜೊತೆಗೆ ಮುಖ್ಯ ಕೋಚ್ ಸರ್ಫರಾಝ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನೂ ಹುದ್ದೆಯಿಂದ ತೆಗೆದುಹಾಕಿದೆ. ಪಿಸಿಬಿಯ ಈ ಅಸಾಧಾರಣ ನಿರ್ಧಾರವನ್ನು ಕ್ರಿಕೆಟ್ ಜಗತ್ತು ಬೆಕ್ಕಸ ಬೆರಗಾಗಿ ನೋಡುತ್ತಿದೆ.

ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಜಗತ್ತಿನಾದ್ಯಂತ ತಪ್ಪು ಕಾರಣಗಳಿಗಾಗಿಯೇ ಏಕೆ ಸುದ್ದಿಯಲ್ಲಿರುತ್ತದೆ ಎಂಬ ಬಗ್ಗೆ ಭೋಗ್ಲೆ ತನ್ನ ಸಂದೇಶದಲ್ಲಿ ಬೆಟ್ಟು ಮಾಡಿದ್ದಾರೆ.

ಇಂಗ್ಲೆಂಡ್‌ಗೆ ಹೋಗಲು ಬದಲಿ ಆಟಗಾರರಿಗೆ ಬ್ರಿಟನ್ ವೀಸಾ ಕೊಡುವ ಮುನ್ನವೇ ಪಿಸಿಬಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ತೆಗೆದುಹಾಕಿದೆ ಎಂದು ಭೋಗ್ಲೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor