Photo Credit : PTI 

ಲಾಹೋರ್: ಆಲ್‌ರೌಂಡ್ ಪ್ರದರ್ಶನ ನೀಡಿದ ಶ್ರೀಲಂಕಾ ಕ್ರಿಕೆಟ್ ತಂಡವು ಆತಿಥೇಯ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಇಂಗ್ಲೆಂಡ್ ತಂಡವು ತ್ರಿಕೋನ ಸರಣಿಯ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದೆ.

ವೇಗದ ಬೌಲರ್ ದಿಲ್ಶನ್ ಮದುಶಂಕ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರೆ, ಕಮಿಂದು ಮೆಂಡಿಸ್ ರನ್ ಚೇಸ್ ವೇಳೆ ತಂಡವನ್ನು ಆಧರಿಸಿದರು. ಪ್ರಶಸ್ತಿ ಸುತ್ತಿನ ಪಂದ್ಯಕ್ಕಿಂತ ಮೊದಲು ಈ ಗೆಲುವು ಲಂಕಾಕ್ಕೆ ಹೊಸ ಹುಮ್ಮಸ್ಸು ತಂದಿದೆ.

ಮಂಗಳವಾರ ಟಾಸ್ ಜಯಿಸಿದ ಲಂಕಾದ ನಾಯಕ ಕುಶಾಲ ಮೆಂಡಿಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. 34 ರನ್‌ಗೆ ಐದು ವಿಕೆಟ್‌ಗಳನ್ನು ಪಡೆದ ಮದುಶಂಕ ಪಾಕಿಸ್ತಾನ ತಂಡವನ್ನು ಕೆವಲ 110 ರನ್‌ಗೆ ಆಲೌಟ್ ಮಾಡಿದರು.

ಈಗಾಗಲೇ ಫೈನಲ್‌ನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ತಂಡವು ಮದುಶಂಕ ಅವರ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ಎಡವಿತು.

ಗೆಲ್ಲಲು ಸುಲಭ ಸವಾಲು ಪಡೆದ ಶ್ರೀಲಂಕಾ ತಂಡವು 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತು. ಹಗಲು-ರಾತ್ರಿ ಪಂದ್ಯಕ್ಕೆ ಫ್ಲಡ್‌ಲೈಟ್ ಟವರ್‌ಗಳು ಸಂಪೂರ್ಣ ಬೆಳಗುವ ಮೊದಲೇ ಪಂದ್ಯ ಮುಕ್ತಾಯವಾಗಿದೆ.

ಕಮಿಂದು ಮೆಂಡಿಸ್ 60 ಎಸೆತಗಳಲ್ಲಿ ಔಟಾಗದೆ 62 ರನ್ ಗಳಿಸಿದ್ದು, ಇದರಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿವೆ. ರನ್ ಖಾತೆ ತೆರೆಯುವ ಮೊದಲೆ ವಿಕೆಟ್‌ಕೀಪರ್‌ನಿಂದ ಜೀವದಾನ ಪಡೆದ ಮೆಂಡಿಸ್ 44 ರನ್ ಗಳಿಸಿದ್ದಾಗ ಎಲ್ಬಿಡಬ್ಲ್ಯು ನಿರ್ಧಾರದಿಂದಲೂ ಪಾರಾದರು.

ಇಂಗ್ಲೆಂಡ್ ವಿರುದ್ಧ ತನ್ನ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸಿದೆ. ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಆರು ಅಂಕ ಗಳಿಸಿ ಲೀಗ್ ಹಂತ ಮುಗಿಸಿದೆ.

ಶ್ರೀಲಂಕಾ ತಂಡ ನಾಲ್ಕಂಕ ಗಳಿಸಿದ್ದು, ಗುರುವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಮುಖಾಮುಖಿಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor