×
Ad

ಐರ್‌ಲ್ಯಾಂಡ್, ಇಂಗ್ಲೆಂಡ್ ವಿರುದ್ಧ T20 ಸರಣಿ; ನಿತೀಶ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಆಯ್ಕೆ

Update: 2026-06-23 22:34 IST

ಸೂರ್ಯಾಂಶ್ ಶೆಡ್ಗೆ | Photo Credit : X 

ಹೊಸದಿಲ್ಲಿ, ಜೂ.23: ಮುಂಬರುವ ಐರ್‌ಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಾಗಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಸೂರ್ಯಾಂಶ್ ಶೆಡ್ಗೆ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಜೂ.20ರಂದು ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ನಿತೀಶ್ ರೆಡ್ಡಿ ಗಾಯಗೊಂಡಿದ್ದರು. ವೈದ್ಯಕೀಯ ತಪಾಸಣೆಯ ನಂತರ ಬಿಸಿಸಿಐ ವೈದ್ಯಕೀಯ ತಂಡವು ರೆಡ್ಡಿ ಅವರನ್ನು ಪುನಶ್ಚೇತನ ಶಿಬಿರಕ್ಕೆ ತೆರಳಲು ಶಿಫಾರಸು ಮಾಡಿದೆ. ಹೀಗಾಗಿ ಅವರು ಎರಡೂ ಸರಣಿಗಳಿಂದ ಹೊರಗುಳಿದಿದ್ದಾರೆ.

ಭಾರತ ತಂಡವು ಜೂನ್ 26 ಹಾಗೂ 28ರಂದು ಬೆಲ್‌ಫಾಸ್ಟ್‌ನಲ್ಲಿ ಐರ್‌ಲ್ಯಾಂಡ್ ವಿರುದ್ಧ ಎರಡು ಟಿ-20 ಪಂದ್ಯಗಳನ್ನು ಆಡಲಿದೆ. ಆ ನಂತರ ಜುಲೈ 1, 4, 7, 9 ಹಾಗೂ 11ರಂದು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ಕೊನೆಗೊಂಡ ತ್ರಿಕೋನ ಸರಣಿಯಲ್ಲಿ ಭಾರತ ‘ಎ’ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದ ಸೂರ್ಯಾಂಶ್ ಇದೀಗ ಭಾರತ ತಂಡವನ್ನು ಸೇರಿದ್ದಾರೆ. 23 ವರ್ಷದ ಮಧ್ಯಮ ಕ್ರಮಾಂಕದ ಬ್ಯಾಟರ್ ಐದು ಪಂದ್ಯಗಳಲ್ಲಿ 147 ರನ್ ಗಳಿಸಿದ್ದಾರೆ. 2024–25ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಒಟ್ಟು 131 ರನ್ ಗಳಿಸಿ ಮಿಂಚಿದ್ದರು.

ನಿತೀಶ್ ರೆಡ್ಡಿ 10 ಟೆಸ್ಟ್, ಆರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದೀಗ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿ ಭಾರತ ತಂಡಕ್ಕೆ ಶೀಘ್ರವೇ ಮರಳಲು ಎದುರು ನೋಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News