ಅಮೆರಿಕ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ; ಭಾರತಕ್ಕೆ ಲಕ್ಷ್ಯ ಸೇನ್, ತನ್ವಿ ಶರ್ಮಾ ಸಾರಥ್ಯ
ಲಕ್ಷ್ಯ ಸೇನ್ | Photo Credit : NDTV
ಫುಲ್ಲರ್‌ಟನ್ (ಅಮೆರಿಕ), ಜೂ.22: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೆ ತಲುಪಿರುವ ಲಕ್ಷ್ಯ ಸೇನ್ ಹಾಗೂ ಯುವ ಆಟಗಾರ್ತಿ ತನ್ವಿ ಶರ್ಮಾ ಮಂಗಳವಾರ ಆರಂಭವಾಗಲಿರುವ ಅಮೆರಿಕ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.
ಎರಡನೇ ಶ್ರೇಯಾಂಕದ, ವಿಶ್ವದ ನಂ.14ನೇ ಆಟಗಾರ ಲಕ್ಷ್ಯ ಸೇನ್ ಬೆಲ್ಜಿಯಂನ ಜೂಲಿಯನ್ ಕರ್ರಗ್ಗಿ ವಿರುದ್ಧ ಪುರುಷರ ಸಿಂಗಲ್ಸ್ ಅಭಿಯಾನವನ್ನು ಆರಂಭಿಸಲಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಚೈನೀಸ್ ತೈಪೆಯ ಲಿಯಾವೊ-ಫು ಅವರನ್ನು ಎದುರಿಸಲಿದ್ದಾರೆ. ಸನೀತ್ ದಯಾನಂದ್ ಜಪಾನಿನ ನಾಲ್ಕನೇ ಶ್ರೇಯಾಂಕದ ಯುಡೈ ಒಕಿಮೊಟೊ ವಿರುದ್ಧ ಆಡಲಿದ್ದು, ಎಸ್. ಶಂಕರ್ ಮುತ್ತುಸ್ವಾಮಿ ಅವರು ಕ್ವಾಲಿಫೈಯರ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದ್ದಾರೆ.
ಮಹಿಳೆಯರ ಸಿಂಗಲ್ಸ್ ಡ್ರಾದಲ್ಲಿ ಭಾರತ ಏಳು ಆಟಗಾರ್ತಿಯರನ್ನು ಹೊಂದಿದೆ. ಐದನೇ ಶ್ರೇಯಾಂಕದ ತನ್ವಿ ಶರ್ಮಾ ಹಾಗೂ ಆರನೇ ಶ್ರೇಯಾಂಕದ ದೇವಿಕಾ ಸಿಹಾಗ್ ತಂಡದ ನೇತೃತ್ವ ವಹಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ 17 ವರ್ಷದ ತನ್ವಿ ಜರ್ಮನಿಯ ವೋನ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಥಾಯ್ಲೆಂಡ್ ಮಾಸ್ಟರ್ಸ್ ವಿಜೇತೆ ದೇವಿಕಾ ಪೆರುವಿನ ಇನೆಸ್ ಲುಸಿಯಾ ವಿರುದ್ಧ ಆಡಲಿದ್ದಾರೆ.
ಮಹಿಳೆಯರ ಡಬಲ್ಸ್‌ನಲ್ಲಿ ತ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದು, ಸ್ಪೇನ್‌ನ ಪೌಲಾ ಲೊಪೆಝ್ ಹಾಗೂ ಲುಸಿಯಾ ರೊಡ್ರಿಗಸ್‌ರನ್ನು ಎದುರಿಸಲಿದ್ದಾರೆ.