ಯುಎಸ್ ಓಪನ್ | ರಿಬಾಕಿನಾ ಸೆಮಿ ಫೈನಲ್‌ಗೆ; ವಿಶ್ವದ ನಂ.1 ಸ್ಥಾನ ಖಚಿತ
ಎಲೆನಾ ರಿಬಾಕಿನಾ | Photo Credit : AP
ನ್ಯೂಯಾರ್ಕ್: ಚೀನಾದ ಆಟಗಾರ್ತಿ ಝೆಂಗ್ ಕ್ವಿನ್‌ವೆನ್‌ರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಎಲೆನಾ ರಿಬಾಕಿನಾ ಇದೇ ಮೊದಲ ಬಾರಿ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಮಾತ್ರವಲ್ಲ ಸ್ವತಃ ವಿಶ್ವದ ನಂ.1 ರ್ಯಾಂಕಿಂಗ್ ಅನ್ನು ಖಚಿತಪಡಿಸಿದ್ದಾರೆ.
ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ನಿಧಾನಗತಿಯ ಆರಂಭದಿಂದ ಚೇತರಿಸಿಕೊಂಡ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ರಿಬಾಕಿನಾ ತನ್ನ ಎದುರಾಳಿಯನ್ನು 3-6, 6-1, 6-4 ಸೆಟ್‌ಗಳಿಂದ ಮಣಿಸಿದರು.
ಅಂತಿಮ-4ರ ಹಂತ ತಲುಪಿದ ಕಝಕ್‌ಸ್ತಾನದ ಆಟಗಾರ್ತಿ ರಿಬಾಕಿನಾ ಸೋಮವಾರ ಬಿಡುಗಡೆಯಾಗಲಿರುವ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರುವುದನ್ನು ದೃಢಪಡಿಸಿದ್ದಾರೆ.
99 ವಾರಗಳಿಂದ ವಿಶ್ವದ ನಂ.1 ಸ್ಥಾನದಲ್ಲಿರುವ ಬೆಲಾರುಸ್ ಆಟಗಾರ್ತಿ ಆರ್ಯನಾ ಸಬಲೆಂಕಾರನ್ನು ರಿಬಾಕಿನಾ ಅಗ್ರ ಸ್ಥಾನದಿಂದ ಕೆಳಗಿಳಿಸಲಿದ್ದಾರೆ.
ನಂ.1 ಸ್ಥಾನಕ್ಕೇರಿದ ಹೊರತಾಗಿಯೂ ತನ್ನ ಪ್ರಮುಖ ಗಮನವು ಟೂರ್ನಮೆಂಟ್‌ನ ಮೇಲಿದ್ದು, ಸೆಮಿ ಫೈನಲ್ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳುವೆ ಎಂದು ರಿಬಾಕಿನಾ ಹೇಳಿದ್ದಾರೆ.
ರಿಬಾಕಿನಾ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಲು ಮುಂದಿನ ಸುತ್ತಿನಲ್ಲಿ ಕೊಕೊ ಗೌಫ್‌ರನ್ನು ಎದುರಿಸಲಿದ್ದಾರೆ.
ರಿಬಾಕಿನಾ ಅವರು ಆರಂಭದಲ್ಲಿ ಪರದಾಟ ನಡೆಸಿದ್ದು, ಇದರ ಲಾಭ ಪಡೆದ ಝೆಂಗ್ ಮೊದಲ ಸೆಟ್ಟನ್ನು 6-3ರಿಂದ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಕ್ಷಿಪ್ರವಾಗಿ ಪಂದ್ಯವು ಬದಲಾಗಿದ್ದು, ರಿಬಾಕಿನಾ, ಸರ್ವ್ ಹಾಗೂ ಬೇಸ್‌ಲೈನ್‌ನಲ್ಲಿ ತನ್ನ ಲಯ ಕಂಡುಕೊಂಡರು. 6-1 ಅಂತರದಿಂದ ಎರಡನೇ ಸೆಟ್ಟನ್ನು ಜಯಿಸಿ ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ಕೊಂಡೊಯ್ದರು.
ಮೂರನೇ ಸೆಟ್ ತೀವ್ರ ಪೈಪೋಟಿಯಿಂದ ಕೂಡಿದ್ದು, ಅಂತಿಮವಾಗಿ ರಿಬಾಕಿನಾ 6-4 ಸೆಟ್‌ಗಳ ಅಂತರದಿಂದ ಜಯಶಾಲಿಯಾದರು.
ಹಾಲಿ ಚಾಂಪಿಯನ್ ಆಂಡ್ರೀವಾಗೆ ಸೋಲು, ಗೌಫ್ ಸೆಮಿ ಫೈನಲ್‌ಗೆ
ಮರಳಿ ಹೋರಾಟ ನೀಡಿದ ಅಮೆರಿಕದ ಆಟಗಾರ್ತಿ ಕೊಕೊ ಗೌಫ್ ಐದನೇ ಶ್ರೇಯಾಂಕದ ಮಿರ್ರಾ ಆಂಡ್ರೀವಾರನ್ನು ಮಣಿಸಿ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
2023ರ ಚಾಂಪಿಯನ್ ಗೌಫ್ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದ ಅರಂಭಿಕ ಸೆಟ್ಟನ್ನು 2-6ರಿಂದ ಕಳೆದುಕೊಂಡು ನೀರಸ ಆರಂಭ ಪಡೆದರು. ಮೊದಲ ಸೆಟ್‌ನಲ್ಲಿ ಗೌಫ್ ರಶ್ಯದ ಆಟಗಾರ್ತಿಯ ವಿರುದ್ಧ 14 ಅನಗತ್ಯ ತಪ್ಪೆಸಗಿದರು.
ಎರಡನೇ ಸೆಟ್‌ನಲ್ಲಿ ಸ್ಪರ್ಧೆಯು ಬದಲಾಯಿತು. ಗೌಫ್ ತನ್ನ ಲಯವನ್ನು ಕಂಡುಕೊಂಡರು. ಸೆಟ್ ಟೈ-ಬ್ರೇಕ್‌ಗೆ ವಿಸ್ತರಿಸುವ ಮೊದಲು ಉಭಯ ಆಟಗಾರ್ತಿಯರು ಎರಡು ಬಾರಿ ಬ್ರೇಕ್ ವಿನಿಮಯ ಮಾಡಿದರು.
ಆಂಡ್ರೀವಾ ಗೆಲುವಿನ ಸನಿಹ ತಲುಪಿದರು.ಆದರೆ ಗೌಫ್ ಎರಡು ಮ್ಯಾಚ್ ಪಾಯಿಂಟ್ಸ್ ಉಳಿಸಿ ಸೆಟ್ಟನ್ನು ತನ್ನತ್ತ ಸೆಳೆದರು. ಬ್ಯಾಕ್‌ಹ್ಯಾಂಡ್‌ನ ಮೂಲಕ 2ನೇ ಸೆಟ್ಟನ್ನು 7-6(7) ಅಂತರದಿಂದ ಗೆದ್ದುಕೊಂಡರು.
ಮೂರನೇ ಸೆಟ್ ಅನ್ನು 6-2 ಅಂತರದಿಂದ ಸುಲಭವಾಗಿ ಗೆದ್ದಿರುವ ಗೌಫ್ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟರು. ಎಲೆನಾ ರಿಬಾಕಿನಾರ ಸವಾಲು ಎದುರಿಸಲು ಸಜ್ಜಾದರು.