ವರ್ಲ್ಡ್ ಆರ್ಚರಿ ಪ್ಯಾರಾ ಸೀರಿಸ್ |ಭಾರತದ ಶೀತಲ್ ದೇವಿಗೆ ಒಲಿದ ಸ್ವರ್ಣ
15 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆದ ಭಾರತ
Picture by Archery Association of India
ಹೊಸದಿಲ್ಲಿ: ಕಝಕ್ಸ್ತಾನದ ಐಝಾದಾ ಸೆಡಾನ್ರನ್ನು ಮಣಿಸಿದ ಭಾರತದ ಬಿಲ್ಲುಗಾರ್ತಿ ಶೀತಲ್ ದೇವಿ 2026ರ ಆವೃತ್ತಿಯ ವರ್ಲ್ಡ್ ಆರ್ಚರಿ ಪ್ಯಾರಾ ಸಿರೀಸ್ ನ ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಅಹ್ಮದಾಬಾದ್ ನಲ್ಲಿ ಗುರುವಾರ ಆರ್ಚರಿ ಪ್ಯಾರಾ ಸಿರೀಸ್ ಕೊನೆಗೊಂಡಿದ್ದು, ಕೊನೆಯ ದಿನ ಭಾರತ ತಂಡವು ಒಟ್ಟು ಆರು ಪದಕಗಳನ್ನು ಜಯಿಸಿದೆ. ಆತಿಥೇಯ ಭಾರತ ತಂಡವು ಐದು ಚಿನ್ನ ಗೆದ್ದಿರುವ ಝೆಕಿಯಾ ನಂತರ ಎರಡನೇ ಸ್ಥಾನ ಪಡೆದಿದೆ. ಭಾರತೀಯರು ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ಎಂಟು ಕಂಚಿನ ಪದಕ ಜಯಿಸಿದ್ದಾರೆ.
ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಶೀತಲ್ ದೇವಿ ಕಝಕ್ಸ್ತಾನದ ಸೆದಾನ್ ರನ್ನು ಶೂಟ್ ಆಫ್ ನಲ್ಲಿ 10-9 ಅಂತರದಿಂದ ಸೋಲಿಸಿದರು. ಸ್ಪರ್ಧೆಯು 144-144ರಿಂದ ಸಮಬಲಗೊಂಡ ನಂತರ ಫಲಿತಾಂಶಕ್ಕಾಗಿ ಶೂಟ್ ಆಫ್ ಮೊರೆ ಹೋಗಲಾಯಿತು. ಶೂಟ್ ಆಫ್ ನಲ್ಲಿ ರೋಚಕ ಗೆಲುವು ಪಡೆದ ಶೀತಲ್ ದೇವಿ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಕಾಂಪೌಂಡ್ ಮಿಕ್ಸೆಡ್ ಟೀಮ್ನಲ್ಲಿ ಇರಾಕ್ ನ ಜೋಡಿ ಹಮೀದ್ ಹಾಗೂ ಅಬ್ಬಾಸ್ರನ್ನು 157-145 ಅಂತರದಿಂದ ಮಣಿಸಿದ ಶೀತಲ್ ಹಾಗೂ ಟೋಮನ್ ಕುಮಾರ್ ಕಂಚಿನ ಪದಕ ಜಯಿಸಿದರು.
ರಿಕರ್ವ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್ ಹಾಗೂ ಭಾವನಾ ಅವರನ್ನೊಳಗೊಂಡ ಭಾರತೀಯ ತಂಡವು ಚೀನಾದ ಲಿಯಾಂಗ್ ಕ್ಯೂರಾಂಗ್ ಹಾಗೂ ಕ್ಸಿಯಾ ಲೀ ಅವರನ್ನು 6-0 ಅಂತರದಿಂದ ಮಣಿಸಿ ಚಿನ್ನದ ಪದಕ ಜಯಿಸಿದೆ.
ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಹರ್ವಿಂದರ್ ಅವರು ವಿಜಯ್ ಜೊತೆಗೂಡಿ ಸ್ಲೋವಾಕಿಯದ ಡೇವಿಡ್ ಇವಾನ್ ಹಾಗೂ ಡೇನಿಸ್ ಇವಾನ್ರನ್ನು 6-2 ಅಂತರದಿಂದ ಸೋಲಿಸಿ ಪುರುಷರ ರಿಕರ್ವ್ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಹಿಳೆಯರ ಟೀಮ್ ಫೈನಲ್ನಲ್ಲಿ ಭಾರತೀಯರಾದ ಪೂಜಾ ಹಾಗೂ ಭಾವನಾ ಚೀನಾದ ಲಿಯಾಂಗ್ ಹಾಗೂ ಚೆನ್ ಯು ವಿರುದ್ಧ 0-6 ಅಂತರದಿಂದ ಸೋಲನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು.
ಇರಾಕ್ ನ ಅಬ್ಬಾಸ್ ರನ್ನು 143-138 ಅಂತರದಿಂದ ಮಣಿಸಿದ ನಾಲ್ಕನೇ ಶ್ರೇಯಾಂಕದ ಟೋಮನ್ ಕುಮಾರ್ ಪುರುಷರ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಮಹಿಳೆಯರ ಸ್ಪರ್ಧೆಯಲ್ಲಿ ಸರಿತಾ ಚೀನಾದ ವಾಂಗ್ ಹುಂಟಿಂಗ್ರನ್ನು 141-140 ಅಂತರದಿಂದ ಮಣಿಸಿ ಕಂಚು ಜಯಿಸಿದರು.
ಕಾಂಪೌಂಡ್ ಟೀಮ್ ಸ್ಪರ್ಧೆಗಳಲ್ಲಿ ಭಾರತದ ಶ್ಯಾಮ್ ಸ್ವಾಮಿ ಹಾಗೂ ಟೋಮನ್ ಕುಮಾರ್ ಇರಾಕ್ನ ಅಬ್ಬಾಸ್ ಹಾಗೂ ಅನ್ವರ್ರನ್ನು 152-139 ಅಂತರದಿಂದ ಮಣಿಸಿ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು.