ಜಾತಿವಾರು ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ
ಬೆಂಗಳೂರು, ಸೆ.17: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರಕಾರದ ನಡೆ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್.ಸುಬ್ಬಾರೆಡ್ಡಿ ಸೇರಿ ನಾಲ್ವರು ಈ ಪಿಐಎಲ್ ಸಲ್ಲಿಸಿಸಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಹಾಗೂ ಭಾರತ ಜನಗಣತಿ ಆಯೋಗ ಮತ್ತು ರಿಜಿಸ್ಟ್ರಾರ್ ಜನರಲ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಅರ್ಜಿಯು ಇನ್ನಷ್ಟೇ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಮನವಿ ಏನು? :
ಸರಕಾರ 1,500 ಜಾತಿಗಳು ಮತ್ತು ಉಪಜಾತಿಗಳನ್ನು ಸೂಕ್ತ ರೀತಿಯಲ್ಲಿ ವರ್ಗೀಕರಣ ಮಾಡದೆ ಒಂದರೊಳಗೊಂದು ಮಿಶ್ರಣ ಮಾಡಿದೆ. ಇದು ಕಾನೂನು ವಿರೋಧಿ, ಅಧಿಕಾರ ವ್ಯಾಪ್ತಿ ಮೀರಿದ, ಏಕಪಕ್ಷೀಯ ಮತ್ತು ಕಾನೂನು ಉಲ್ಲಂಘನೆಯ ನಡೆಯಾಗಿದೆ. ಮೇಲಾಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜಾತಿಗಣತಿ (ಜಾತಿವಾರು ಸಮೀಕ್ಷೆ) ನಡೆಸುವ ಅಧಿಕಾರ ಇಲ್ಲ. ಆದ್ದರಿಂದ, ಸರಕಾರ ನಡೆಸಲು ಉದ್ದೇಶಿಸಿರುವ ಈ ಗಣತಿಯನ್ನು ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.