ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರು ಟಾಪ್ 5ಗೆ ತರಲು ಸಂಕಲ್ಪ: ಬೈರತಿ ಸುರೇಶ್
ಬೆಳಗಾವಿ : ಸ್ವಚ್ಛ ನಗರಗಳ ಕುರಿತು ರಾಷ್ಟ್ರೀಯ ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ನಡೆಸುವ ಸಮೀಕ್ಷೆಯಲ್ಲಿ ಮಂಗಳೂರು ನಗರವನ್ನು ಟಾಪ್ 5ರೊಳಗೆ ಬರುವಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ವರ್ಷದಲ್ಲಿ ರಾಜ್ಯದ ಮೈಸೂರು ಮತ್ತು ದಾವಣಗೆರೆ ನಗರಗಳಿಗೆ ಟಾಪ್ 5ರಲ್ಲಿ ಸ್ಥಾನ ದೊರಕಿದ್ದು, ಅತ್ಯುತ್ತಮ ಪ್ರಶಸ್ತಿಯನ್ನೂ ಪಡೆದುಕೊಂಡಿವೆ. ಅದೇ ರೀತಿ ಈ ವರ್ಷ ಮಂಗಳೂರು ನಗರಕ್ಕೆ ಟಾಪ್ 25ರಲ್ಲಿ ಸ್ಥಾನ ಬಂದಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯಡಿ ನಗರದ ಸ್ವಚ್ಛತೆ ಕಾಪಾಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇಲ್ಲಿ 310ರಿಂದ 330 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ.70ರಷ್ಟನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ಪ್ರತಿ ಶುಕ್ರವಾರ ಒಣ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತಿದೆ. ಹೆಚ್ಚು ತ್ಯಾಜ್ಯ ಉತ್ಪಾದನೆ ಮಾಡುವ ಸಂಸ್ಥೆಗಳೇ ಸ್ವತಃ ತ್ಯಾಜ್ಯವನ್ನು ಸಂಸ್ಕರಣೆ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಸಮರ್ಪಕವಾಗಿ ಕಸ ವಿಂಗಡಣೆ ಮಾಡದೇ ಇರುವವರು ಮತ್ತು ಕಸ ಸಂಸ್ಕರಣೆ ಮಾಡದೇ ಇರುವವರಿಗೆ ಬೆಂಗಳೂರು ಮಾದರಿಯಲ್ಲಿ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಅಗತ್ಯ ಬಿದ್ದರೆ ಪೊಲೀಸರ ನೆರವನ್ನೂ ಪಡೆಯಲು ಸೂಚಿಸಲಾಗಿದೆ ಎಂದು ಬೈರತಿ ಸುರೇಶ್ ಹೇಳಿದರು.
ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡುವ ಸಲುವಾಗಿ ನಗರದಲ್ಲಿ 60ಕ್ಕೂ ಹೆಚ್ಚು ಸೌರಚಾಲಿತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ರೀತಿಯಲ್ಲಿ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಸ್ವಚ್ಛ ನಗರಗಳ ಸಾಲಿನಲ್ಲಿ ಟಾಪ್ 5 ರಲ್ಲಿ ಮಂಗಳೂರನ್ನು ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.