ಜನಸಂದಣಿ ನಿಯಂತ್ರಣ ವಿಧೇಯಕ ಪರಿಶೀಲನೆ | ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ರಚನೆ
ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ.23: 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿಯಂತ್ರಣ) ವಿಧೇಯಕವನ್ನು ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಅನೇಕ ಸದಸ್ಯರ ಕೋರಿಕೆ ಮೇರೆಗೆ ಈ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿಯನ್ನು ನೀಡಲು ಪರಿಶೀಲನಾ ಸಮಿತಿಗೆ ವಹಿಸಲಾಗಿದೆ.
ಸದನದ ನಿರ್ಣಯದಂತೆ ಈ ವಿಧೇಯಕವನ್ನು ಪರಿಶೀಲಿಸಿ, ವರದಿಯನ್ನು ನೀಡಲು ಸ್ಪೀಕರ್ ಯು.ಟಿ.ಖಾದರ್ ಅವರು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ವಿಧಾನಸಭೆ ಸದಸ್ಯರಾದ ರಿಝ್ವಾನ್ ಅರ್ಶದ್, ಎನ್.ಶ್ರೀನಿವಾಸಯ್ಯ. ಡಿ.ರವಿಶಂಕರ್, ಶ್ರೀನಿವಾಸ್ ಮಾನೆ, ಪ್ರಕಾಶ್ ಕೋಳಿವಾಡ್, ಎಚ್.ಡಿ.ತಮ್ಮಯ್ಯ, ವಿ.ಸುನಿಲ್ ಕುಮಾರ್, ಎಸ್.ಆರ್.ವಿಶ್ವನಾಥ್ ಮತ್ತು ಜಿ.ಡಿ.ಹರೀಶ್‍ಗೌಡ ಅವರನ್ನು ಸದಸ್ಯರನ್ನಾಗಿ ನೇಮಿಸಿ, ಸಮಿತಿಯನ್ನು ರಚಿಸಿದ್ದಾರೆ.
ಈ ಸಮಿತಿಯು ವರದಿಯನ್ನು ನೀಡಲು ಮೂರು ತಿಂಗಳ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.