×
Ad

ರಾಜ್ಯದಲ್ಲಿ 7,300 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್

Update: 2025-12-18 13:33 IST

ಕೆ.ಜೆ.ಜಾರ್ಜ್

ಬೆಳಗಾವಿ, ಸುವರ್ಣ ಸೌಧ ಡಿ.18: ಸೋಲಾರ್ ಹಾಗೂ ವಿಂಡ್ ಸೇರಿದಂತೆ ಹೈಬ್ರಿಡ್ ವಿದ್ಯುತ್ ಉತ್ಪಾದನೆಗೆ ಸರಕಾರ ಆದ್ಯತೆ ನೀಡಿದೆ. ಸದ್ಯ ರಾಜ್ಯದಲ್ಲಿ 7,300 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕುಷ್ಠಗಿ ಶಾಸಕ ದೊಡ್ಡನಗೌಡ ಹನಮಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡುತ್ತಿದ್ದರು.

ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ 41 ಯೋಜನೆಗಳ 213 ವಿಂಡ್ ಟರ್ಬೈನ್ ಗಳಿಂದ 433.12 ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾನಗೊಂಡಿವೆ. 2022-23 ರಿಂದ 2025-26 ನವೆಂಬರ್ ಅಂತ್ಯದವರೆಗೆ 1,394 ಮೆಗಾವ್ಯಾಟ್ ಪವನ ವಿದ್ಯುತ್ ಯೋಜನೆಗಳು ಹಂಚಿಕೆಯಾಗಿವೆ. ಇದರಲ್ಲಿ 57 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳು ಅನುಷ್ಠಾನಗೊಂಡಿವೆ. 1337 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಿಗೆ ಬೇಕಾಗಿರುವ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ಮತ್ತು ಅದರ ಪರಿಷ್ಕರಣೆಯನ್ವಯ ಸೆಕ್ಷನ್ 109ರ ಅಡಿಯಲ್ಲಿ ಅವಕಾಶ ಕಲ್ಪಿಸಿದಂತೆ ಸಂಬಂಧಿಸಿದ ಇಲಾಖೆ ಅಥವಾ ಭೂ ಮಾಲೀಕರಿಂದ ಜಮೀನು ಗುತ್ತಿಗೆ ಅಥವಾ ಕ್ರಯಕ್ಕೆ ಪಡೆಯುವುದು ಸಂಬಂದಪಟ್ಟ ಕಂಪೆನಿಗಳದ್ದಾಗಿದೆ. ಇದರಲ್ಲಿ ಸರಕಾರದ ಹಸ್ತಕ್ಷೇಪವಿಲ್ಲ. ವಿಂಡ್ ಟರ್ಬೈನ್ ಅಳವಡಿಸಲು ಖಾಸಗಿ ಕಂಪೆನಿಗಳು ದೊಡ್ಡ ಗಾತ್ರದ ವಾಹನಗಳನ್ನು ಬಳಿಸಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದರೆ, ಸಂಬಂಧಪಟ್ಟ ಕಂಪನಿಗಳು ರಸ್ತೆ ನಿರ್ಮಿಸಿಕೊಡುವಂತೆ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

3 ವರ್ಷದಲ್ಲಿ 400 ಉಪವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಯೋಜನೆ:

ರಾಜ್ಯ ಸರಕಾರ ಈಗಾಗಲೇ 100 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ಹೊಸದಾಗಿ ನಿರ್ಮಿಸಿದೆ. ಮುಂಬರುವ 3 ವರ್ಷದಲ್ಲಿ 400 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಿ, ರಾಜ್ಯದ ಮೂಲೆ ಮೂಲೆಗಳಿಗೂ ವಿದ್ಯುತ್ ಸರಬರಾಜು ಸಂಪರ್ಕ ಜಾಲ ಬಲಪಡಿಸಲಾಗವುದು ಎಂದು ಸಚಿವ ಕೆ.ಜೆ.ಜಾರ್ಜ್ ಇದೇವೇಳೆ ಸ್ಪಷ್ಟಪಡಿಸಿದರು.

ರಾಜ್ಯದ ಎಲ್ಲೆಡೆ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಗೃಹ ಹಾಗೂ ಕೈಗಾರಿಕೆ ಸಂಪರ್ಕಗಳಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡಲಾಗುತ್ತಿದೆ. ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಆಲ್ಲಾಪಟ್ಟಣ ಗ್ರಾಮದಲ್ಲಿ 220/66/ಕೆ.ವಿ. ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ, ಅಲ್ಲಾಪಟ್ಟಣ ಗ್ರಾಮದ ಸರ್ವೇ ನಂ.59ರಲ್ಲಿ 7 ಎಕರೆ 10 ಗುಂಟೆ ಜಮೀನಿನ ಜೊತೆಗೆ ಅವಶ್ಯಕತೆ ಇದ್ದ 2 ಎಕರೆ 30 ಗುಂಟೆ ಜಮೀನು ಮಂಜೂರಾತಿ ಹಾಸನ ಜಿಲ್ಲಾಧಿಕಾರಿ ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ. ಜಮೀನು ಹಸ್ತಾಂತರಗೊಳಿಸಿದ ಕೂಡಲೇ ಟೆಂಡರ್ ಕರೆದು ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಮಂಜು ಎ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಎಂದು ಸಚಿವ ಕೆ.ಜೆ.ಜಾರ್ಜ್ ಉತ್ತರಿಸಿದರು.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಕೋಲಾರ ತಾಲ್ಲೂಕು ತಂಬಿಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಅವರು ಶಾಸಕ ಎಸ್.ಎನ್.ನಾರಾಯಣಸ್ವಾಮಿಯವರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News