2026ರಲ್ಲಿ ಮತ್ತಷ್ಟು ಏರಲಿದೆ ಚಿನ್ನದ ಬೆಲೆ!
► ಚಿನ್ನದ ಸತತ ಏರಿಕೆಗೆ ಕಾರಣವೇನು? ►ಇಂದಿನ ಚಿನ್ನದ ದರವೆಷ್ಟು?
ಪ್ರಪಂಚದಾದ್ಯಂತ ಸರ್ಕಾರಗಳು ಮಾಡಿಕೊಂಡಿರೋ ವಿಪರೀತ ಸಾಲದಿಂದಾಗಿ ಚಿನ್ನದ ಬೆಲೆ ಇನ್ನಷ್ಟು ಏರಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಡೇವಿಡ್ ಟೈಟ್ ಹೇಳಿದ್ದಾರೆ.
ಮದುವೆ, ಹಬ್ಬಗಳು, ಹೂಡಿಕೆ ಮತ್ತು ವೈಯಕ್ತಿಕ ಅಗತ್ಯಗಳಿಗೆ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ನಿರಾಶೆಯಾಗಿದೆ. ಕರ್ನಾಟಕದಲ್ಲಿ ಗುರುವಾರವೂ ಚಿನ್ನದ ಬೆಲೆಗಳು ಏರಿಕೆಯ ಹಾದಿಯಲ್ಲಿ ಮುಂದುವರಿದಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟು?
ಡಿಸೆಂಬರ್ 18 (ಗುರುವಾರ)ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ರೂ 13,484 (+33), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ರೂ 12,360 (+30) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನಕ್ಕೆ ರೂ 10,113 (+25) ಬೆಲೆಗೆ ಏರಿದೆ.
ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ 13,484 ಆಗಿದ್ದು, ಬುಧವಾರದ ರೂ 13,451 ಕ್ಕೆ ಹೋಲಿಸಿದರೆ ರೂ 33ರ ಹೆಚ್ಚಳವಾಗಿದೆ. ಹಾಗೆಯೇ, 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಗುರುವಾರ ರೂ 12,360 ಆಗಿದ್ದು, ಬುಧವಾರದ ರೂ 12,330 ಕ್ಕೆ ಹೋಲಿಸಿದರೆ ರೂ 30ರ ಏರಿಕೆ ಕಂಡುಬಂದಿದೆ. ಗುರುವಾರ ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ರೂ 10,113 ಆಗಿದ್ದು, ಬುಧವಾರದ ರೂ 10,088 ಕ್ಕೆ ಹೋಲಿಸಿದರೆ ರೂ 25ರ ಏರಿಕೆ ಕಂಡುಬರುತ್ತದೆ.
ಚಿನ್ನದ ಸತತ ಏರಿಕೆಗೆ ಕಾರಣವೇನು?
ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ, ರೂಪಾಯಿ ಮೌಲ್ಯದ ಅಸ್ಥಿರತೆ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿವೆ. ಹೀಗಾಗಿ ಚಿನ್ನ ಖರೀದಿ ಅಥವಾ ಹೂಡಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳುವವರು ಹೆಚ್ಚು ಎಚ್ಚರಿಕೆಯಿಂದ ಮುಂದುವರಿಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಮುಂದಿನ ವರ್ಷ ಇನ್ನಷ್ಟು ಏರಿಕೆ ಸಾಧ್ಯತೆ?
ಪ್ರಪಂಚದಾದ್ಯಂತ ಸರ್ಕಾರಗಳು ಮಾಡಿಕೊಂಡಿರುವ ವಿಪರೀತ ಸಾಲದಿಂದಾಗಿ ಚಿನ್ನದ ಬೆಲೆ ಇನ್ನಷ್ಟು ಏರಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಡೇವಿಡ್ ಟೈಟ್ ಹೇಳಿದ್ದಾರೆ. 2026 ರ ಹೊತ್ತಿಗೆ ಬಂಗಾರದ ಬೆಲೆ ಊಹಿಸಲೂ ಆಗದಷ್ಟು ಹೆಚ್ಚಾಗುತ್ತದೆ ಎಂದು ಡೇವಿಡ್ ಟೈಟ್ ಖಚಿತವಾಗಿ ಹೇಳಿದ್ದಾರೆ. ಅವರು ಅದಕ್ಕೆ ಕೆಲವು ಕಾರಣಗಳನ್ನೂ ನೀಡಿದ್ದಾರೆ.
ಮುಖ್ಯವಾಗಿ ಚೀನಾ ದೇಶದಲ್ಲಿ ಚಿನ್ನದ ಮೇಲಿನ ನಿಯಮಗಳನ್ನು ಸಡಿಲ ಮಾಡಿರುವ ಕಾರಣ ಬೆಲೆ ಅತಿಯಾಗಿ ಏರಲಿದೆ. ಪ್ರಪಂಚದ ಹಲವು ದೇಶಗಳ ಕರೆನ್ಸಿ ಮೌಲ್ಯ ಕುಸಿತ ಕಾಣಿಸುತ್ತಿದೆ. ಇದರ ಜೊತೆಗೆ ಯುದ್ಧದ ಭೀತಿ, ಪರಮಾಣು ಬಾಂಬ್ ಬೆದರಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ. ಹೀಗಾಗಿ ಜನರು ತಮ್ಮ ಹಣವನ್ನ ಸುರಕ್ಷಿತವಾಗಿಡಲು ಚಿನ್ನದ ಕಡೆ ಮುಖ ಮಾಡುತ್ತಿದ್ದಾರೆ.
ಮತ್ತೊಂದು ಕಾರಣವೆಂದರೆ ಹಲವು ದೇಶಗಳು ದುಡಿತಕ್ಕಿಂತ ಹೆಚ್ಚು ಖರ್ಚು ಮಾಡುತ್ತಿವೆ. ಬ್ರಿಟನ್‌ನಂತಹ ದೊಡ್ಡ ದೇಶಗಳೇ ಖರ್ಚು ತೂಗಿಸಲು ಕಷ್ಟಪಡುತ್ತಿವೆ. ಸರ್ಕಾರಗಳ ಮೇಲೆ ಸಾಲದ ಹೊರೆ ಇರುವವರೆಗೂ ಚಿನ್ನದ ಬೆಲೆ ಏರುತ್ತಲೇ ಇರುತ್ತದೆ ಎಂದು ಡೇವಿಡ್ ಟೈಟ್ ಅವರು ಹೇಳಿದ್ದಾರೆ.
ಜನಸಾಮಾನ್ಯರು ಮಾತ್ರವಲ್ಲ, ದೊಡ್ಡ ದೇಶಗಳ ರಿಸರ್ವ್ ಬ್ಯಾಂಕ್‌ಗಳು ಕೂಡ ಟನ್ ಗಟ್ಟಲೆ ಚಿನ್ನವನ್ನು ಖರೀದಿಸಿ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿವೆ. ಡಾಲರ್ ಅನ್ನು ನಂಬುವುದು ಕಷ್ಟ ಎಂದು ಗೊತ್ತಾಗಿರುವ ಕಾರಣ ಈ ಬೆಳವಣಿಗೆ ಕಂಡುಬಂದಿದೆ. ಹೀಗಾಗಿ ಚಿನ್ನದ ಬೆಲೆ ಕಡಿಮೆಯಾಗುವ ಸಾಧ್ಯತೆ ಇಲ್ಲ.