ಡಾಬಸ್‍ಪೇಟೆಯಲ್ಲಿ 3,490 ಎಕರೆ ಪ್ರದೇಶದಲ್ಲಿ ʼಕ್ವಿನ್‍ಸಿಟಿʼ ಅಭಿವೃದ್ಧಿ: ಸಚಿವ ಎಂ.ಬಿ.ಪಾಟೀಲ್

Update: 2026-08-21 19:46 IST

ಬೆಂಗಳೂರು : ಡಾಬಸ್‍ಪೇಟೆ ಸಮೀಪ ಕೈಗೆತ್ತಿಕೊಂಡಿರುವ ಕ್ವಿನ್‍ಸಿಟಿ ಯೋಜನೆಯನ್ನು 3,490 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಶುಕ್ರವಾರ ಪರಿಷತ್‍ನ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಕೆ.ಶಿವಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕ್ವಿನ್‍ಸಿಟಿ ಯೋಜನೆಯು ಸರಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ, ನಾವೀನ್ಯತೆ, ಕೈಗಾರಿಕೆ ಮತ್ತು ಸುಸ್ಥಿರ ಜೀವನವನ್ನು ಒಂದೇ ಸಮಗ್ರ ಯೋಜಿತ ಅಭಿವೃದ್ಧಿ ಹಾಗು ಮುಂದಿನ ಪೀಳಿಗೆಯ ನಗರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶ ಹೊಂದಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಡಾಬಸ್‍ಪೇಟೆ ನಡುವಿನ ಪ್ರದೇಶದಲ್ಲಿ ಕಾರ್ಯಗತಗೊಳ್ಳಲಿರುವ ಈ ಯೋಜನೆಯು ಪ್ರತಿಭೆ, ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಗುಣಮಟ್ಟದ ಜೀವನಕ್ಕೆ ಜಾಗತಿಕ ತಾಣವಾಗಿ ಬೆಳೆಯುವ ಗುರಿ ಹೊಂದಿದೆ ಎಂದು ಸಚಿವರು ತಿಳಿಸಿದರು.

ಕ್ವಿನ್ ಸಿಟಿ ಯೋಜನೆಯನ್ನು ಅಭಿವೃದ್ಧಿಪಡಿಸಲು 5 ಹಂತಗಳಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಮುಖಾಂತರ ಗುತ್ತಿಗೆದಾರನ್ನು ನೇಮಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭಿವೃದ್ಧಿ ಕಾಮಗಾರಿಗಳ ಪೂರ್ವ ನಿರ್ಮಾಣ ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್: ಮೈಸೂರಿನಲ್ಲಿ ಕೂಡ ಆಧುನಿಕ ಕೈಗಾರಿಕೆಗಳು ಬರಬೇಕು ಎಂಬ ಸದಸ್ಯ ಕೆ.ಶಿವಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್, ಅಲ್ಲಿನ ವಿಮಾನ ನಿಲ್ದಾಣದ ಸಮೀಪದಲ್ಲಿ ಸುಸಜ್ಜಿತ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಆದರೆ ಅಲ್ಲಿಯ ಸ್ಥಳೀಯರು ತಮ್ಮ ಭೂಮಿಗೆ ಬೆಂಗಳೂರಿನಲ್ಲಿ ಇರುವಷ್ಟೇ ಪರಿಹಾರ ಕೇಳುತ್ತಿದ್ದು, ಇದು ಕಗ್ಗಂಟಾಗಿದೆ. ಇದನ್ನು ಬಗೆಹರಿಸಿಕೊಂಡು ಮುಂದುವರಿಯಲಾಗುವುದು ಎಂದರು.

ನಂಜನಗೂಡಿನ ಬಳಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಜಾಗ ಗುರುತಿಸಲಾಗಿತ್ತು. ರಾಜ್ಯದಲ್ಲೇ ಸಂಶೋಧನೆ ಮತ್ತು ವಿನ್ಯಾಸದ ಜತೆಗೆ ಉತ್ಪಾದನೆ ಕೂಡ ಆಗಬೇಕು. ಆದರೆ, ಉತ್ಪಾದನೆ ಆಧರಿತ ಪ್ರೋತ್ಸಾಹನಾ ಭತ್ಯೆ(ಪಿಎಲ್‍ಐ) ಪಡೆಯಲು ಕಂಪೆನಿಗಳು ಕೇಂದ್ರ ಸರಕಾರವನ್ನು ಕೋರಬೇಕು. ಈ ಹಂತದಲ್ಲಿ ಕೇಂದ್ರ ಸರಕಾರವು ಅಂತಹ ಸಂಸ್ಥೆಗಳಿಗೆ ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಡ ಹೇರುತ್ತಿವೆ. ಇದರ ಹಿಂದೆ ಕೇಂದ್ರದ ರಾಜಕೀಯ ನಿರ್ಧಾರವಿದೆ ಎಂದು ಸಚಿವರು ಹೇಳಿದರು.

14 ಕಂಪೆನಿ, ಸಂಶೋಧನಾ ಸಂಸ್ಥೆಗಳೊಂದಿಗೆ ಒಡಂಬಡಿಕೆ..!

ದೊಡ್ಡಬಳ್ಳಾಪುರ ಮತ್ತು ಡಾಬಸ್ ಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆಲ್ಲ ಅವಕಾಶ ಮಾಡಿಕೊಡದೆ, ಅರ್ಹತೆ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು. ಟೊಯೊಟಾದಂತಹ 8 ಅಗ್ರಗಣ್ಯ ಕಂಪೆನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು(ಒಟ್ಟು 14) ಒಡಂಬಡಿಕೆ ಮಾಡಿಕೊಂಡಿವೆ. ಕೆಲವು ವಿದೇಶಿ ವಿವಿಗಳು ತಮ್ಮ ಅಗತ್ಯಕ್ಕೆ ಹೊಂದುವಂತಹ ಕಟ್ಟಡಗಳನ್ನು ಕೇಳುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಮಾದರಿ ಅಳವಡಿಸಿಕೊಳ್ಳಲಾಗುವುದು ಎಂದು ಬೃಹತ್ ಸಚಿವ ಎಂ.ಬಿ.ಪಾಟೀಲ ಹೇಳಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News