500 ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು 1,750 ಕೋಟಿ ರೂ. ಎಡಿಬಿ ನೆರವು: ಮಹತ್ವದ ಒಪ್ಪಂದಕ್ಕೆ ಸಹಿ

ಭಾರತದ ಶಿಕ್ಷಣ ಕ್ಷೇತ್ರದಲ್ಲೇ ಇದು ಅತಿದೊಡ್ಡ ಆರ್ಥಿಕ ನೆರವು : ಸಚಿವ ಮಧು ಬಂಗಾರಪ್ಪ

Update: 2026-08-21 20:28 IST

ಬೆಂಗಳೂರು : ರಾಜ್ಯದ 500 ಸರಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’(ಕೆಪಿಎಸ್)ಗಳಾಗಿ ಅಭಿವೃದ್ಧಿಪಡಿಸಲು 1,750 ಕೋಟಿ ರೂ.ಗಳ ನೆರವು ಘೋಷಿಸಿರುವ ‘ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್’(ಎಡಿಬಿ) ಮತ್ತು ರಾಜ್ಯ ಸರಕಾರ ಈ ಸಂಬಂಧದ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿವೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಡಿಬಿ ಬ್ಯಾಂಕಿನ ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಇದೇ ವೇಳೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಅಂದರೆ 2029-30ನೇ ಸಾಲಿನ ಒಳಗೆ ರಾಜ್ಯ ಸರಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್ 1,750 ಕೋಟಿ ರೂ.ಗಳ ನೆರವು ನೀಡಲಿದೆ ಎಂದರು.

ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಸಾಮಥ್ರ್ಯ ಹೊಂದಿರುವ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಾಮಥ್ರ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಎಡಿಬಿಯ ನೆರವಿನಿಂದ ಒಟ್ಟು 500 ಕೆಪಿಎಸ್ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.

ಎಡಿಬಿ ಬ್ಯಾಂಕ್ ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ನೀಡುತ್ತಿರುವುದು ಇದೇ ಮೊದಲು. ಅವರು ಈ ನೆರವು ಪ್ರಕಟಿಸುವುದಕ್ಕೂ ಮೊದಲೇ ನಮ್ಮ ಕೆಪಿಎಸ್ ಶಾಲೆಗಳ ಯೋಜನೆ, ಕಾರ್ಯಗತಗೊಳಿಸಲು ನಾವು ತೆಗೆದುಕೊಂಡಿರುವ ಕ್ರಮ, ನಮ್ಮ ಬದ್ಧತೆ ಪರಿಶೀಲಿಸಿದ್ದಾರೆ. ಅಲ್ಲದೆ, ನಾವು ಗುಣಮಟ್ಟದ ಶಿಕ್ಷಣ ನೀಡಲು ತೆಗೆದುಕೊಂಡಿರುವ ಕ್ರಮ ಬ್ಯಾಂಕಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಧು ಬಂಗಾರಪ್ಪ ವಿವರಿಸಿದರು.

ದ್ವಿಭಾಷಾ ಶಿಕ್ಷಣ, ಮಕ್ಕಳ ಹಾಜರಾತಿ ದಾಖಲಿಸಲು ‘ನಿರಂತರ’ ಯೋಜನೆ ಜಾರಿ, ಬೃಹತ್ ಪ್ರಮಾಣದಲ್ಲಿ ಅಂದರೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿರುವುದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ನಿರಂತರವಾಗಿ ನೀಡುತ್ತಿರುವ ತರಬೇತಿ, ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷವಾಗಿ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕ, ಎಐ ಕಲಿಸಲು ನಾವು ನಡೆಸಿರುವ ಸಿದ್ಧತೆ, ವೃತ್ತಿ ಮತ್ತು ಕೌಶಲ ಶಿಕ್ಷಣ, ಗ್ರಾಮೀಣ ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಮ್ಮ ಯೋಜನೆ ಎಲ್ಲವೂ ಈ ಮಹತ್ವದ ಒಪ್ಪಂದ ಏರ್ಪಡಲು ಕಾರಣವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಈಗಾಗಲೇ ನಾವು 100 ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದೇವೆ. ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸುವ ಶಾಲೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ ಸಚಿವರು, ಸ್ಪಷ್ಟ ಮಾನದಂಡಗಳನ್ನು ಇಟ್ಟುಕೊಂಡು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಈಗಾಗಲೇ ಶೇ.15ರಷ್ಟು ಅಂದರೆ 262 ಕೋಟಿ ರೂ.ಗಳನ್ನು ಎಡಿಬಿ ಬ್ಯಾಂಕ್ ನೆರವು ನೀಡಿದೆ. 2026-27ನೇ ಸಾಲಿನಲ್ಲಿ 358 ಕೋಟಿ ನೆರವು ನೀಡಲಿದೆ. 2027-28ನೇ ಸಾಲಿನಲ್ಲಿ 385 ಕೋಟಿ ರೂ. ಹಾಗೂ 2028-29 ಸಾಲಿನಲ್ಲಿ 376 ಕೋಟಿ ರೂ. ಮತ್ತು 2029-30 ನೇ ಸಾಲಿನಲ್ಲಿ 367 ಕೋಟಿ ರೂ. ನೆರವು ನೀಡಲಿದೆ ಎಂದು ಮಧು ಬಂಗಾರಪ್ಪ ವಿವರಿಸಿದರು.

ಅಧಿಕಾರಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್‍ನ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ, ಎಡಿಬಿಯ ಪ್ರಿನ್ಸಿಪಲ್ ಪೋಟ್ರ್ಫೋಲಿಯೊ ಮ್ಯಾನೇಜ್ಮೆಂಟ್ ಸ್ಪೆಷಲಿಸ್ಟ್ ಕೈ ವೇಯ್ ಯಿಯೋ, ಎಡಿಬಿ ಬ್ಯಾಂಕಿನ ಹಿರಿಯ ಪ್ರಾಜೆಕ್ಟ್ ಆಫೀಸರ್(ಶಿಕ್ಷಣ) ಪೂನಂ ಎಸ್. ಭಾಂಬ್ರಿ, ಎಡಿಬಿಯ ಪ್ರಿನ್ಸಿಪಲ್ ಕಮ್ಯುನಿಕೇಷನ್ಸ್ ಆಫೀಸರ್ ರಾಜೇಶ್ ಕುಮಾರ್ ಡಿಯೋಲ್, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಪೂರ್ಣಿಮಾ ಪ್ರಸಾದ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್, ಆರ್ಥಿಕ ವ್ಯವಹಾರಗಳ ಇಲಾಖೆ ಉಪಕಾರ್ಯದರ್ಶಿ ಸೌರಭ್ ಸಿಂಗ್, ಎಡಿಬಿ ಬ್ಯಾಂಕಿನ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News