×
Ad

ಮೊದಲ ಹಂತದಲ್ಲಿ 10 ರಿಂದ 14 ಮಂದಿ ಸಚಿವರ ಪದಗ್ರಹಣ?; ಜೂ.18ರ ವರೆಗೆ ಖಾತೆ ಹಂಚಿಕೆ ಅನುಮಾನ

Update: 2026-06-02 21:02 IST

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಅವರೊಂದಿಗೆ ಒಬ್ಬ ಉಪಮುಖ್ಯಮಂತ್ರಿ ಸೇರಿದಂತೆ ಸಂಪುಟ ದರ್ಜೆ ಸಚಿವರಾಗಿ 10 ರಿಂದ 14 ಮಂದಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಜೂ.18ರಂದು ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆನಂತರ ಸಂಪುಟ ಸೇರ್ಪಡೆಯಾಗುವವರ ಎರಡನೆ ಪಟ್ಟಿಯನ್ನು ಪ್ರಕಟ ಮಾಡುವ ಸಾಧ್ಯತೆಗಳಿವೆ. ಅಲ್ಲಿಯವರೆಗೆ ಯಾವುದೇ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಹೊಸದಿಲ್ಲಿಯಲ್ಲಿ ಮಂಗಳವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದರ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಡಾ.ಜಿ.ಪರಮೇಶ್ವರ್ ‘ಡಿಸಿಎಂ’?: ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಡಾ.ಜಿ. ಪರಮೇಶ್ವರ್ ಒಬ್ಬರಿಗೆ ಮಾತ್ರ ಉಪ ಮುಖ್ಯಮಂತ್ರಿ(ಡಿಸಿಎಂ) ಹುದ್ದೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನುಳಿದಂತೆ ಮೊದಲ ಹಂತದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್ ಅಥವಾ ಎನ್.ಚಲುವರಾಯಸ್ವಾಮಿ, ಕೆ.ಎಚ್. ಮುನಿಯಪ್ಪ ಅಥವಾ ರೂಪಕಲಾ ಶಶಿಧರ್, ಬೈರತಿ ಸುರೇಶ್, ಎಂ.ಬಿ.ಪಾಟೀಲ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

ವಯೋಮಿತಿ ಸೂತ್ರ: ಸಚಿವ ಸಂಪುಟದಲ್ಲಿ ಯುವಕರು ಹಾಗೂ ಹಿರಿಯ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು, ವಯೋಮಿತಿ ಸೂತ್ರ ಅನುಸರಿಸುವಂತೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಡಿಯಲ್ಲಿ ಸಂಪುಟದಲ್ಲಿ 40 ವರ್ಷದೊಳಗಿನ 10 ಮಂದಿ ಯುವ ಶಾಸಕರಿಗೆ ಹಾಗೂ 40 ರಿಂದ 65 ವರ್ಷದ ವಯೋಮಾನದ ಹಿರಿಯ ಹಾಗೂ ಅನುಭವಿ ಶಾಸಕರಿಗೆ 20 ಸ್ಥಾನಗಳನ್ನು ನೀಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಹೈಕಮಾಂಡ್‍ನ ಈ ವಯೋಮಿತಿ ಸೂತ್ರವು ಅನೇಕ ಸಚಿವ ಆಕಾಂಕ್ಷಿಗಳಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ.

ಜಾತಿ ಸಮೀಕರಣಕ್ಕೆ ಆದ್ಯತೆ: ಸಚಿವ ಸಂಪುಟ ರಚನೆಯಲ್ಲಿ ಜಾತಿ ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಸ್‍ಸಿ, ಎಸ್‍ಟಿ, ಒಕ್ಕಲಿಗ, ಲಿಂಗಾಯತ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುವ ಬಗ್ಗೆ ಕಾಂಗ್ರೆಸ್ ವರಿಷ್ಠ ನಾಯಕರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆ ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ. ಉಭಯ ನಾಯಕರು ತಮ್ಮ ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲು ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್ ಮುಂದೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.

ಲೋಕಭವನಕ್ಕೆ ಪಟ್ಟಿ ರವಾನೆ : ನೂತನ ಸಂಪುಟ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಮಂಗಳವಾರ ರಾತ್ರಿ ಅಥವಾ ಬುಧವಾರ (ಜೂ.3) ಬೆಳಗ್ಗೆ ಲೋಕಭವನಕ್ಕೆ ರವಾನೆ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಭವನೀಯ ಸಚಿವರು : ಡಾ.ಜಿ.ಪರಮೇಶ್ವರ್, ಡಾ.ಯತೀಂದ್ರ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್ ಅಥವಾ ಎನ್.ಚಲುವರಾಯ ಸ್ವಾಮಿ, ಕೆ.ಎಚ್.ಮುನಿಯಪ್ಪ ಅಥವಾ ರೂಪಕಲಾ ಶಶಿಧರ್, ಬೈರತಿ ಸುರೇಶ್, ಎಂ.ಬಿ.ಪಾಟೀಲ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News